ಈ ಸಾಧಕನಿಗೆ ಸವಾಲುಗಳೆಂದರೆ ಪ್ರೀತಿ. ಸವಾಲುಗಳನ್ನು ಎದುರಿಸುವುದೆಂದರೆ ಮೀನಿನಂತೆ ಮುನ್ನುಗ್ಗಿ ಬರುವ ಅಲೆಗಳ ವಿರುದ್ಧ ಈಜಿದಂತೆ. ಕೊನೆಯ ಕ್ಷಣದಲ್ಲಿ ಗಿನ್ನಿಸ್ ದಾಖಲೆ ಕೈತಪ್ಪಿದ್ದರಿಂದ ಒಂದಿಷ್ಟು ದಿನ ಹತಾಶೆಗೆ ಒಳಗಾಗಿ ಮತ್ತೆ ಮೈಕೊಡವಿ ನಿಂತರು. ಈಗ ಗಿನ್ನಿಸ್ ಸೇರುವ ಪ್ರಯತ್ನಕ್ಕೆ ಸಿದ್ಧರಾಗುತ್ತಿದ್ದಾರೆ. ಈಜಿ ವಿಶ್ವದ ಪುಟ ಸೇರುವೆ ಎನ್ನುವ ಪ್ರಬಲ ಆತ್ಮ ದಾಢ್ರ್ಯತೆಯೊಂದಿಗೆ ಮತ್ತೊಮ್ಮೆ ಶರಧಿಗೆ ಸವಾಲೆಸೆಯಲು ಸಿದ್ಧರಾಗಿದ್ದಾರೆ ಲಿಮ್ಕಾ ದಾಖಲೆಯ ಈಜುಗಾರ ಗೋಪಾಲ್ ಖಾರ್ವಿ.
ಅಂದು ಜನವರಿ 8. 2012. ಕೋಡಿ ಕನ್ಯಾನದ ಮೀನುಗಾರ ಕುಟುಂಬದ ಸಾಹಸಿ ಪ್ರತಿಭೆ ಗಿನ್ನಿಸ್ ಪುಟ ಸೇರಲು ಹೊರಟ ಕ್ಷಣ. ಇನ್ನೆನೂ ಗೋಪಾಲ ಖಾರ್ವಿ ಗಿನ್ನಿಸ್ ಪುಟ ಸೇರಿ ಬಿಟ್ಟರೂ ಎನ್ನುವಷ್ಟರಲ್ಲಿ ಸಣ್ಣ ತಾಂತ್ರಿಕ ಅಡಚಣೆಯಿಂದ ಗಿನ್ನಿಸ್ ರೆಕಾರ್ಡ್ ಗೋಪಾಲ ಖಾರ್ವಿಯವರ ಕೈ ಜಾರಿ ಹೋಯಿತು. ಬಹಳಷ್ಟು ಶ್ರಮ, ಆರ್ಥಿಕ ಕ್ರೋಡೀಕರಣ, ಬೆಟ್ಟದಷ್ಟು ಅಭಿಮಾನಿಗಳ ನಂಬಿಕೆ ಎಲ್ಲವೂ ಧರಾಶಾಹಿಯಾಗಿ ಬಿಟ್ಟಿತ್ತು.
ಸಾಧಕನಿಗೆ ಸವಾಲುಗಳೆಂದರೆ ಪ್ರೀತಿ. ಈ ಈಜು ಮೀನಿಗೂ ಅಷ್ಟೇ. ಸವಾಲೆಂದರೆ ಮುನ್ನುಗ್ಗಿ ಬರುವ ಅಲೆಯ ವಿರುದ್ಧ ಈಜಿದಂತೆ. ಒಂದಿಷ್ಟು ದಿನ ಹತಾಶೆಗೆ ಒಳಗಾದರೂ ಮತ್ತೆ ಮೈಕೊಡವಿ ನಿಂತರು. ಇನ್ನೊಮ್ಮೆ ಪ್ರಯತ್ನ, ಮರಳಿ ಯತ್ನಕ್ಕೆ ಸಿದ್ಧರಾಗಿಯೇ ಬಿಟ್ಟರು. ಮಾಡುವೆ, ಈಜಿ ವಿಶ್ವದ ಪುಟ ಸೇರುವೆ ಎನ್ನುವ ಪ್ರಬಲ ಆತ್ಮ ದಾಢ್ರ್ಯತೆಯೊಂದಿಗೆ ಮತ್ತೊಮ್ಮೆ ಶರಧಿಗೆ ಸವಾಲೆಸೆಯಲು ಸಿದ್ಧರಾಗಿದ್ದಾರೆ.
