ನೂರು ವರುಷಗಳ ಹಿಂದಿನ ಪತ್ರಿಕೋದ್ಯಮ

Call us

Call us

Call us

Call us

Call us

ಡಿವಿಜಿ ಪುಸ್ತಕದಲ್ಲೊಂದು ಇಣುಕು ನೋಟ

Call us

Click Here

Click here

Click Here

Call us

Visit Now

Click here

ಎಎಸ್‌ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ
ಪತ್ರಿಕೋದ್ಯಮ ಬಹಳಷ್ಟು ದೂರ ಸಾಗಿ ಬಂದಿದೆ. ಶತಮಾನಗಳ ಇತಿಹಾಸ ಹೊಂದಿದ ಈ ಉದ್ಯಮ ಶತಮಾನಗಳ ನಂತರವೂ ಭೀತಿಯಿಂದ ಮುಕ್ತವಾಗಿಲ್ಲದಿರುವುದು ಒಂದು ದುರಂತ. ಇಂದಿಗೂ ಪತ್ರಿಕೆಗಳಿಗೆ ಮುಕ್ತವಾಗಿ ಬರೆಯಲು ಭೀತಿ ಇದೆ. ಸರಕಾರದ ಭೀತಿ, ಶಾಸಕಾಂಗದ ಭೀತಿ, ನ್ಯಾಯಾಂಗದ ಭೀತಿ. ಸರಕಾರಕ್ಕೆ ವಿರೋಧವಾಗಿ ಬರೆದರೆ ಗೊತ್ತೇ ಇದೆಯಲ್ಲ, ತಮಿಳುನಾಡಿನಲ್ಲಿ ಜಯಲಲಿತಾ ಆಡಳಿತ ಕಾಲದಲ್ಲಿ ಆದದ್ದು. ಪತ್ರಿಕೆಯ ಬಂಡಲುಗಳಿಗೆ ಬೆಂಕಿ, ಪತ್ರಿಕಾಲಯಗಳಿಗೆ ಪೋಲೀಸ್ ದಾಳಿ, ಮುದ್ರಣಾಲಯಗಳಿಗೆ ವಿದ್ಯುತ್ ಕಡಿತ! ಶಾಸಕಾಂಗದಲ್ಲಿ ನಡೆದದ್ದನ್ನು ನಡೆದಂತೆ ಬರೆದರೂ, ಹಕ್ಕುಚ್ಯುತಿಯ ಭಯ, ಛೀಮಾರಿಯ ಅಪಾಯ, ಬಂಧನದ ಭೀತಿ. ಇನ್ನು ನ್ಯಾಯಾಂಗದ ಕುರಿತಂತೂ ಬರೆಯಲು ಎಂಟೆದೆ ಬೇಕು. ನ್ಯಾಯಾಂಗ ನಿಂದನೆಯಡಿ ತತ್ತರಿಸಬೇಕು. ಒಟ್ಟಿನಲ್ಲಿ 21ನೇ ಶತಮಾನ ಬಂದರೂ ಪತ್ರಿಕೆಗಳು ನಿರ್ಭೀತಿಯಿಂದ, ಸ್ವತಂತ್ರವಾಗಿ ಬರೆಯುವಂತಿಲ್ಲ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ಮರುಭೂಮಿಯಲ್ಲಿನ ಮರೀಚಿಕೆಯಂತಾಗಿಬಿಟ್ಟದೆ. ಯಾರು ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದರೋ, ಅದೇ ರಾಜಕಾರಣಿಗಳ ದಂಡು ಸ್ವ್ವಾತಂತ್ರ್ಯಾನಂತರ ಅದೇ ಪತ್ರಿಕೆಗಳನ್ನು ದಮನಿಸಲು ಕಾತರರಾಗಿರುವುದು ಒಂದು ದುಃಖದ ಸಂಗತಿ.

