ನ್ಯೂಜಿಲ್ಯಾಂಡ್ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಗೆ ವಿಶ್ವನಾಥ್
ಮಲೇಷ್ಯಾ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಗುರುರಾಜ್
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ ಹೆಮ್ಮೆಯ ಕುವರರು ಕ್ರೀಡಾಕ್ಷೇತ್ರದಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿ ನಮ್ಮೂರಿಗೆ ಹೆಮ್ಮೆ ತಂದಿದ್ದ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಈ ಭಾರಿ ನ್ಯೂಜಿಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಗೆ ಆಯ್ಕೆಯಾಗಿದ್ದರೇ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಂಡ್ಸೆ ಜಡ್ಡುವಿನ ಗುರುರಾಜ್ ಮಲೇಷ್ಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿ ತಮ್ಮ ಸಾಮಥ್ಯ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದಾರೆ.
ಕಷ್ಟಗಳೊಂದಿಗೆ ಸೆಣಸಿದ ಹೆಮ್ಮೆಯ ಕ್ರೀಡಾಪಟು ವಿಶ್ವನಾಥ ಗಾಣಿಗ:
ಬೇಕರಿಯಲ್ಲಿ ಕೆಲಸ ಮಾಡುತ್ತಾ, ಮರದ ದಿಮ್ಮಿಗಳನ್ನು ಲಾರಿಗಳಿಗೆ ತುಂಬುತ್ತಾ ಕುಟುಂಬದ ಆರ್ಥಿಕ ಸಂಕಷ್ಟ ನೀಗಿಸುತ್ತಿದ್ದ ವಿಶ್ವನಾಥ ಗಾಣಿಗ ಇಂದು ನಮ್ಮ ನಡುವಿನ ಹೆಮ್ಮೆಯ ಕ್ರೀಡಾಪಟು. ತನ್ನ ಕೆಲಸ ಓದಿನ ನಡುವೆಯೇ ಕ್ರೀಡಾಪಟುವಾಗಬೇಕೆಂಬ ಅದಮ್ಯ ತುಡಿತಕ್ಕೆ ತಕ್ಕಂತೆ ಹಾಕಿದ ಶ್ರಮವೇ ಇಂದು ಕ್ರೀಡಾ ಲೋಕದಲ್ಲಿ ಮಿನುಗುವಂತೆ ಮಾಡಿದೆ.
ತಾಲೂಕಿನ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿಗಳ ಪುತ್ರರಾದ ವಿಶ್ವನಾಥ್, ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಲೇ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ತನ್ನ ಕಾಲೇಜು ದಿನಗಳಿಂದಲೇ ಪವರ್‌ಲಿಫ್ಟಿಂಗ್ ಹಾಗೂ ಇನ್ನತರ ಕ್ರೀಡೆಯಲ್ಲಿ ಸಾಧನೆಗೈಯುತ್ತಲೇ ಬಂದಿದ್ದ ವಿಶ್ವನಾಥ್ ಅವರು ಪವರ್ ಲಿಫ್ಟಿಂಗ್‌ನಲ್ಲಿ ೩೨೦ಕೆ.ಜಿ ಭಾರಎತ್ತುವ ಮೂಲಕ ರಾಜ್ಯದಲ್ಲಿ ದಾಖಲೆ ಬರೆದಿದ್ದರು. ಈವರೆಗೆ ರಾಷ್ಟ್ರಮಟ್ಟದಲ್ಲಿ ೧೨ಚಿನ್ನ, ೪ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಒಟ್ಟು 60ಕ್ಕೂ ಹೆಚ್ಚು ಪದಕಗೆದ್ದಿದ್ದಾರೆ. ಇತ್ತಿಚಿಗೆ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 1ಬೆಳ್ಳಿ ಹಾಗೂ 1ಕಂಚಿಗೆದ್ದಿದ್ದ ಅವರು ಎರಡನೇ ಭಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಧಿಸುತ್ತಿದ್ದಾರೆ.
