ಎಚ್1ಬಿ ವೀಸಾ ಹೊಂದಿರುವವರ ಪತಿ/ಪತ್ನಿಗೆ ಉದ್ಯೋಗ ಮಾಡಲು ಮೇ 26ರಿಂದ ಅವಕಾಶ ನೀಡಲಾಗುವುದು ಎಂದು ಅಮೆರಿಕ ಘೋಷಿಸಿದೆ.
ಈ ಕ್ರಮದಿಂದಾಗಿ ಅಮೆರಿಕಕ್ಕೆ ಬಂದ ನಂತರ ಕೆಲಸ ಮಾಡಲು ಸಾಧ್ಯವಾಗದೇ ಇರುವ ಪ್ರತಿಭಾನ್ವಿತ, ವೃತ್ತಿಪರ ಭಾರತೀಯರ ಸಂಗಾತಿಗೆ ಅನುಕೂಲವಾಗಲಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ಈಗಿನ ಕಾನೂನಿನಂತೆ, ಎಚ್1ಬಿ ವೀಸಾ ಹೊಂದಿರುವವರ ಪತಿ/ಪತ್ನಿ ಅಮೆರಿಕದಲ್ಲಿ ಉದ್ಯೋಗ ಮಾಡುವಂತಿಲ್ಲ. ಎಚ್1ಬಿ ವೀಸಾ ಹೊಂದಿರುವವರ ಪೈಕಿ ಹೆಚ್ಚಿನವರು ಭಾರತೀಯರು.
ಕೆಲಸ ಮಾಡಲು ಅನುಮತಿ ಕೋರಿ ಎಚ್1ಬಿ ವೀಸಾ ಹೊಂದಿರುವವರ ಪತ್ನಿ /ಪತಿ ಸಲ್ಲಿಸುವ ಅರ್ಜಿಯನ್ನು ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆ (ಯುಎಸ್‌ಸಿಐಎಸ್) ಮೇ 26ರಿಂದ ಸ್ವೀಕರಿಸಲಿದೆ. ಯುಎಸ್‌ಸಿಐಎಸ್ ‘ಫಾರ್ಮ್ 1-765’ ಅಂಗೀಕರಿಸಿದರೆ, ಎಚ್4 ಅವಲಂಬಿತ ಪತಿ ಅಥವಾ ಪತ್ನಿಗೆ ಉದ್ಯೋಗ ಅನುಮತಿ ಪತ್ರ ದೊರೆಯಲಿದೆ. ನಂತರ ಆಕೆ/ಆತ ಅಮೆರಿಕದಲ್ಲಿ ಕೆಲಸ ಮಾಡಬಹುದು.
ಯುಎಸ್‌ಸಿಐಎಸ್ ಅಂದಾಜಿನ ಪ್ರಕಾರ ಉದ್ಯೋಗ ಅನುಮತಿ ಪತ್ರ ಕೋರಿ ಈ ವರ್ಷ 179,600 ಮಂದಿ ಅರ್ಜಿ ಸಲ್ಲಿಸಬಹುದು. ಮುಂದಿನ ವರ್ಷ 55,000 ಮಂದಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಸರಕಾರದ ಕ್ರಮವನ್ನು ಮೆಚ್ಚಿ ದಕ್ಷಿಣ ಏಷ್ಯಾ ಅಮೆರಿಕನ್ನರ ಒಕ್ಕೂಟ (ಎಸ್‌ಎಎಎಲ್‌ಟಿ) ಮೆಚ್ಚುಗೆ ವ್ಯಕ್ತಪಡಿಸಿ ಹೇಳಿಕೆ ನೀಡಿದೆ.
ಎಚ್1ಬಿ ವಲಸೇಯತರರ ಅವಲಂಬಿತ ಪತ್ನಿ/ಪತಿ ಎಚ್4 ವೀಸಾ ಹೊಂದಿರುವವರು ಉದ್ಯೋಗ ಅನುಮತಿ ಪತ್ರ (ಇಎಡಿ) ಪಡೆಯಲು ಅರ್ಹರಾಗಿದ್ದಾರೆ ಎಂದು ಯುಎಸ್‌ಸಿಐಎಸ್ ಪ್ರಕಟಣೆ ತಿಳಿಸಿದೆ. ಇತ್ತೀಚಿನ ವರದಿ ಪ್ರಕಾರ, 2013ರಲ್ಲಿ ಎಚ್4 ವೀಸಾ ಹೊಂದಿರುವವರ ಪೈಕಿ ಶೇ. 76ರಷ್ಟು ಮಂದಿ ದಕ್ಷಿಣ ಏಷ್ಯಾ ರಾಷ್ಟ್ರದವರು.