ಒಂದಾನೊಂದು ಕಾಲದಲ್ಲಿ …
ಒಂದು ದೃಷ್ಠಿಯಿಂದ ನೋಡಿದರೆ ಹಿಂದಿನ ಕಾಲವೇ ಒಳ್ಳೆಯದಿತ್ತೆನ್ನಿಸುತ್ತದೆ. ಪತ್ರಿಕೆಗಳಿಗೆ ಯಾವುದೇ ಕಟ್ಟುಪಾಡುಗಳು, ನಿಯಮ ನಿಬಂಧನೆಗಳು, ನಿರ್ಬಂಧ ಕಡಿವಾಣಗಳು ಇದ್ದೇ ಇರಲಿಲ್ಲ. ಸ್ವಾತಂತ್ರ್ಯಪೂರ್ವದ ಮೈಸೂರು ಸಂಸ್ಥಾನದಲ್ಲಿನ ಪತ್ರಿಕಾ ಸ್ವಾತಂತ್ರ್ಯ ಹೇಗಿತ್ತು, ನಂತರ ಹೇಗಾಯಿತು ಎಂಬುದನ್ನು 1906-07ರಲ್ಲಿಯೇ ಪತ್ರಿಕಾವೃತ್ತಿಗಿಳಿದಿದ್ದ ಡಿ.ವಿ. ಗುಂಡಪ್ಪನವರ ನೆನಪಿನ ಸುರುಳಿಯಿಂದ ಆರಿಸಬೇಕು. ಅವರ ಪುಸ್ತಕದಲ್ಲೊಂದು ಇಣುಕು ನೋಟ ಹಾಕೋಣ.

ದಿವಾನರ ಸುದ್ದಿ – ಗುದ್ದು
ಆ ಸಮಯ ’ಸೂರ್ಯೋದಯ ಪ್ರಕಾಶಿಕಾ’ ಎಂಬ ಒಂದು ವಾರ ಪತ್ರಿಕೆ ಬೆಂಗಳೂರಿನ ನವರತ್ನ ಪ್ರೆಸ್‌ನಿಂದ ಹೊರಡುತ್ತಿತ್ತು. ಬಿ. ನರಸಿಂಗರಾಯರೆಂಬವರು ಅದನ್ನು ಪ್ರಾರಂಭಿಸಿದ್ದರು. ಒಂದು ಸಲ ಈ ಪತ್ರಿಕೆಯಲ್ಲಿ ಒಂದು ವಿಚಿತ್ರ ಸುದ್ದಿ ಪ್ರಕಟವಾಗಿತ್ತು. ಅದರ ಸಾರಾಂಶವೆಂದರೆ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ವಿ.ಪಿ.ಮಾಧವರಾಯರು ಮೈಸೂರು ರಾಜ್ಯದ ಬೆಂಗಳೂರು, ಕೋಲಾರ ಜಿಲ್ಲೆಗಳನ್ನು ಬ್ರಿಟಿಷರಿಗೆ ಕೊಟ್ಟು ಅದಕ್ಕೆ ಬದಲಾಗಿ ಬಳ್ಳಾರಿ, ಅನಂತಪುರ ಜಿಲ್ಲೆಗಳನ್ನು ತೆಗೆದುಕೊಳ್ಳುವ ತರದೂದು ನಡೆಸುತ್ತಿದ್ದಾರೆ, ಹೀಗೆ ಚಿನ್ನದ ನಾಡಿಗೆ ಬದಲಾಗಿ ಬೆಂಗಾಡು ಕೊಂಪೆಯನ್ನು ತೆಗೆದುಕೊಳ್ಳುವುದಾಗುತ್ತದೆ ಎಂಬುದಾಗಿ.

ಡಿ.ವಿ.ಜಿ.ಬರೆಯುತ್ತಾರೆ ’ಈ ಪ್ರಕಟಣೆಯಿಂದ ಸರಕಾರಕ್ಕೆ ಆಗ್ರಹ ಬಂತು. ದಿವಾನ್ ವಿ.ಪಿ.ಮಾಧವರಾಯರಿಗೆ ತುಂಬಾ ಅಸಮಾಧಾನವಾಗಿದ್ದಿರಬೇಕು. ಆಗ ಸರಕಾರದ ಮುಖ್ಯ ಕಾರ್ಯದರ್ಶಿ ಆಗಿದ್ದವರು ಕೆ.ಎಸ್.ಚಂದ್ರಶೇಖರಯ್ಯರ್ ಅವರು. ಅವರು ಬಿಗಿಯಾದ, ಪೊಗದಸ್ತಾದ ಬರವಣಿಗೆ ಬರೆಯುವುದರಲ್ಲಿ ನಿಸ್ಸಿಮರು. ಅವರು ’ಸೂರ್ಯೋದಯ ಪ್ರಕಾಶಿಕಾ’ ಪತ್ರಿಕೆಗೆ ಗುದ್ದಿ ಬೆನ್ನಪ್ಪಳಿಸುವ ಒಂದು ಇಂಗ್ಲೀಷ್ ಪ್ರಕಟಣೆಯನ್ನು (communique) ಹೊರಡಿಸಿದರು’. ಇದಕ್ಕೆ ಡಿವಿಜಿಯವರೇ ಉತ್ತರ ಬರೆದುಕೊಟ್ಟರಂತೆ. ಅದೇ ಅವರ ಪತ್ರಿಕೋದ್ಯಮಕ್ಕೆ ನಾಂದಿಯಾಯಿತಂತೆ.

Call us

ಪ್ರಥಮ ಪತ್ರಿಕಾ ಕಾನೂನು
ಈ ಹಿನ್ನಲೆಯಲ್ಲಿ 1908ಎಪ್ರಿಲ್ ಅಥವಾ ಜೂನ್‌ನಲ್ಲಿ ದಿವಾನ್ ವಿ.ಪಿ.ಮಾಧವರಾಯರ ’ಮೈಸೂರು ನ್ಯೂಸ್ ಪೇಪರ‍್ಸ್ ರೆಗ್ಯುಲೇಶನ್’ ಎಂಬ ಪತ್ರಿಕಾ ನಿರ್ಬಂಧದ ಕಾನೂನು ಆಯಿತು. ಆ ಕಾನೂನಿನ ಮುಖ್ಯ ಅಂಶ, ಡಿವಿಜಿ ಬರೆದಂತೆ, ಹೀಗೆ – ಪತ್ರಿಕೆ ನಡೆಸುವವರು ಸರಕಾರದಿಂದ ಅಪ್ಪಣೆ ಪಡೆದಿರಬೇಕು. ಆ ಅಪ್ಪಣೆಯನ್ನು ಸರಕಾರ ಯಾವಾಗ ಬೇಕಾದರೂ ವಾಪಾಸ್ ತೆಗೆದುಕೊಳ್ಳಬಹುದು. ಸರಕಾರದ ಅಪ್ಪಣೆ ಇಲ್ಲದೆಯಾಗಲಿ ಅಥವಾ ಅಪ್ಪಣೆ ರದ್ದಾದ ಮೇಲಾಗಲಿ ಪತ್ರಿಕೆ ನಡೆಸಿದವರಿಗೆ ದಂಡನೆಯುಂಟು. ಇದನ್ನು ಓದಿದಾಗ ನನಗನ್ನಿಸಿದ್ದು ಅಂದರೆ – ಸ್ವಾತಂತ್ರ್ಯ ಪೂರ್ವದಲ್ಲಿಯೇ, 1908ಕ್ಕೂ ಮುಂಚೆ ಪತ್ರಿಕೆ ಆರಂಭಿಸಲಿಕ್ಕೂ, ನಡೆಸಲಿಕ್ಕೂ ಯಾವುದೇ ಅನುಮತಿ ಯಾ ಅಪ್ಪಣೆ ಬೇಕಿರಲಿಲ್ಲ ಮತ್ತು ನಿರ್ಬಂಧ ಇದ್ದಿರಲೇ ಇಲ್ಲ. ಈ ನಿರ್ಬಂಧಗಳೆಲ್ಲ ರಾಜರ ಕಾಲದಲ್ಲಿ, ಬ್ರಿಟಿಷರ ಆಡಳಿತದಲ್ಲಿ ಬಂದವುಗಳು. ಅಂದ ಮೇಲೆ ಸಾಮ್ರಾಜ್ಯಶಾಹಿತ್ವ ಕಿತ್ತೊಗೆದು ಸ್ವಾತಂತ್ರ್ಯವನ್ನು ಮರಳಿ ಗಳಿಸಿದ ನಮಗೆ ಆ ಮುಂಚಿನ ಸ್ವಾತಂತ್ರ್ಯ ಉಂಟೇ? ಅದೇ ನಿರ್ಬಂಧ, ಅದೇ ಕಡಿವಾಣ, ಅದೇ ಅನುಮತಿ ಮತ್ತು ಅಪ್ಪಣೆಗಳು ಮತ್ತು ಅದೇ ಕಾನೂನುಗಳು ಇನ್ನೂ ಪತ್ರಿಕೆಗಳ ಕತ್ತು ಹಿಸುಕುತ್ತಿವೆಯಲ್ಲ! ಅಂದರೆ ಸ್ವಾತಂತ್ರ್ಯಕ್ಕೇನರ್ಥ?

