ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಹೆಗ್ಗಳಿಕೆ ಉಡುಪಿ ಜಿಲ್ಲೆಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಫಲಿತಾಂಶ ಪಡೆಯುವಲ್ಲಿ ನಮ್ಮ ಶಿಕ್ಷಕರ ಶ್ರಮ ಶ್ಲಾಘನೀಯವಾದುದು. ಈ ಭಾರಿಯು ಉಡುಪಿ ಜಿಲ್ಲೆಯ ವಿದಾರ್ಥಿಗಳು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಲೋಪಾರ್ಪಣೆಗೊಳಿಸಿದ ಬಳಿಕ ಮಾತನಾಡಿ ಶಿಕ್ಷಣಾಧಿಕಾರಿಗಳ ಕಛೇರಿಯ ಮೂಲಕ ಶಿಕ್ಷಕರಿಗೆ ಸರಕಾರದಿಂದ ಆಗಬೇಕಾದ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಿಕೊಡುವ ಕೆಲಸವಾಗಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಉತ್ತಮ ಸವಲತ್ತು ಸೌಲಭ್ಯ ಸಿಗುವಂತಾಗಬೇಕು. ಬೈಂದೂರಿನಲ್ಲಿ ಗುರುಭವನ ನಿರ್ಮಾಣದ ಮನವಿಯನ್ನು ಪುನರ್‌ಪರಿಶೀಲಿಸಿ ಶೀಘ್ರವೇ ಜಾಗ ಗುರುತಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಬೈಂದೂರು ತಾಲೂಕು ರಚನೆಗೆ ಪೂರಕವಾಗಿ ಇನ್ನು ಇಪ್ಪತ್ತು ಸರಕಾರಿ ಕಛೇರಿಗಳು ಬೈಂದೂರು ಭಾಗದಲ್ಲಿ ಆಗಬೇಕಾಗಿದೆ. ಎಪ್ರಿಲ್ ಅಂತ್ಯದೊಳಗೆ ಎಲ್ಲಾ ಸರಕಾರಿ ಕಛೇರಿಗಳು ಬೈಂದೂರು ತಾಲೂಕಿನಲ್ಲಿ ಕಾರ್ಯಾಚರಿಸಬೇಕಿದೆ. ಬೈಂದೂರನ್ನು ಒಂದು ಮಾದರಿ ತಾಲೂಕನ್ನಾಗಿ ರೂಪಿಸಲು ನಮ್ಮೆಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶಂಕರ ಪೂಜಾರಿ, ಸುರೇಶ್ ಬಟವಾಡಿ, ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯರಾದ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ಪುಪ್ಪರಾಜ ಶೆಟ್ಟಿ, ಜಗದೀಶ್ ದೇವಾಡಿಗ, ಡಿಡಿಪಿಐ ದಿನಕರ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಬೈಂದೂರು ವಲಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್‌ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್. ಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಹಿಂದೂಸ್ತಾನಿ ಶಾಲೆಯ ಸಹಶಿಕ್ಷಕಿ ಶ್ಯಾಮಲಾ ಪ್ರಾರ್ಥಿಸಿದರು. ಆಲೂಕು ಸರಕಾರಿ ಪ್ರೌಢಶಾಲಾ ಮುಖ್ಯೋಪಧ್ಯಾಯ ನಾಗೇಶ ನಾಯ್ಕ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ರವೂಫ್ ಧನ್ಯವಾದಗೈದರು. ಶಿಕ್ಷಕರುಗಳಾದ ಗಣಪತಿ ಹೋಬಳಿದಾರ್, ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು.