ಕರ್ನಾಟಕ ರಾಜ್ಯದ ಯಕ್ಷಗಾನ ರಸಿಕರಿಗೆಲ್ಲಾ ಚಿರಪರಿಚಿತರಾಗಿರುವ, ಕಂದಾವರ ರಘುರಾಮ ಶೆಟ್ಟಿಯವರು, ಒಬ್ಬ ಖ್ಯಾತ ಶಿಕ್ಷಕ, ಯಕ್ಷಗಾನ ಪ್ರಸಂಗ ಕರ್ತ, ಅರ್ಥಧಾರಿ, ಹವ್ಯಾಸಿ ನಾಟಕ ಕಲಾವಿದ, ಹವ್ಯಾಸಿ ಕಲಾವಿದ. ಶ್ರೀ. ರಘುರಾಮ ಶೆಟ್ಟಿಯವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಎ೦ಬ ಹೆಸರಿನಿಂದ ಪ್ರಸಿದ್ಧರು.
ಬಾಲ್ಯ , ಶಿಕ್ಷಣ
ಕಂದಾವರ ರಘುರಾಮ ಶೆಟ್ಟಿಯವರು ಕುಂದಾಪುರ ತಾಲ್ಲೂಕಿನ ಬಳ್ಕೂರು ಗ್ರಾಮದ ಕಂದಾವರದಲ್ಲಿ 1936ರಲ್ಲಿ ಜನಿಸಿದರು. ಅವರ ತಂದೆ, ಕರ್ಕಿ ಸದಿಯಣ್ಣ ಶೆಟ್ಟಿಯವರು. ತಾಯಿ ಕಂದಾವರ ಪುಟ್ಟಮ್ಮನವರು. ಈಗ ಶ್ರೀಯುತರು, ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಸಂಗದಲ್ಲಿ ನೂಜಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ಆರಂಭದ ಬದುಕಿನಲ್ಲಿ ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಮಾಡಿರುವ ಕಂದಾವರ ರಘುರಾಮ ಶೆಟ್ಟಿಯವರು, `ಮಾದರೀ ಶಿಕ್ಷಕ` ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಳೆ ಪ್ರಾಯದಿಂದಲೂ ಸಾಹಿತ್ಯ, ಸಂಗೀತ, ಯಕ್ಷಗಾನಗಳ ಬಗೆಗೆ, ವಿಶೇಷ ಒಲವು ಆಸಕ್ತಿಗಳನ್ನು ತಳೆದ ಕಂದಾವರ ರಘುರಾಮ ಶೆಟ್ಟಿಯವರು ವಿದ್ಯಾರ್ಥಿದೆಶೆಯಲ್ಲೇ “ಮಕ್ಕಳ ಯಕ್ಷಗಾನಕ್ಕೆ ಭಾಗವತಿಗೆ“ ಮಾಡಿ “ಬಾಲ ಭಾಗವತ“ ನೆಂಬ ಖ್ಯಾತಿಪ್ರಾಪ್ತಿಗೆ ಪಾತ್ರರಾದರು. ದಿವಂಗತ ಎಂ. ಎಂ. ಹೆಗ್ಡೆ ಯವರ ಕೂಟದಲ್ಲಿ ಹವ್ಯಾಸಿ ವೇಷಧಾರಿಯಾಗಿ ಪಾತ್ರ ನಿರ್ವಹಣೆ ಮಾಡುತ್ತಿದ್ದರು. ಸ್ವತಃ ಉತ್ತಮ ಅರ್ಥಧಾರಿಯಾದ ಕಂದಾವರ ರಘುರಾಮ ಶೆಟ್ಟಿಯವರು, ಬೇರೆ ಅರ್ಥಧಾರಿಗಳ ಜೊತೆಗೂಡಿ ತಾಳಮದ್ದಲೆಯಲ್ಲಿ ಪಾಲ್ಗೊಂಡಿದ್ದರು.