ಅಂದಿನವರ ಕೆಚ್ಚು
ಸ್ವತಂತ್ರ ಭಾರತದಲ್ಲೇ ಇಷ್ಟೊಂದು ನಿರ್ಬಂಧಗಳಿದ್ದೂ ಪತ್ರಿಕೆಗಳಾಗಲೀ, ಜನಗಳಾಗಲೀ ಇದರ ವಿರುದ್ಧ ವಿಧಾಯಕವಾದ ಚಳವಳಿ ನಡೆಸಿಲ್ಲ. ಇದಕ್ಕೆ ತದ್ವಿರುದ್ಧವಾಗಿ ೧೯೦೮ರಲ್ಲೇ ಅಂದಿನ ಪತ್ರಿಕೆಗಳ ಕೆಚ್ಚು ಮತ್ತು ಪಿತ್ತ ಎಷ್ಟರ ಮಟ್ಟಿಗಿತ್ತು ನೋಡಿ, ಡಿವಿಜಿ ಮಾತಿನಲ್ಲಿ. ’ಈ ಕಾನೂನು ಪತ್ರಿಕೆಗಳಿಗೆ ಪ್ರತಿಕೂಲವಾದ ಉದ್ದೇಶವುಳ್ಳದ್ದೆಂದೂ, ಅದು ಪತ್ರಿಕಾ ಸ್ವಾತಂತ್ರ್ಯಕ್ಕೆ ಹಾನಿಕಾರವೆಂದೂ ಆಗ ನಮಗೆಲ್ಲ ಅನ್ನಿಸಿತು’.

ವಿ.ಪಿ.ಮಾಧವರಾಯರ ಆಗ್ರಹಕ್ಕೆ ಮುಖ್ಯ ಗುರಿಯಾಗಿದ್ದದ್ದು ಜೋರಾದ ಬರವಣಿಗೆಯ, ತೀವ್ರ, ಕಟು ಟೀಕೆಯ ’ಮೈಸೂರು ಸ್ಟ್ಯಾಂಡರ್ಡ್’ ಎಂಬ ಇಂಗ್ಲೀಷ್ ಅರ್ಧವಾರ ಪತ್ರಿಕೆ ಹಾಗೂ ’ನಡೆಗನ್ನಡಿ’ ಎಂಬ ಕನ್ನಡ ವಾರಪತ್ರಿಕೆಯಂತೆ. ’ಸ್ಟ್ಯಾಂಡರ್ಡ್’ ಪತ್ರಿಕೆಯ ಸಂಪಾದಕರು ಎಮ್.ಶ್ರೀನಿವಾಸ ಐಯ್ಯಂಗಾರ್ಯರು. ವಿದ್ವಾಂಸರು, ಧೈರ್ಯವಂತರು.

