ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕರಾವಳಿಯ ಸಮೃದ್ಧ ಕಲೆ ಯಕ್ಷಗಾನ ವಿಶ್ವಮಾನ್ಯವಾಗಿರುವ ಹೊತ್ತಿನಲ್ಲಿ ಕಲೆಯ ಬೇರು ನೆಲೆಯೂರಿರುವು ಕುಂದಾಪುರದ ನೆಲದಲ್ಲಿಯೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ದೊರೆಯದ ಸ್ಥಿತಿ ಬಂದೊದಗಿದ್ದು ಬಡಗುತಿಟ್ಟು ಯಕ್ಷಗಾನದ ಹೆಬ್ಬಾಗಿಲನ್ನೇ ಮುಚ್ಚುವ ಹುನ್ನಾರ ನಡೆದಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣದಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆಯಾವುದೆಂಬ ನೆವವನ್ನಿಟ್ಟುಕೊಂಡು ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ನೂರಾರು ವರ್ಷಗಳ ಇತಿಹಾಸವುಳ್ಳ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವುದು ಯಕ್ಷಗಾನ ಸಂಘಟಕರು, ಕಲಾವಿದರು, ಅಭಿಮಾನಿಗಳು ಹಾಗೂ ಅದನ್ನೇ ನಂಬಿ ಬದುಕು ಸವೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಕಂಗೆಡಿಸಿದೆ.
ಇಷ್ಟರಲ್ಲಾಗಲೇ ನೆಹರೂ ಮೈದಾನದಲ್ಲಿ ರಂಗುರಂಗಿನ ರಂಗ ಮಂಟಪ ಕಾಣಬೇಕಿತ್ತು. ಒಂದೇ ಒಂದು ಆಟ ನೋಡಲು ಮರೆಯದಿರಿ ಎಂಬ ಪ್ರಚಾರದ ಸದ್ದು ಕೇಳಬೇಕಿತ್ತು. ರಾಗ, ಚಂಡೆ, ಮದ್ದಳೆ, ತಾಳಗಳ ಹಿಮ್ಮೇಳಕ್ಕೆ, ಮೊಮ್ಮೇಳದ ಒಡ್ಡೋಲಗ ನಡೆಬೇಕಿತ್ತು. ಆದರೆ ಅನುಮತಿಯ ನಿರಾಕರಣೆ ಎಲ್ಲವನ್ನೂ ಕಳೆಗುಂದಿಸಿದೆ. ಯಕ್ಷಗಾನ ಪ್ರದರ್ಶನಕ್ಕೆ ಅಣಿಯಾದವರು ಮಾತ್ರ ಅವಕಾಶ ದೊರೆಯಬಹುದೆಂಬ ಭರವಸೆಯಿಂದ ಕಾದು ಕುಳಿತಿದ್ದಾರೆ.
ಪ್ರದರ್ಶನಕ್ಕೆ ಅವಕಾಶ ಏಕಿಲ್ಲ?
ಕುಂದಾಪುರದ ನೆಹರೂ ಮೈದಾನ ಬಳಿ ಇರುವ ಹಿಂದುಳಿದ ವರ್ಗದ ಹಾಸ್ಟೆಲ್, ಆಶ್ರಮ ಶಾಲೆ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಹಾಗೂ ಭಾನುವಾರ ಕಾರ್ಯಕ್ರಮ ಆಯೋಜಿಸುವುದರಿಂದ ತೊಂದರೆ ಆಗಿತ್ತದೆ ಹಾಗೂ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ನೆಹರೂ ಮೈದಾನದ ಸ್ವಚ್ಛತೆ ಹಾಳಾಗುತ್ತದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಿಧಾನ ಪರಿಷತ್ ಅರ್ಜಿ ಸಮಿತಿಯ ಮುಂದೆ ಪ್ರಸ್ತಾಪವಿಟ್ಟಿದ್ದರು. ಮಾರ್ಚ್ ತಿಂಗಳಿನಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಜಿಲ್ಲಾಧಿಕಾರಿಗಳ ಮುಂದೆ ಪ್ರಸ್ತಾಪವಿಟ್ಟಾಗ ಅಂದಿನ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಅಂದಿನ ತಹಶೀಲ್ದಾರರಾಗಿದ್ದ ಗಾಯತ್ರಿ ನಾಯಕ್ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ನವೆಂಬರ್ ತನಕವೂ ತಹಶೀಲ್ದಾರ ಕಛೇರಿಯಲ್ಲಿಯೇ ವರದಿ ಧೂಳು ತಿನ್ನುತ್ತಿತ್ತು. ತನಿಕೆಯ ಕಾರಣವನ್ನಿಟ್ಟುಕೊಂಡು ತಾಲೂಕು ಆಡಳಿತ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಇತ್ತ ಯಕ್ಷಗಾನ ಸಂಘಟಕರು ಸ್ಚಚ್ಛತೆಗೆ ಮುಂಗಡ ಹಣ ನೀಡಲು ಸಿದ್ಧರಿದ್ದೇವೆ. ಪರಿಸರದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರೂ, ಕುಂದಾಪುರ ತಹಸೀಲ್ದಾರ್ ಜಿ.ಎಂ.ಬೋರ್ಕರ್ ಅರ್ಜಿ ಸಮಿತಿಯ ಒಪ್ಪಿಗೆ ದೊರೆಯದೇ ಪ್ರದರ್ಶನಕ್ಕೆ ಅನುಮತಿ ನೀಡುವುದು ಅಸಾಧ್ಯ ಎನ್ನುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ವತಃ ಅನುಮತಿ ನೀಡುವಂತೆ ಪತ್ರ ಬರೆದಿದ್ದರೂ ಅದಕ್ಕೂ ಕಿಮ್ಮತ್ತಿಲ್ಲದಂತಾಗಿದೆ.
ಯಕ್ಷಗಾನ ಪ್ರದರ್ಶನಕ್ಕೂ ಇದೆ ನೂರಾರು ವರ್ಷದ ಇತಿಹಾಸ:
ಕುಂದಾಪುರದ ನೆಹರೂ ಮೈದಾನದ ಸುತ್ತಮುತ್ತ ಇರುವ ಸಂಸ್ಥೆಗಳು ಹುಟ್ಟಿಕೊಳ್ಳುವ ಮೊದಲೇ ಇಲ್ಲಿ ಯಕ್ಷಗಾನ ಪ್ರದರ್ಶನ ಕಾಣುತ್ತಿತ್ತು. ಯಕ್ಷಗಾನ ಮೇಳಗಳೀಗೂ ಈ ಮೈದಾನಕ್ಕೂ ಒಂದು ಭಾವನಾತ್ಮಕ ಬೆಸುಗೆ ಇದೆ. ಇದರ ಜೊತೆ ಜೊತೆಗೆ ಕುಂದಾಪುರದ ಯಕ್ಷ ಪ್ರೇಕ್ಷಕರಿಂದ ಪಡೆಯುವ ವಿಮರ್ಷೆಯ ಮೇಲೆಯೇ ಪ್ರಸಂಗ ಸೋಲು-ಗೆಲುವು ಓರೆಗೆ ಹಚ್ಚುವ ರೂಡಿಯೂ ನಡೆದು ಬಂದಿದೆ. ಕುಂದಾಪುರ ಯಕ್ಷ ಪ್ರಿಯರಿಂದ ಮೆಚ್ಚುಗೆ ಸಿಕ್ಕಿತೆಂದರೆ ಮುಂದಿನ ಪ್ರದರ್ಶನವಂತೂ ಯಶಸ್ವಿಯಾಯಿತೆಂದೇ ಅರ್ಥ.