ಯಕ್ಷಗಾನ-ಪ್ರಸಂಗ ರಚನೆ, ಕನ್ನಡ ಸಾಹಿತ್ಯ ಸೇವೆ
ಯಕ್ಷಗಾನ ಎಳವೆಯಲ್ಲೇ ಇವರನ್ನು ಆಕರ್ಷಿಸಿತು. ಅದನ್ನು ಹವ್ಯಾಸವಾಗಿ ನಿರಂತರ ಬೆಳೆಸಿ ಕೊಂಡು ಬಂದಿದ್ದಾರೆ. ಭಾಗವತರಾಗಿ, ವೇಷಧಾರಿಯಾಗಿ, ಅರ್ಥಧಾರಿಯಾಗಿ ಹಾಗೂ ಪ್ರಸಂಗಕರ್ತರಾಗಿ ಈ ಕ್ಷೇತ್ರಕ್ಕೆ ಇವರಿಂದ ಗಮನಾರ್ಹ ಕೊಡುಗೆ ಸಂದಿದೆ. 1978ರಿಂದ ಆರಂಭವಾದ ಈ ಪ್ರಸಂಗ-ಕೃಷಿ, ಇದುವರೆಗೆ 29 ಪ್ರಸಂಗಗಳ ಗುಚ್ಛವಾಗಿದೆ. ಕಂದಾವರರು ಇವನ್ನೆಲ್ಲಾ ಒಟ್ಟುಗೂಡಿಸಿಬರೆದು ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆಯಾಗಿ ಸಮರ್ಪಿಸಿದ್ದಾರೆ. ಅವುಗಳಲ್ಲಿ ಹಲವು ಉಭಯ ತಿಟ್ಟುಗಳ ವೃತ್ತಿ ಮೇಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಗೊಂಡಿವೆ. ಶ್ರೀದೇವಿ ಬನಶಂಕರಿ, ಚೆಲುವೆ ಚಿತ್ರಾವತಿ, ರತಿ ರೇಖಾ, ಶೂದ್ರ ತಪಸ್ವಿನಿ ಕಲಾಭಿಮಾನಿಗಳ ಅಪಾರ ಮೆಚ್ಚುಗೆ ಗಳಿಸಿವೆ. ಹತ್ತಾರು ವರ್ಷ ಕಳೆದ ಮೇಲೂ ಇವು ಪ್ರದರ್ಶನ ಗೊಳ್ಳುತ್ತಿರುವುದು ಪ್ರಸಂಗದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.
ಇವೆಲ್ಲಾ ದಾಖಲೆಯ ಪ್ರದರ್ಶನಗಳನ್ನು ಜನಪ್ರಿಯತೆಯನ್ನೂ ಗಳಿಸಿವೆ. ಮತ್ತೊಂದು ವಿಶೇಷವೆಂದರೆ, ಬಡಗು ತಿಟ್ಟಿನ ಎಲ್ಲಾ ಮೇಳಗಳೂ ತೆಂಕುತಿಟ್ಟಿನ ಧರ್ಮಸ್ಥಳ, ಕಟೀಲು ಮೇಳದವರು ಈಗಲೂ ಶ್ರದ್ಧಾಸಕ್ತಿಗಳಿಂದ ಆಡಿ ಸಂಭ್ರಮಿಸುತ್ತಿದ್ದಾರೆ. ಕಂದಾವರರ ಅಪಾರ ಅನುಭವ ಮತ್ತು ಬುದ್ಧಿಮತ್ತೆಗೆ ಸಾಕ್ಷಿಯಾಗಿ, ಆಯ್ದ ಪ್ರಸಂಗಗಳ ಸಂಕಲನ, “ದಶಮಿ“ ಪ್ರಕಾಶನಗೊಂಡಿವೆ,
ಹವ್ಯಾಸಿ ನಾಟಕ ಕಲಾವಿದರಾದ ಇವರು ಕಂಪೆನಿ ನಾಟಕಗಳಲ್ಲೂ ಅತಿಥಿ ನಟರಾಗಿ ಅಭಿನಯಿಸಿ ಕಲಾ ರಸಿಕರ ಮನಗೆದ್ದಿದ್ದಾರೆ. ಕರ್ನಾಟಕ ಸರಕಾರದ ನಾಟಕ ಅಕಾಡೆಮಿ ಪ್ರಕಟಿಸಿದ “ಇಂದಿನ ರಂಗ ಕಲಾವಿದರು“ ಎಂಬ ಪುಸ್ತಕದಲ್ಲಿ ಇವರ ಪರಿಚಯ ಬಂದಿರುವುದು ಈ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಗೆ ನಿದರ್ಶನ. ಕವಿಯಾಗಿ, ಬಿಡಿಬರಹಗಳ ಲೇಖಕರಾಗಿ ಕನ್ನಡ ಓದುಗರಿಗೆ ತಮ್ಮನ್ನು ತೆರೆದುಕೊಂಡವರು. ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಲ್ಕು ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಪುರಾಣ ವಾಚನದಲ್ಲಿ ಗಮಕಿಗಳಾಗಿ, ಪ್ರವಚನಕಾರರಾಗಿ ಭಾಗವಹಿಸಿದ್ದಾರೆ.