ನಿಲ್ಲಿಸಿಬಿಟ್ಟ ಪತ್ರಿಕೆಗಳು
’ವೃತ್ತಪತ್ರಿಕಾ ನಿರ್ಬಂಧದ ಕಾನೂನನ್ನು ಪ್ರತಿಭಟಿಸತಕ್ಕದ್ದೆಂದೂ, ನಮ್ಮ ವಿರೋಧದ ಸೂಚನೆಯಾಗಿ ನಮ್ಮ ನಮ್ಮ ಪತ್ರಿಕೆಗಳನ್ನು ನಿಲ್ಲಿಸುವುದು ಯುಕ್ತವೆಂದೂ ಶ್ರೀನಿವಾಸ ಐಯಂಗಾರ್ಯರು ಸಲಹೆ ಕೊಟ್ಟರು. ಮೈಸೂರಿನ ವೃದ್ಧ ಪಿತಾಮಹ ಎಮ್.ವೆಂಕಟ ಕೃಷ್ಣಯ್ಯರವರೂ ಅದನ್ನು ಅನುಮೋದಿಸಿದರು. ಅವರ ಮುಂದೆ ನಾವೆಲ್ಲ ಕಿರಿಯರು, ವಿಧೇಯರಾಗಿ ನಡೆದೆವು. ಮೈಸೂರಿನಿಂದ ವೆಸ್ಲಿ ಮಿಶನ್‌ನವರು ಪ್ರಕಟಿಸುತ್ತಿದ್ದ ’ಮೈಸೂರು ಸ್ಟಾರ್’ ಮತ್ತು ’ವೃತ್ತಾಂತ ಪತ್ರಿಕೆ’ ಎರಡರ ವಿನಹ ಬಹಶಃ ಆಗಿನ ಎಲ್ಲ ಪತ್ರಿಕೆಗಳು ಪ್ರಕಟನೆಯನ್ನು ನಿಲ್ಲಿಸಿದುವು’. ಆಗಿನ ಕಾಲದಲ್ಲೇ ಪತ್ರಿಕಾ ಸ್ವಾತಂತ್ರ್ಯವನ್ನು, ಪತ್ರಿಕೆ ನಿಲ್ಲಿಸುವವರೆಗೂ, ಎತ್ತಿ ಹಿಡಿಯುವ ಹಾಗೂ ನಿರ್ಬಂಧಕ್ಕೆ ಪ್ರತಿರೋಧ ವ್ಯಕ್ತಪಡಿಸುವ ಕೆಚ್ಚು ಹಿಂದಿನವರಲ್ಲಿತ್ತು ಎಂಬುದು ಆಶ್ಚರ್ಯದ ಸಂಗತಿ. ಕುಂದಾಪ್ರ ಡಾಟ್ ಕಾಂ ಅಂಕಣ.

ಟೀಕೆಗಳ ಪುಸ್ತಕ ಪ್ರಕಟಣೆ
ನಂತರ ಡಿವಿಜಿಯವರು ಶ್ರೀನಿವಾಸ ಐಯಂಗಾರ್ಯರೊಂದಿಗೆ ಮದರಾಸಿಗೆ ಹೋಗಿ ಮೈಸೂರಿನ ವೃತ್ತ ಪತ್ರಿಕಾ ಕಾನೂನಿನ ಮೇಲೆ ಹೊರಗಣ ಪತ್ರಿಕೆಗಳಲ್ಲಿ ಬಂದಿದ್ದ ನಾನಾ ಟೀಕೆಗಳನ್ನು ಸಂಗ್ರಹ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ಹೊರಟರು. ಪತ್ರಿಕೆಗಳ, ಜನ ನಾಯಕರ ಖಂಡನೆಗಳನ್ನೆಲ್ಲ ಸಂಗ್ರಹಿಸಿ ಮದ್ರಾಸಿನ ’ಲೋಗನಾದನ್ ಪ್ರೆಸ್ಸಿ’ನಲ್ಲಿ ‘Press Gag in Mysore’ (ಮೈಸೂರಿನಲ್ಲಿ ಪತ್ರಿಕೆಗಳಿಗೆ ವಾಗ್ಬಂಧನ) ಎಂಬ ಹೆಸರಿನ ಪುಸ್ತಕವನ್ನು ಸಂಪಾದಕರ ಹೆಸರು ಹಾಕದೇ ಪ್ರಕಟಿಸಿದರು.

ಈ ವಿ.ಪಿ.ಮಾಧವರಾಯರು ದಿವಾನರಾದ ಮೇಲೆ ಲೆಜಿಸ್ಲೇಟಿವ್ ಕೌನ್ಸಿಲ್ ಎಂಬ ಶಾಸನ ಸಭೆ ಸ್ಥಾಪನೆ ಮಾಡಿಸಿದವರು. ಆ ಸಭೆ ಮಾಡಿದ ಮೊದ ಮೊದಲಿನ ಕೆಲಸವೇ ಪತ್ರಿಕಾ ನಿರ್ಬಂಧದ ಕಾನೂನು.