ಯಕ್ಷಗಾನದಲ್ಲಿ ದಾಖಲೆ ಪ್ರದರ್ಶನ ಕಂಡ ರತಿರೇಖಾ, ಭಾಗ್ಯಭಾರತಿ, ನಾಗಶ್ರೀ, ಶ್ರೀ ಕೃಷ್ಣ ಸಂಧಾನ ಮುಂತಾದ ಪ್ರಸಂಗಗಳು ಯಶಸ್ವಿ ಪ್ರಸಂಗಗಳು ಯಶಸ್ಸಿನ ಹಸಿರು ನಿಶಾನೆ ಕಂಡುಕೊಂಡಿದ್ದು ಇದೇ ನೆಲದಲ್ಲಿ. ಐದಾರು ತಿಂಗಳಿನಲ್ಲಿ ಹತ್ತಾರು ಮೇಳಕ್ಕೆ ನೂರಾರು ಕಲಾವಿದರಿಗೆ ಅನ್ನನೀಡುತ್ತಿದ್ದ ನೆಹರೂ ಮೈದಾನ ಯಕ್ಷಗಾನದಿಂದ ದೂರವಾಗುತ್ತಿರುವುದು ಯಕ್ಷ ಪ್ರಿಯರಲ್ಲಿ ಆತಂಕ ಹುಟ್ಟುಹಾಕಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಬದಲಿ ಜಾಗ ಬೇಡ:
ಯಕ್ಷಗಾನ ಪ್ರದರ್ಶನಕ್ಕೆ ನೆಹರೂ ಮೈದಾನವೇ ಆಗಬೇಕು ಎಂದು ಯಕ್ಷಗಾನ ಸಂಘಟಕರು ಹಾಗೂ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಧಿಕಾರಿಗಳು ಸೂಚಿಸುವ ಸಂಗಮ, ಕೋಡಿ ಪರಿಸರದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಪೂರಕವಾದ ವ್ಯವಸ್ಥೆಯಿಲ್ಲ. ದೂರದ ಸಾಗರ, ಹೊಸನಗರ, ಸಿದ್ಧಾಪುರ, ಕುಮಟಾ ಮುಂತಾದೆಡೆಗಳಿಂದ ಪ್ರೇಕ್ಷಕರು ಬರುವುದರಿಂದ ಎಲ್ಲರಿಗೂ ಆ ಸ್ಥಳ ಅನಾನುಕೂಲವಾಗಲಿದೆ ಎನ್ನಲಾಗುತ್ತಿದೆ. ನೆಹರೂ ಮೈದಾನದ ಪಕ್ಕದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂಬುದರಲ್ಲಿ ಹುರುಳಿಲ್ಲ. ಹೆಚ್ಚಾಗಿ ಎಲ್ಲಾ ಮೇಳಗಳು ಶನಿವಾರ ತಪ್ಪಿದಲ್ಲಿ ಭಾನುವಾರ ಪ್ರದರ್ಶನ ಕಾಣುತ್ತವೆ. ಆ ಸಮಯದಲ್ಲಿ ಬಹುಪಾಲು ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳುತ್ತಾರೆ. ಅಂತಹದರಲ್ಲಿ ತೊಂದರೆ ಆಗುವುದಾದರೂ ಯಾರಿಗೆ ಎಂಬ ಯಕ್ಷಪ್ರಶ್ನೆ ಅಭಿಮಾನಿಗಳದ್ದು. ಸ್ವಚ್ಚತೆಗೆ ತೊಂದರೆ ಆಗುತ್ತದೆ ಎಂದಾದರೆ ಸಮೀಪದ ಗಾಂಧಿ ಪಾರ್ಕಿನಲ್ಲಿರುವ ಶೌಚಾಲಯ ಬಳಸಿಕೊಳ್ಳುಲು ಅವಕಾಶ ನೀಡಿ, ಸ್ವಚ್ಛತೆಯ ಜವಾಬ್ದಾರಿಯನ್ನೂ ನಾವೇ ಹೊತ್ತುಕೊಳ್ಳುತ್ತೇವೆ ಎಂದು ಸಂಘಟಕರೂ ಸ್ಪಷ್ಟವಾಗಿ ಹೇಳುತ್ತಿದ್ದರೂ ಕುಂಟು ನೆಪವನ್ನು ಹೇಳಿ ಅನುಮತಿ ನಿರಾಕರಿಸಲಾಗುತ್ತಿದೆ. ಈ ನಡುವೆ ಕುಂದಾಪುರ ನೆಹರೂ ಮೈದಾನವನ್ನು ಸಾಂಸ್ಕೃತಿಕ ಚಟುವಟಿಕೆಗಳಿಗೇ ಮೀಸಲಿಟ್ಟು ಯಕ್ಷಗಾನಕ್ಕೆ ಅವಕಾಶ ಕೊಡ ಎಂದು ಯಕ್ಷಪ್ರಿಯರು ಆಗ್ರಹಿಸುತ್ತಿದ್ದಾರೆ. © ಕುಂದಾಪ್ರ ಡಾಟ್ ಕಾಂ .