ಡಿಸೆಂಬರ್ 4ರಿಂದ 10ರ ವರೆಗೆ ನ್ಯೂಜಿಲ್ಯಾಂಡಿನ್ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿರುವ ಏಷ್ಯಾ ಒಷ್ಯಾನಿಯಾ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಕ್ರೀಡಾಕ್ಷೇತ್ರದ ಹೊಸ ಭರವಸೆ ಗುರುರಾಜ್ ಪೂಜಾರಿ
ಬಾಲ್ಯದಿಂದಲೇ ಕ್ರೀಡೆಯಲ್ಲಿನ ಅದಮ್ಯ ಆಸಕ್ತಿ. ಬಿಡದೇ ಸಾಧಿಸುವ ಛಲ. ಬಡತನದ ನಡುವೆಯೂ ಮಗನ ಆಸಕ್ತಿಗೆ ನೀರೆರೆದು ಪೋಷಿಸಿದ ಪೋಷಕರು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಗುರುಗಳು. ಇವೆಲ್ಲದರ ಫಲವಾಗಿ ಗುರುರಾಜ್ ಎಂಬ ಕ್ರೀಡಾ ಸಾಧಕ ಇಂದು ಸದ್ದಿಲ್ಲದೇ ಸಾಧನೆಗೈಯುತ್ತಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಅಸ್ಸಾಂನ ಗುವಾಹಟಿಯಲ್ಲಿ ಜರುಗಿದ 12ನೇ ಸೌತ್ ಏಷ್ಯನ್ ಗೇಮ್ಸ್ ೫೬ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟದ ಸಾಧನೆ ಮಾಡಿದ್ದ ಗುರುರಾಜ್, ಈ ಭಾರಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ತಾಲೂಕಿನ ವಂಡ್ಸೆ ಜಡ್ಡುವಿನ ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಪುತ್ರರಾದ ಗುರುರಾಜ್ ಅವರಿಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರ್ವೆಸ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಗುರುರಾಜ್‌ಗೆ ಸುಕೇಶ್ ಶೆಟ್ಟಿ ಸೂಕ್ತ ತರಬೇತಿ ನೀಡಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ಮುಂದೆ ಪದವಿ ವ್ಯಾಸಂಗಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ಗುರುರಾಜ್ ಬದುಕಿಗೊಂದು ತಿರುವು ದೊರೆತಿತ್ತು. ಈ ಅವಧಿಯಲ್ಲಿ ಎಂ.ರಾಜೇಂದ್ರ ಪ್ರಸಾದ್ ವೇಯ್ಡ್ ಲಿಫ್ಟಿಂಗ್ ತರಬೇತಿ ನೀಡಿ ಕ್ರೀಡಾಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಗುರುರಾಜ್ ಎಸ್.ಡಿ.ಎಂ ಕ್ರೀಡಾತರಬೇತಿ ಸಂಸ್ಥೆಯ ಮೂಲಕ ನಿರಂತರವಾಗಿ ತರಬೇತಿ ಪಡೆದರು. ಅಲ್ಲಿಂದೀಚೆಗೆ ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈಯುತ್ತಲೇ ಬಂದಿರುವ ಗುರುರಾಜ್ ಅಕ್ಟೊಬರ್ ೨೫ರಂದು ಮಲೇಷ್ಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಕ್ರೀಡಾ ಸಾಧಕರಿಗೆ ನೈತಿಕ ಸ್ಥೈರ್ಯದೊಂದಿಗೆ ಬೇಕಿದೆ ಆರ್ಥಿಕ ಬೆಂಬಲ:
ನ್ಯೂಜಿಲ್ಯಾಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ವಿಶ್ವನಾಥ್‌ಗೆ ಕ್ರೀಡಾಸಕ್ತರ ಸಹಕಾರ ಅಗತ್ಯವಾಗಿ ಬೇಕಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಅವರಿಗೆ ನ್ಯೂಜಿಲ್ಯಾಂಡ್‌ಗೆ ತೆರಳಲು ಬೇಕಾದ ೩ ಲಕ್ಷ ರೂ. ಮೊತ್ತವನ್ನು ಭರಿಸುವುದು ಕಷ್ಟಸಾಧ್ಯವೇ ಸರಿ. ಇನ್ನು ಗುರುರಾಜ್ ಅವರಿಗೆ ಕ್ರೀಡೆಯಲ್ಲಿ ಭಾಗವಹಿಸಲು ಫೆಡರೇಷನ್‌ನಿಂದ ನೆರವು ದೊರೆಯುತ್ತಾದರೂ ಪ್ರತಿನಿತ್ಯದ ತಾಲಿಮು ಮುಂತಾದವುಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಈರ್ವರೂ ಗೆದ್ದು ಬನ್ನಿ