ಪತ್ರಿಕಾಲಯದ ಮೇಲೆ ದಾಳಿ
ಜಯಲಲಿತಾ ಆಡಳಿತ ಕಾಲದಲ್ಲಿ ಪತ್ರಿಕಾಲಯಗಳ ಮೇಲೆ ದಾಳಿಯಾಗಿತ್ತಲ್ಲ. ಇವು ೧೯೦೫ರಲ್ಲೂ ಇದ್ದುವು ಎಂದು ಡಿವಿಜಿ ಬರೆಯುತ್ತಾರೆ. ವಿ.ಪಿ.ಮಾಧವರಾಯರಿಗಿಂತ ಹಿಂದಿನ ದಿವಾನರಾಗಿದ್ದ ಕೃಷ್ಣಮೂರ್ತಿಗಳೆಂಬವರ ಕಾರುಭಾರಗಳನ್ನು ’ಮೈಸೂರು ಸ್ಟ್ಯಾಂಡರ್ಡ್’ ಪತ್ರಿಕೆ ಆಕ್ಷೇಪಿಸಿ, ಅವಹೇಳನ ಮಾಡಿ ಬರೆದು ಅಸಮಾಧಾನ ಮೂಡಿಸಿತ್ತು. ಅದರ ಕಾರ್ಯಾಲಯ ಇದ್ದದ್ದು ಬೆಂಗಳೂರು ಕೋಟೆಯಲ್ಲಿ. ಒಂದು ರಾತ್ರಿ ಯಾರೋ ಆ ಕಟ್ಟಡ ಹೊಕ್ಕು ಅಚ್ಚಿನ ಕಾಗದದ ಕಟ್ಟುಗಳನ್ನು ಹೊರಕ್ಕೆ ತಂದು ಚೆಲ್ಲಾಪಿಲ್ಲಿಯಾಗಿ ಎರಚಿದ್ದರು. ಕೆಲವು ಕಾಗದಗಳನ್ನು ಸುಟ್ಟಿದ್ದರು. ಸಂಪಾದಕರ ಕೋಣೆಯಲ್ಲಿ ಬಾತ್ಮೀ ಲೇಖನಗಳು ಮೊದಲಾದ ಕಾಗದ ಪತ್ರಗಳ ಮೇಲೆ ಕೈಯಾಡಿಸಿ ಹುಡುಕಿ ನೋಡಿದ ಹಾಗೂ ಕಾಣುತ್ತಿತ್ತು. ಪತ್ರಿಕೆಯಲ್ಲಿ ಕೆಲವು ಸರಕಾರಿ ರಹಸ್ಯಗಳು ಬಯಲಿಗೆ ಬಂದದ್ದರಿಂದ ಪತ್ರಿಕೆಗೆ ವರ್ತಮಾನ ಕೊಡುವವರೂ, ಲೇಖನ ಬರೆಯುವವರೂ ಯಾರು ಯಾರಿರಬಹುದೆಂಬುದನ್ನು ಹುಡುಕಿ ನೋಡುವ ಪ್ರಯತ್ನ ನಡೆದಿದ್ದಂತೆ ತೋರುತ್ತಿತ್ತು ಎಂದು ಡಿವಿಜಿ ಬರೆದಿದ್ದಾರೆ. ಕುಂದಾಪ್ರ ಡಾಟ್ ಕಾಂ ಅಂಕಣ.

ಸಭೆಯಲ್ಲಿ ಗುಲ್ಲು
ಇದಾದ ಕೆಲವು ತಿಂಗಳ ತರುವಾಯ 1905 ಅಕ್ಟೋಬರ ಸುಮಾರಿನಲ್ಲಿ ಮೈಸೂರು ಪಟ್ಟಣದಲ್ಲಿ ಪದ್ದತಿಯಂತೆ ಪ್ರಜಾಪ್ರತಿನಿಧಿ ಸಭೆ ಸೇರಿತು. ಅದರ ನಡವಳಿಕೆಗಳನ್ನು ’ಸ್ಟ್ಯಾಂಡರ್ಡ್’ ಪತ್ರಿಕೆಗೆ ವರದಿ ಮಾಡಲಿಕ್ಕಾಗಿ ಅದರ ಪ್ರತಿನಿಧಿ ಶ್ರೀ ಎಮ್. ಕೃಷ್ಣಯ್ಯಂಗಾರ್ ಎಂಬವರು ಆ ಸಭೆಯ ಪರಿಸರದಲ್ಲಿದ್ದರು. ಅಂದಿನ ಸರಕಾರದ ಸೆಕ್ರೆಟರಿಯವರು ಆತನನ್ನು ಕರೆದು ಆತನಿಗೆ ಅಲ್ಲಿ ಸ್ಥಳವಿಲ್ಲವೆಂದು ಹೇಳಿ ಆತನು ಅಲ್ಲಿಂದ ಹೊರಟುಹೋಗತಕ್ಕದೆಂದು ಆಜ್ಞೆ ಮಾಡಿದರು. ಆಗ ಅಲ್ಲಿದ್ದ ಪ್ರಮುಖ ಜನರು ಬಹುಮಂದಿ ಆಶ್ಚರ್ಯವನ್ನೂ, ಆಕ್ಷೇಪಣೆಯನ್ನೂ ಸೂಚಿಸಿದರು. ಆದರೆ ಸರಕಾರದ ಜಬರ್ದಸ್ತಿನ ಮುಂದೆ ಆಗ ಯಾರೂ ನಿಲ್ಲಲಾಗುತ್ತಿರಲಿಲ್ಲ ಎಂದು ಡಿವಿಜಿ ನೆನಪಿಸಿಕೊಂಡಿದ್ದಾರೆ.