- [quote font_size=”15″ bgcolor=”#ffffff” bcolor=”#dd0000″ arrow=”yes”]ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೂ ನೂರಾರು ವರ್ಷಗಳ ಇತಿಹಾಸ ಇರುವಾಗ ಒಮ್ಮೆಲೆ ನೆಪವನ್ನಿಟ್ಟುಕೊಂಡು ಅವಕಾಶ ನೀಡದಿರುವುದು ಸರಿಯಲ್ಲ. ಜನವರಿ ತಿಂಗಳಿನಲ್ಲಿ ಆಕ್ಷೇಪ ಬಂದಿದ್ದರೂ ಅದನ್ನು ಅಂದಿನ ತಹಶೀಲ್ದಾರರು ಬದಿಗಿರಿಸಿದ್ದರು. ಈಗಿನ ತಹಶೀಲ್ದಾರರ ಬಳಿ ಅವಕಾಶ ಮಾಡಿಕೊಡುವಂತೆ ಯಕ್ಷಗಾನ ಅಭಿಮಾನಿಗಳು ಒಟ್ಟಾಗಿ ಒತ್ತಡ ಹಾಕುವ ಮೂಲಕ ಅವಕಾಶಕ್ಕೆ ಪ್ರಯತ್ನಿಸಲಾಗಿತ್ತದೆ. ಯಕ್ಷಗಾನ ಪ್ರದರ್ಶನದಿಂದ ಸುತ್ತಮುತ್ತ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ. ಯಕ್ಷ ಅಭಿಮಾನಿಗಳೊಂದಿಗೆ ಈ ಬಗ್ಗೆ ಭಾನುವಾರ ಚರ್ಚೆಸಲಾಗುತ್ತಿದೆ.
ರಾಮಕೃಷ್ಣ ಹೇರ್ಳೆ ಪತ್ರಕರ್ತರು, ಯಕ್ಷಗಾನ ಅಭಿಮಾನಿ ಕುಂಭಾಶಿ.[/quote]
- [quote font_size=”15″ bgcolor=”#ffffff” bcolor=”#001f87″ arrow=”yes”]ಯಕ್ಷಗಾನ ಹಾಗೂ ಸಾಂಸ್ಕೃತಿಕ ಪ್ರದರ್ಶನಕ್ಕೆ ನೆಹರೂ ಮೈದಾನ ಕಾದಿರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕುಂದಾಪುರ ತಹಸೀಲ್ದಾರ್‌ಗೆ ನೆಹರೂ ಮೈದಾನ ಯಕ್ಷಗಾನ ಪ್ರದರ್ಶನಕ್ಕೆ ಕೊಡುವಂತೆ ಸೂಚಿಸಿದ್ದರೂ, ಅರ್ಜಿ ಸಮಿತಿ ಒಪ್ಪಿಗೆ ಇಲ್ಲದೆ ನೆಹರೂ ಮೈದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ತಹಸೀಲ್ದಾರ್. ನೆಹರೂ ಮೈದಾನ ಸಾಂಸ್ಕೃತಿ ಪ್ರದರ್ಶನಕ್ಕೆ ಕಾದಿರಿಸುವಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಒತ್ತಡ ಹಾಕಲಾಗುತ್ತದೆ. ಗಾಂಧಿ ಮೈದಾನ ಗಲೀಜು ಮಾಡದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೇ ಹೊರತು ಪ್ರದರ್ಶನ ನಿಲ್ಲಿಸುವುದು ಸರಿಯಲ್ಲ. ಯಕ್ಷಗಾನಾ ಪ್ರದರ್ಶನಕ್ಕೆ ಅವಕಾಶ ಕೊಡದಿದ್ದರೆ ಹೋರಾಟ ಅನಿವಾರ್ಯ.
ಕಿಶೋರ್ ಕುಮಾರ್, ಅಧ್ಯಕ್ಷರು, ಕಲಾಕ್ಷೇತ್ರ ಕುಂದಾಪುರ.[/quote]
Taluk administration denying to give permission for yakshagana show at nehru maidana kundapura
3 thoughts on “ಕುಂದಾಪುರದಲ್ಲಿಯೇ ಯಕ್ಷ ಕಲೆಗಿಲ್ಲ ನೆಲೆ. ನೆಹರೂ ಮೈದಾನದಲ್ಲಿ ಪ್ರದರ್ಶನಕ್ಕಿಲ್ಲ ಅವಕಾಶ”