ಜಪಾನಿಗರು ಹಚ್ಚಿಕೊಂಡಿರುವ ಕೆಲಸದ ಗೀಳು ಅಲ್ಲಿನ ಸರಕಾರಕ್ಕೆ ದೊಡ್ಡ ತಲೆನೋವು ತಂದಿದೆ. ಅಷ್ಟೇ ಅಲ್ಲ ಜನರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಉದ್ಯೋಗಿಗಳು ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಅಲ್ಲಿನ ಸರಕಾರ ಕಾನೂನು ತರಲು ಮುಂದಾಗಿದೆ.
ಜಪಾನ್‌ನಲ್ಲಿ ಸಾಮಾನ್ಯವಾಗಿ ದುರ್ಬಲರು, ಅಶಕ್ತರು ಹೊರತುಪಡಿಸಿ ಯಾವುದೇ ಉದ್ಯೋಗಿ ರಜೆ ದಿನಗಳನ್ನು ಬಳಸಿಕೊಳ್ಳುತ್ತಿಲ್ಲ.
”ಕಳೆದ ವರ್ಷ 20 ವೇತನ ಸಹಿತ ರಜೆಯಲ್ಲಿ 8 ತೆಗೆದುಕೊಂಡಿದ್ದೆ. ಅದರಲ್ಲಿ 6 ಅನಾರೋಗ್ಯದ ಕಾರಣಕ್ಕೆ ಬಳಕೆಯಾಗಿದೆ. ಯಾರೂ ರಜಾದಿನಗಳನ್ನು ಬಳಸಿಕೊಳ್ಳುತ್ತಿಲ್ಲ ,”ಎಂದು ಪ್ರಮುಖ ಟ್ರೇಡಿಂಗ್ ಕಂಪೆನಿಯಲ್ಲಿ ದಿನದ 14 ಗಂಟೆ ಕಾರ‌್ಯ ನಿರ್ವಹಿಸುತ್ತಿರುವ 36 ವರ್ಷದ ಎರಿಕೊ ಸೆಕಿಗುಚಿ ಹೇಳುತ್ತಾರೆ. ಇದು ಜಪಾನಿಗರು ಹಚ್ಚಿಕೊಂಡಿರುವ ಕೆಲಸದ ಗೀಳಿಗೆ ಸಾಕ್ಷಿ.
ಉದ್ಯೊಗಿಗಳಿಗೆ ರಜೆ ಪಡೆಯಲು ಅವಕಾಶ ಕಲ್ಪಿಸುವ ಕಾನೂನನ್ನು ಜ.26ರಂದು ಆರಂಭಗೊಂಡ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ. ಅಗತ್ಯವಾದರೆ ಉದ್ಯೋಗಿಗಳು ವಿಶ್ರಾಂತಿ ಪಡೆಯಲು ನೆರವಾಗುವ ಜತೆಗೆ ಉದ್ಯೊಗಿಗಳಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡುವುದು ಉದ್ಯೋಗದಾತರ ಜವಾಬ್ದಾರಿ ಎಂಬುದನ್ನು ಈ ಕಾನೂನು ಪ್ರತಿಪಾದಿಸುತ್ತದೆ.
ಮನೆಯ ಯೋಚನೆ ಇಲ್ಲದೆ ಸ್ಟೀರಿಯೊಟೈಪ್‌ನಂತೆ ಕಾರ‌್ಯ ನಿರ್ವಹಿಸುವ ಪಡೆಯೇ ಜಪಾನ್‌ನ ಬೆನ್ನೆಲುಬಾಗಿದೆ. ದೀರ್ಘ ಕಾಲ ಕೆಲಸ ಮಾಡುವ ಒತ್ತಡದಿಂದ ಸಂಭವಿಸುವ ಸಾವಿನ ಪ್ರಮಾಣ ಈ ರಾಷ್ಟ್ರದಲ್ಲಿ ಹೆಚ್ಚಿದೆ. ಮಾನಸಿಕ ಸ್ತಿಮಿತ ಕಳೆದುಕೊಳ್ಳುವಿಕೆ, ಆತ್ಮಹತ್ಯೆ ಪ್ರಕರಣಗಳು ಕೂಡ ವರದಿಯಾಗುತ್ತಿವೆ.
ಇಲ್ಲಿನ ಶೇ 22ರಷ್ಟು ಮಂದಿ ವಾರದಲ್ಲಿ 49 ಗಂಟೆ ಕೆಲಸ ಮಾಡುತ್ತಾರೆ. ಅಮೆರಿಕದಲ್ಲಿ ಹೀಗೆ ಕೆಲಸ ಮಾಡುವವರ ಪ್ರಮಾಣ ಶೇ 16ಇದ್ದರೆ ದಕ್ಷಿಣ ಕೊರಿಯಾದಲ್ಲಿ ಶೇ 35. ಫ್ರೆಂಚ್ ಮತ್ತು ಜರ್ಮನ್‌ನಲ್ಲಿ ಈ ಪ್ರಮಾಣ ಶೇ 11.