ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ದೇವಾಲಯಗಳು ನವೀಕರಣಗೊಳ್ಳುತ್ತಿವೆ. ಶ್ರೀಸಾಮಾನ್ಯರು ತಾವು ಉತ್ತಮ ಬದುಕು ರೂಪಿಸಿಕೊಂಡ ಮೇಲೆ ಸಮಾಜದ ಸೇವೆ ಮಾಡಬೇಕು ಎಂದು ಮುಂದೆ ಬರುವಂತಾಗಿದೆ. ಸ್ವಾತಂತ್ರ್ಯ ಬಳಿಕ ಸಮಾಜದಲ್ಲಾದ ಸಾಮಾಜಿಕ ಪರಿವರ್ತನೆಯಿಂದಾಗಿ ಎಲ್ಲರಲ್ಲಿಯೂ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಬರುವಂತಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.
ಅವರು ಇತ್ತಿಚಿಗೆ ನವೀಕರಣಗೊಂಡ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಶಿಲಾಮಯ ದೇವಸ್ಥಾನಕ್ಕೆ ಭೇಟಿನೀಡಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ದೇಹವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಅಲ್ಲಿ ದೇವರಿದ್ದಾನೆ ಎಂದು ತಿಳಿಯಬೇಕು. ಧಾರ್ಮಿಕ ನಂಬಿಕೆ ಇಲ್ಲದಿದ್ದರೆ ಮನುಷ್ಯನಲ್ಲಿ ಶಿಸ್ತು ರೂಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಹವನ್ನೂ ದೇವಾಲಯ ಎಂದು ಗುರುತಿಸಿಕೊಳ್ಳಬೇಕಾದ ಅಗತ್ಯವಿದೆ. ದೇವಸ್ಥಾನದಂತೆ ಆರೋಗ್ಯಕ್ಕಾಗಿ ದೇಹವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೇ ರೋಗ ಬ್ಲಂದು ಆಯಸ್ಸು ಮುಗಿಯಬಹುದು. ಇದನ್ನು ವೈಜ್ಞಾನಿಕವಾಗಿ ಹೇಳಿದಿದ್ದರೇ ಜನರು ಹೆದರದಿರಬಹುದು. ಆದರೆ ಅದನ್ನೇ ಧಾರ್ಮಿಕವಾಗಿ ಹೇಳಿದರೇ ಎಲ್ಲರೂ ಒಪ್ಪುತ್ತಾರೆ ಎಂದರು.
ನಮ್ಮಿಂದ ಆದಷ್ಟು ಸತ್ಕಾರ್ಯ ಆಗುವಂತೆ ನೋಡಿಕೊಳ್ಳಬೇಕು. ನಮ್ಮ ವ್ಯಕ್ತಿತ್ವವನ್ನು ದಿನರ್ವಹಿ ಬೆಳೆಸಿಕೊಳ್ಳಬೇಕು. ದಿನವಹಿ ಕರ್ಮಗಳನ್ನು ಮಾಡಿ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳಬೇಕು. ಇದರಿಂದ ಅಂತರಂಗದ ಶುದ್ಧಿಯಾಗುತ್ತದೆ
ಬದುಕಿನಲ್ಲಿ ನಂಬಿಕೆ ಬಹಳ ಮುಖ್ಯ. ಇದು ಬದುಕಿನಲ್ಲಿ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಕ್ಷೇತ್ರದ ಅಭಿವೃದ್ಧಿಯಾಗಿದ್ದರೇ ಅದು ದೇವರಿಗೆ ಉಪಕಾರ ಮಾಡಿರುವುದು ಎಂಬರ್ಥವಲ್ಲ. ದೇವಸ್ಥಾನದ ಜೀಣೋದ್ಧಾರದಿಂದ ಊರಿಗೆ ಬೆಳಕು, ಗ್ರಾಮದಲ್ಲಿ ಶಾಂತಿ ಸುಭೀಕ್ಷೆ, ನೆಮ್ಮದಿ ನೆಲೆಸುತ್ತದೆ ಎಂದರು.
ಸ್ವಸಹಾಯ ಸಂಘಗಳಿಂದ ಇಂದು ಆತ್ಮವಿಶ್ವಾಸ ಮೂಡಿದೆ. ಆರ್ಥಿಕ ಶಿಸ್ತಿನ ಪರಿಣಾಮವಾಗಿ ಸ್ವಾವಲಂಬಿಯಾಗಿ ಬದುಕುವಂತಾಗಿದೆ. ಕೆಲವು ತಿಂಗಳ ಹಿಂದೆ ಕರ್ನಾಟಕದಲ್ಲಿ ಎಂಟು ಸಾವಿರ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ. ಎಂಟು ಲಕ್ಷ ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷೆತೆ ವಹಿಸಿದ್ದರು. ಬೆಂಗಳೂರು ಎಂಆರ್‌ಜಿ ಗ್ರೂಫ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ ರೈ ಬೆಳ್ಳಿಪಾಡಿ, ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ್ ಶೆಟ್ಟಿ, ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಹೆಗ್ಡೆ, ದೇವಸ್ಥಾನ ಜೀಣೋದ್ಧಾರ ಸಮಿತಿಯ ಮುಂಬೈ ಅಧ್ಯಕ್ಷ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿ, ವಕ್ವಾಡಿ ಮೋಹನ್, ಅಬ್ದುಲ್ ಸತ್ತಾರ್ ಮೊದಲಾದವರನ್ನು ಗೌರವಿಸಲಾಯಿತು. ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಉಳ್ತೂರು ಮೋಹನದಾಸ ಶೆಟ್ಟಿ ಸ್ವಾಗತಿಸಿದರು. ಹರೀಶ್ ವಕ್ವಾಡಿ ಹಾಗೂ ಅಜಿತ್ ಶೆಟ್ಟಿ ಉಳ್ತೂರು ಕಾರ್ಯಕ್ರಮ ನಿರೂಪಿಸಿದರು.