ನೂರಾರು ನಾಟಕಗಳಲ್ಲಿ ಹಾಸ್ಯದ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಕೆಲವು ಕಂಪೆನಿ ನಾಟಕಗಳಲ್ಲಿ ಗೌರವನಟರಾಗಿ ರಂಗಮಂಚದಮೇಲೆ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿವೃಂದಕ್ಕಾಗಿಯೇ ವಿಶೇಷ ಕಾಳಜಿವಹಿಸಿ 7 ಕಿರುನಾಟಕಗಳ ರಚನೆಮಾಡಿದರು. ಅವನ್ನು ತಮ್ಮ ಮುಂದಾಳತ್ವದಲ್ಲಿ ಮಕ್ಕಳನಾಟಕವನ್ನು ನಿರ್ದೇಶಿಸಿ ಯಶಸ್ಸನ್ನು ತಂದುಕೊಟ್ಟಿದ್ದಾರೆ.
ಕಂದಾವರ ರಘುರಾಮ ಶೆಟ್ಟಿ ಕುಂದಾಪುರ ತಾಲ್ಲೂಕು “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ“ ರಾಗಿ 4 ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಮಾಡಿದ್ದಾರೆ. ಪುರಾಣ ಪ್ರವಚನಗಳಲ್ಲಿ ಗಮಕಿಯಾಗಿ, ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದಾರೆ.
ಪ್ರಶಸ್ತಿ , ಪುರಸ್ಕಾರಗಳು
ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದಿ೦ದ ಬಂಗಾರದ ಪದಕ.
ಕರ್ನಾಟಕ ಯಕ್ಷಗಾನ ಸಮಿತಿ ಪ್ರಶಸ್ತಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
ಡಾ. ವೀರೇಂದ್ರ ಹೆಗ್ಗಡೆ, ಎಡನೀರು ರಾಮಚಂದ್ರಮಠ, ದಾವಣಗೆರೆ ವಿರಕ್ತಮಠದ ಸ್ವಾಮೀಜಿಯವರಿ೦ದ ಸನ್ಮಾನ
ಪ್ರತಿಶ್ಠಿತ ಸೀತಾನದಿ ಪ್ರಶಸ್ತಿ
ಯಕ್ಷಸಾಹಿತ್ಯ ಶ್ರೀ ಪ್ರಶಸ್ತಿ
ಕರ್ನಾಟಕ ನಾಟಕ ಅಕಾಡೆಮಿಯ “ಇಂದಿನ ರಂಗ ಕಲಾವಿದರು“ ಹೊತ್ತಿಗೆಯಲ್ಲಿ ರಘುರಾಮ ಶೆಟ್ಟಿಯವರ ಹೆಸರು ದಾಖಲಾಗಿದೆ
ಪ್ರತಿಷ್ಠಿತ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