ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಉದಯ್ ಶೇರುಗಾರ್ ಅವರ ಮೇಲೆ ಕೊಲ್ಲೂರಿನ ದಳಿ ಎಂಬಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ, ನಗದು ದೋಚಿ ಪರಾರಿಯಾಗಿದ್ದ ದುಷ್ಕರ್ಮಿಗಳ ಪೈಕಿ ಈರ್ವರನ್ನು ಅದೇ ದಿನ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಬೈಕಿನಲ್ಲಿ ಕೊಲ್ಲೂರಿನಿಂದ ಸುಬ್ಬರಸನ ತೊಪ್ಲುವಿನ ಮನೆಗೆ ತೆರಳುತ್ತಿದ್ದ ಉದಯ ಶೇರುಗಾರ್ ಅವರನ್ನು ಕೊಲ್ಲೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯ ದಳಿಯ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ತಂಡವೊಂದು ಅಡ್ಡಗಟ್ಟಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಳಿಕ ಉದಯ್ ಅವರ ಬೈಕ್ ಕೀ, ಸುಮಾರು ರೂ.8 ಸಾವಿರ ಬೆಲೆಯ ಮೊಬೈಲ್ ಮತ್ತು ನಗದು ಒಂದು ಸಾವಿರ ಕಸಿದುಕೊಂಡಿದ್ದ ದಷ್ಕರ್ಮಿಗಳು ಅದೇ ಮಾರ್ಗದಲ್ಲಿ ಬಂದ ಜೀಪನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಕೊಲ್ಲೂರು ಪೊಲೀಸರು ವೃತ್ತ ನಿರೀಕ್ಷಕ ರಾಘವ ಪಡೀಲ್ ಮಾರ್ಗದರ್ಶನಲ್ಲಿ ಕೊಲ್ಲೂರು ಠಾಣಾಧಿಕಾರಿ ಶೇಖರ್ ಹಾಗೂ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಗುರುವಾರ ತಡರಾತ್ರಿ ಕಾರು ಸಹಿತ ಮೋಹನ್ ಕುಮಾರ್ (28) ಹಾಗೂ ನರೇಂದ್ರಬಾಬು(28) ಎಂಬುವವರನ್ನು ಬಂಧಿಸಿದ್ದಾರೆ. ಈ ನಡುವೆ ಉದಯ್ ಶೇರುಗಾರರ ಹತ್ಯೆಗೆ ಸುಪಾರಿ ನೀಡಲಾಗಿತ್ತೆಂಬ ಮಾತುಗಳು ಕೇಳಿ ಬರುತ್ತಿದ್ದು, ತನಿಖೆಯಿಂದ ಸತ್ಯ ಬೆಳಕಿಗೆ ಬರಬೇಕಿದೆ. ಉಳಿದ ಆರು ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.
ಬಿಎಂಎಸ್ ಖಂಡನೆ:
ಬಿಜೆಪಿ ಕಾರ್ಯಕರ್ತ ಉದಯ ಶೇರುಗಾರ್ ಅವರ ಮೇಲಿನ ಹಲ್ಲೆಯನ್ನು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ ಖಂಡಿಸಿದ್ದು, ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಈ ಕೃತ್ಯದ ಹಿಂದಿರುವವರನ್ನು ಪತ್ತೆಮಾಡುವಂತೆ ಒತ್ತಾಯಿಸಿದ್ದಾರೆ.










