ವಿಶ್ವ ಟೆನಿಸ್ ಸಂಸ್ಥೆ ಸೋಮವಾರ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತದ ಆಟಗಾರ್ತಿ ಸಾನಿಯಾ ಮಿರ್ಜಾ ಅಧಿಕೃತವಾಗಿ ಡಬಲ್ಸ್‌ನಲ್ಲಿ ವಿಶ್ವದ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.
ಇಟಲಿಯ ಸಾರಾ ಎರ‌್ರಾನಿ (7640) ಅವರನ್ನು 20 ಅಂಕಗಳಿಂದ ಹಿಂದಿಕ್ಕಿದ ಸಾನಿಯಾ 7660 ಅಂಕಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನಕ್ಕೇರಿದರು. ಚಾರ್ಲ್‌ಸ್ಟನ್‌ನಲ್ಲಿ ನಡೆದ ಫ್ಯಾಮಿಲಿಕಪ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ ಡಬಲ್ಸ್‌ನಲ್ಲಿ ವಿಶ್ವಕ್ಕೆ ಅಗ್ರರೆನಿಸಿದರು. ಈ ಜಯದೊಂದಿಗೆ ಸಾನಿಯಾ 470 ಅಂಕಗಳನ್ನು ಗಳಿಸಿದರು.
ಗ್ರ್ಯಾನ್ ಸ್ಲಾಮ್ ಟೂರ್ನಿಗಳನ್ನು ಗೆದ್ದ ದೇಶದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸಾನಿಯಾ ಪಾತ್ರರಾಗಿದ್ದಾರೆ.
ಫ್ಯಾಮಿಲಿ ಕಪ್ ಗೆಲ್ಲುವ ಮೂಲಕ ಸಾನಿಯಾ ಹಾಗೂ ಹಿಂಗಿಸ್ ಜೋಡಿ ಸತತ ಮೂರನೇ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಜೋಡಿ ಪ್ರಶಸ್ತಿಯ ಹಾದಿಯಲ್ಲಿ ಒಂದು ಪಂದ್ಯವನ್ನೂ ಸೋತಿರಲಿಲ್ಲ. ಇಂಡಿಯನ್ ವೇಲ್ಸ್ ಹಾಗೂ ಮಿಯಾಮಿ ಈ ಜೋಡಿ ಗೆದ್ದಿರುವ ಇತರ ಟೂರ್ನಿಗಳು. ಆಡಿರುವ 14 ಪಂದ್ಯಗಳಲ್ಲಿ ಈ ಜೋಡಿ ಕೇವಲ 3 ಸೆಟ್‌ಗಳಲ್ಲಿ ಮಾತ್ರ ಸೋಲನುಭವಿಸಿದೆ.