ನಂತರ ಬಂದ ದಿವಾನ್ ವಿ.ಪಿ.ಮಾಧವರಾಯರಿಗೂ ಈ ’ಸ್ಟ್ಯಾಂಡರ್ಡ್’ ಪತ್ರಿಕೆ ಅನುಕೂಲವಾಗಿಲ್ಲವಾದ ಕಾರಣ ಮತ್ತು ಮೈಸೂರಿನಲ್ಲಿ ಎಮ್.ವೆಂಕಟಕೃಷ್ಣಯ್ಯ ನಡೆಸುತ್ತಿದ್ದ ’ಮೈಸೂರು ಹೆರಾಲ್ಡ್’ ಮತ್ತು ’ವೃತ್ತಾಂತ ಚಿಂತಾಮಣಿ’ಗಳೂ ಅವರಿಗೆ ವಿರೋಧವಾಗಿದ್ದ ಕಾರಣ ಪ್ರತೀಕಾರವಾಗಿ ದಿವಾನರು ಪತ್ರಿಕಾ ನಿರ್ಬಂಧದ ಕಾನೂನು ಮಾಡಿದ್ದರು ಎಂದು ಜನ ಹೇಳಿಕೊಂಡರು. ಆ ಕಾನೂನಿನ ಮೇಲೆ ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರಚಂಡವಾದ ಪ್ರತಿಭಟನ, ಕೋಲಾಹಲ ನಡೆಯಿತು. ಅದರಲ್ಲಿ ಮುಖ್ಯರಾಗಿದ್ದವರು ಬೆಂಗಳೂರಿನ ಅಡ್ವೋಕೇಟ್ ಡಿ.ವೆಂಕಟರಾಮಯ್ಯನವರು, ಶಿವಮೊಗ್ಗದ ಎಸ್.ಆರ್.ಬಾಲಕೃಷ್ಣರಾಯರು, ಕೆ.ಶಂಕರನಾರಾಯಣ ರಾಯರು. ಇವರು ಮಾಡಿದ ಖಂಡನೆಗಳಿಂದ ಕಾನೂನು ರದ್ದಾಗಲಿಲ್ಲ. ಆ ಕಾನೂನು ಅಸಂಗತವಾದದ್ದೆಂದು ಅಂಗೀಕರಿಸಿ ಅದರ ಕಟುತ್ವವನ್ನು ಕರಗಿಸಿದವರು ದಿವಾನ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಎಂದು ಡಿವಿಜಿ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ. ಕುಂದಾಪ್ರ ಡಾಟ್ ಕಾಂ ಅಂಕಣ.