ಗಿನ್ನಿಸ್ ದಾಖಲೆ ಮಾಡುವುದರೆಂದರೆ ಸುಮ್ಮನೆ ಅಲ್ಲ. ಲಂಡನ್‍ನಿಂದ ಗಿನ್ನಿಸ್ ಅಧಿಕಾರಿಗಳು ಬರಬೇಕು, ಬಾರೀ ಮೊತ್ತದ ಜಿ.ಪಿ.ಎಸ್ ಕ್ಯಾಮರ ಬೇಕು, ಲಕ್ಷಗಟ್ಟಲೆ ಹಣ ಬೇಕು. ಈ ಭಾರೀ ಮೊತ್ತವನ್ನು ಸಾಧಾರಣ ಮೀನುಗಾರ ಕುಟುಂಬದ ಸಾಹಸಿಗೆ ಹೊಂದಿಸಲು ಕಷ್ಟ. ಮತ್ತೊಮ್ಮೆ ಮನಸ್ಸು ಮಾಡಿದ ಮೇಲೆ ಹೊಂದಿಸಲೇ ಬೇಕು. ಅದಕ್ಕಾಗಿ ಗೋಪಾಲ ಖಾರ್ವಿ ಹಗಲಿರುಳು ವಿಟಮಿನ್ ಎಂನದ್ದೆ ಚಿಂತೆಯಲ್ಲಿದ್ದಾರೆ. ಗೋಪಾಲ ಖಾರ್ವಿಯರ ಚಿಂತೆಗೆ ಗೆಳೆಯರು, ದಾನಿಗಳು, ಧಾರ್ಮಿಕ ಮುಂದಾಳುಗಳ ಧೈರ್ಯದ ಮಾತುಗಳೊಂದಿಗೆ ಬೆಂಬಲಕ್ಕೆ ನಿಂತಿದ್ದಾರೆ. ಆ ನಿಟ್ಟಿನಲ್ಲಿ ಗೋಪಾಲ ಖಾರ್ವಿ, ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಕ್ರಿಯಾ ಸಮಿತಿ ರಚನೆ ಮಾಡಲಾಗಿದೆ. ಕ್ರಿಯಾ ಸಮಿತಿಯ ಮೂಲಕ ಆರ್ಥಿಕ ಸಂಗ್ರಹಣೆ ಆಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಇದೇ ಡಿಸಂಬರ್ ನಲ್ಲಿ ಗೋಪಾಲ ಖಾರ್ವಿ ಶರಧಿಗೆ ಮತ್ತೊಮ್ಮೆ ಸವಾಲು ಹಾಕಲಿದ್ದಾರೆ.
ಗೋಪಾಲ್ ನಡೆದ ಹಾದಿ:
ಕೋಡಿ ಕನ್ಯಾನದ ರಾಧಾ ಬಾಯಿ-ನಾಗೇಶ ಖಾರ್ವಿಯವರ ಪುತ್ರ ಈ ಗೋಪಾಲ ಖಾರ್ವಿ ಎನ್ನುವ ಯಂಗ್‍ಮ್ಯಾನ್. ನೀರಿನಲ್ಲಿ ಮೀನಿಗೆ ಪ್ರತಿಸ್ಪರ್ಧಿಯಾಗಿ ಈಜುವ ಈ ಈಜುಭಟ ತನ್ನ ಕೈಯನ್ನು ಬೆನ್ನ ಹಿಂದೆ ಸಂಕೋಲೆಯಿಂದ ಬಂಧಿಸಿ, ಎರಡು ಕಾಲುಗಳನ್ನು ಕಬ್ಬಿಣದ ಕೋಳದಿಂದ ಕಟ್ಟಿ ಸಮುದ್ರದಲ್ಲಿ 15 ಕಿ.ಮೀ ದೂರವನ್ನು ಈಜುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ 2011ರಲ್ಲಿ ಸೇರ್ಪಡೆಗೊಂಡವರು. ಈ ಸಾಧನೆಗೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2011 ನೀಡಿ ಗೌರವಿಸಿತು.
ಬಾಲ್ಯವನ್ನು ಈಜುವಿಕೆಯಲ್ಲಿಯೇ ಸಂಭ್ರಮಿಸಿದ ಗೋಪಾಲ ಖಾರ್ವಿ ಅರಬ್ಬಿ ಸಮುದ್ರದಲ್ಲಿ ಆರು ಗಂಟೆಗಳಲ್ಲಿ 40 ಕಿ.ಮೀ. ದೂರವನ್ನು ಈಜಿ ಬೆರಗುಗೊಳಿಸಿದರು. 2004ರಲ್ಲಿ ಮಲ್ಪೆ ಕಡಲ ಉತ್ಸವದಲ್ಲಿ 400 ಮೀ. ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಅದೇ ವರ್ಷ ಡಿಸಂಬರ್ 10ರಂದು ಗಂಗೊಳ್ಳಿ ಹಾಗೂ ಮಲ್ಪೆ ಬೀಚ್‍ಗಳ ಮಧ್ಯೆ 80 ಕಿ.ಮೀ ದೂರವನ್ನು 11:30 ಗಂಟೆಗಳಲ್ಲಿ ಈಜಿ ದಾಖಲೆ ನಿರ್ಮಿಸಿದರು. ಕಡಲಪುತ್ರ ಗೋಪಾಲ ಖಾರ್ವಿಯವರ ಸಾಹಸಗಾಥೆ 9ನೇ ತರಗತಿ ಕೊಂಕಣಿ ಪಠ್ಯ ಪುಸ್ತಕದಲ್ಲಿ ಅಚ್ಚಾಗಿದೆ.
ಭರಪೂರ ತಯಾರಿ:
ಇದೇ ಡಿಸೆಂಬರ್‍ನಲ್ಲಿ ಗಿನ್ನಿಸ್ ದಾಖಲೆ ಈಜಿಗೆ ತಾಲೀಮು ಪ್ರಾರಂಭವಾಗಿದೆ. ಲಂಡನ್ನಿಂದ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿಗಳನ್ನು ಕರೆಯಿಸಿ, ಅವರ ಸಮ್ಮುಖದಲ್ಲಿ ಅರಬ್ಬಿ ಸಮುದ್ರದಲ್ಲಿರುವ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‍ನ ತನಕ ಈಜುವ ಸಾಧನೆ ನಡೆಯಲಿದೆ. ಸುಮಾರು ರೂ.10.50 ಲಕ್ಷ ರೂಪಾಯಿಗಳನ್ನು ವ್ಯಯಿಸಬೇಕಾಗಿದ್ದು, ವಿಶ್ವದಲ್ಲಿ ಯಾರೂ ಮಾಡದ ಈ ವಿಶಿಷ್ಟವಾದ ಸಮುದ್ರ ಈಜಿನ ವಿಶ್ವ ದಾಖಲೆ ಮಾಡುವ ಸದವಕಾಶ ದೊರೆತಿರುವ ಮೀನುಗಾರ ಕುಟುಂಬದ ಅಟೋ ಚಾಲಕನಿಗಿಗ ಆರ್ಥಿಕ ಬೆಂಬಲ ಬೇಕಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕೋಡಿ ಕನ್ಯಾನದ ಗೋಪಾಲ ಖಾರ್ವಿ ಗಿನ್ನಿಸ್ ಪುಟದಲ್ಲಿ ದಾಖಲಾಗುತ್ತಾರೆ.
ದಾಖಲೆಗೆ ಬೇಕಿದೆ ರೂ.10.50 ಲಕ್ಷ!
ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್ ತನಕ ಕಾಲುಗಳಿಗೆ ಕಬ್ಬಿಣದ ಸಂಕೋಲೆಯಿಂದ ಬಿಗಿದು, ಕೈಯನ್ನು ಬೆನ್ನಿನ ಹಿಂಭಾಗಕ್ಕೆ ಕೋಳದಿಂದ ಬಂಧಿಸಿ, ಬೀಗ ಜಡಿದು ವಿಶಿಷ್ಠ ಈಜಿನ ಒಂದು ಅಪೂರ್ವ ಚಮತ್ಕಾರಿಕ ಕ್ರೀಡೆಯ ಒಂದಿಷ್ಟು ಹೊತ್ತು ಪ್ರದರ್ಶನಕ್ಕೆ ಬೇಕಾಗಿರುವುದು ರೂ.10.50ಲಕ್ಷ! ದೊಡ್ಡ ಮೊತ್ತವೇ ಗಿನ್ನಿಸ್ ಅಧಿಕಾರಿಗಳ ವೆಚ್ಚವಾಗುತ್ತದೆ. ರೂ.60,000 ಜಿ.ಪಿ.ಎಸ್. ಕ್ಯಾಮರಕ್ಕಾದರೆ, ಕ್ಯಾಮರ, ವಿಡಿಯೋ ಫೋಟೋಗೆ ಅಂತ ರೂ.40,000 ಬೇಕು. ದೋಣಿ ಬಾಡಿಗೆ ರೂ.15,000, ವಾಹನ ಬಾಡಿಗೆ, ಸ್ಟೇಜ್,ಮುದ್ರಣ, ಅಂಚೆ, ಸೌಂಡ್ಸ್, ಹೀಗೆ ಒಟ್ಟು 10,50,000 ಬೇಕು. ಈ ಮೊತ್ತವನ್ನು ಸಂಗ್ರಹಿಸುವುದ ಸಾಮಾನ್ಯ ಅಟೋ ಚಾಲಕನಿಂದ ಸಾಧ್ಯವಾಗುತ್ತಿಲ್ಲ ದಾನಿಗಳ ಆರ್ಥಿಕ ಸಹಕಾರವೂ ಬೇಕಾಗಿದೆ.
ಸಹಕರಿಸುವ ಉದಾರಿಗಳು
ಕಾರ್ಪೋರೇಷನ್ ಬ್ಯಾಂಕ್ IFSC-CORP 0000179
ಖಾತೆ ಸಂಖ್ಯೆ 017900101017077
ಶ್ರೀ ಗೋಪಾಲ ಖಾರ್ವಿ ಗಿನ್ನಿಸ್ ರೆಕಾರ್ಡ್ ಕ್ರಿಯಾ ಸಮಿತಿ ಇಲ್ಲಿಗೆ ಸಲ್ಲಿಸಬಹುದಾಗಿದೆ.
ಸಂಪರ್ಕ ಸಂಖ್ಯೆ-9481510272, 9342631784.
ಲೇಖನ- ನಾಗರಾಜ್ ವಂಡ್ಸೆ
ಪತ್ರಕರ್ತರು