ಹಿಂದಿನ ಗುಟ್ಟು
ವಿ.ಪಿ.ಮಾಧವರಾಯರಿಗೆ ಬ್ರಿಟಿಷ್ ಸರಕಾರದ ಅಧಿಕಾರಿಗಳು ದೆಹಲಿಯಿಂದಲೋ, ಬೆಂಗಳೂರಿನ ರೆಸಿಡೆನ್ಸಿಯಿಂದಲೋ ಪ್ರೇರಣೆಕೊಟ್ಟು ಆ ಕಾನೂನನ್ನು ನಿರ್ಬಂಧದಿಂದ ಆಗಮಾಡಿಸಿದರೆಂದು ಅವರ ಕಡೆಯವರು ಹೇಳುತ್ತಿದ್ದರಂತೆ. ಆದರೆ ಬ್ರಿಟಿಷರು ಇದನ್ನೊಪ್ಪಿಕೊಳ್ಳದೇ ಮೈಸೂರು ಸರ್ವಸ್ವತಂತ್ರವಾಗಿತ್ತೆಂದರಂತೆ. ಬ್ರಿಟಿಷರ ಇಂಗಿತವನ್ನು ವಿ.ಪಿ.ಮಾಧವರಾಯರು ತಿಳಿದುಕೊಂಡು ಬ್ರಿಟಿಷರ ಮುಖೋಲ್ಲಾಸಕ್ಕೋಸ್ಕರ ಕಾನೂನು ಮಾಡಿಸಿದರೆಂಬುದು ಇನ್ನೊಂದು ವಾದವಾಗಿತ್ತೆನ್ನುತ್ತಾರೆ ಡಿವಿಜಿ.

ತಿರುಗು ಬಾಣ
ತಮಾಷೆಯ ಸಂಗತಿಯೆಂದರೆ, ಮೈಸೂರಿನ ದಿವಾನ್‌ಗಿರಿಯಿಂದ ನಿವೃತ್ತರಾದ ಬಳಿಕ ವಿ.ಪಿ.ಮಾಧವರಾಯರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಆ ಮೇಲೆ ಒಂದು ಕಡೆ ಅವರೇ ಒಂದು ಬಹಿರಂಗ ಭಾಷಣದಲ್ಲಿ ತಮ್ಮ ಪತ್ರಿಕಾ ನಿರ್ಬಂಧದ ಕಾನೂನನ್ನು ಕುರಿತು ಉತ್ತರಕೊಡಬೇಕಾಗಿ ಬಂದಾಗ ಅದು ವಿಷಾದಕರ ಪ್ರಕರಣವೆಂದು ಒಪ್ಪಿಕೊಂಡು ಅದು ಹೇಗೋ ನಡೆದುಹೋಯಿತೆಂದೂ, ಅದರ ವಿವರಗಳನ್ನು ವಿಚಾರಿಸಿ ಪ್ರಯೋಜನವಿಲ್ಲವೆಂದೂ ಹೇಳಿ ಮುಗಿಸಿದರಂತೆ !

ಇದನ್ನು ಕುರಿತ ಡಿವಿಜಿ ಟಿಪ್ಪಣಿ ಹೀಗಿದೆ : ’ಸತ್ಯವು ಎಲ್ಲರೂ ಅಪೇಕ್ಷಿಸುವ ವಸ್ತುವೇ. ಆದರೆ ಅದನ್ನು ಕಂಡುಹಿಡಿಯುವುದು ಹೇಗೆ? ಇದಕ್ಕೆ ಸಂಬಂಧಪಟ್ಟ ದಾಖಲೆಗಳು ದಿವಾನ್ ಕಛೇರಿಯ (ವಿಧಾನಸೌಧದ) ದಫ್ತರುಖಾನೆಗಳಲ್ಲಿ ಅಡಗಿದ್ದಾವೋ ಹೇಗೋ, ಜಾಣರೂ, ದೂರದರ್ಶಿಗಳೂ ಆದ ಮಹನೀಯರು ತಮ್ಮ ಪ್ರತಿಷ್ಠೆಗೆ ಅನುಕೂಲವಲ್ಲದ ವಿಷಯಗಳನ್ನು ದಾಖಲೆ – ದೂಖಲೆಗಳಲ್ಲಿ ರುಜುವಾತಿಗೆ ಬಿಟ್ಟುಕೊಟ್ಟಾರೇ?’

ಒಂದು ನೂರು ವರುಷಗಳ ಹಿಂದಿನ ಕತೆಯಿದು. ವರುಷ ನೂರು ಕಳೆದರೂ ಕತೆ ಇನ್ನೂ ಬದಲಾಗಿಲ್ಲ ಎಂಬುದೇ ವ್ಯಥೆ.

Leave a Reply

Your email address will not be published. Required fields are marked *

six + 6 =