ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

Call us

Call us

Call us

ಶ್ರೇಯಾಂಕ ಎಸ್ ರಾನಡೆ
ವಾರ್ಷಿಕ ಆಯವ್ಯಯ ಸರ್ಕಾರದ ನಿಜವಾದ ಯಶಸ್ಸಿನ ಅಥವಾ ವೈಫಲ್ಯದ ಗುಟ್ಟು. ಹಾಗಾಗಿ ಪ್ರತೀ ವರ್ಷ ಮಂಡನೆಯಾಗುವ ಬಜೆಟ್ ತನ್ನದೇ ಮಹತ್ವ ಪಡೆದಿದೆ. 2023-24ನೇ ಸಾಲಿನ ಬಜೆಟ್ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಮುನ್ನ ಮಂಡನೆಯಾಗುತ್ತಿರುವ ಕೊನೆಯ ಪೂರ್ಣಕಾಲಿಕ ಬಜೆಟ್. ಹಾಗಾಗಿ ಎಲ್ಲರನ್ನೂ ಮೆಚ್ಚಿಸುವ ಜನಪ್ರಿಯ ಮತ್ತು ಆರ್ಥಿಕತೆ ದಾರಿ ತಪ್ಪದಂತೆ ನೋಡಿಕೊಳ್ಳುವುದು ಅನಿವಾರ್ಯ. ಸಹಜವಾಗಿ ಕುತೂಹಲವೂ ಬೆಟ್ಟದಷ್ಟಿದೆ.

Call us

Click Here

ಪ್ರಸ್ತುತ ವಿಶ್ವದ ಆರ್ಥಿಕತೆ 0.5%-1% ಬೆಳವಣಿಗೆ ದರದೊಂದಿಗೆ ಕತ್ತಲೆಯಲ್ಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ ಐಎಂಎಫ್‌ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಉಲ್ಲೇಖಸಿರುವಂತೆ ಭಾರತ ವೇಗವಾಗಿ ಬೆಳೆಯುತ್ತಿರುವ bright spot. ಅಂದರೆ ಭರವಸೆಯ ಬೆಳಕಿನ ಕಿಡಿ ಎಂದು ಅರ್ಥ. 2022ನೇ ಸಾಲಿನಲ್ಲಿ ಭಾರತದ ನಿಜವಾದ(real) ಜಿಡಿಪಿ ಬೆಳವಣಿಗೆ ದರ 7% ಎಂದು ಆರ್ಥಿಕ ಸಮೀಕ್ಷೆ ದಾಖಲಿಸಿದೆ. 2023-24ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರ 6.5%-6.8% ಇರಲಿದೆ ಎಂದು ಅಂದಾಜಿಸಿದೆ. ಭಾರತದ ಮಹತ್ವಾಕಾಂಕ್ಷೆಗೆ ಈ ಬೆಳವಣಿಗೆ ದರ ಸಾಕಾಗುವುದಿಲ್ಲ. ಆದರೆ ಕೋವಿಡ್‌ ನಂತರದ ಯುದ್ಧ ಮತ್ತು ಜಾಗತಿಕ ಅಸ್ಥಿರತೆಯ ಸಧ್ಯದ ಪರಿಸ್ಥಿತಿಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ದರ ಸಮಾಧಾನಕಾರ. ಬಜೆಟ್ ಸರಿಯಾಗಿದ್ದಾರೆ ದೇಶದ ವರ್ತಮಾನ-ಭವಿಷ್ಯವೂ ಸರಿಯಾಗಿರುತ್ತದೆ.

ಹಿಂಜರಿತದ ಬಿಸಿ: ಕೊರೆನಾ ಸಮಯದಲ್ಲಿ ಆರ್ಥಿಕ ಪುನಶ್ಚೇತನ ನೀಡುವ ಉದ್ದೇಶದಿಂದ ಎಲ್ಲಾ ದೇಶಗಳು ಕಡಿಮೆ ಬಡ್ಡಿದರ ನೀತಿಯನ್ನು ಅನುಸರಿಸಿದವು. ಪರಿಣಾಮ ಹಣದುಬ್ಬರ ಏರತೊಡಗಿತು. ಹಾಗಾಗಿ ಎಲ್ಲಾ ದೇಶಗಳು ಬಡ್ಡಿದರವನ್ನು ಏರಿಸತೊಡಗಿದವು ಮತ್ತು ಕೋವಿಡ್ ನಂತರ ನಿರೀಕ್ಷಿತ ಪ್ರಮಾಣದ ಆರ್ಥಿಕ ಬೆಳವಣಿಗೆ ನಡೆಯದಿರುವ ಕಾರಣ ಆರ್ಥಿಕ ಹಿಂಜರಿತದ ಪರಿಸ್ಥಿತಿ (Recession) ಎದುರಾಗಿದೆ. ಅತ್ತ ಆರ್ಥಿಕ ಚಟುವಟಿಕೆಯೂ ಕುಂಟಿತ, ಆಂತರಿಕ ಉತ್ಪಾದನೆಯ(GDP) ಬೆಳವಣಿಗೆ ದರವೂ ಕುಸಿಯುತ್ತಿದೆ. ಜಾಗತಿಕವಾಗಿ ಈಗಾಗಲೇ ಅನೇಕ ದೊಡ್ಡ ಕಂಪೆನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಭಾರತಕ್ಕೆ ಹಿಂಜರಿತದ ನಿಜವಾದ ಬಿಸಿ ಇನ್ನಷ್ಟೇ ತಟ್ಟಬೇಕಿದೆ. ಈ ಪ್ರಕ್ರಿಯೆಯನ್ನು ತಡೆಯಲು ಶೀಘ್ರವೇ ಕ್ರಮ ಕೈಗೊಳ್ಳಬೇಕು.

ಜಾಗತಿಕವಾಗಿ ಹಿಂಜರಿತದ ಜೊತೆ, ಕೋವಿಡ್ ನ ಹೊಸ ಅಲೆಗಳ ಸವಾಲು, ಚೀನದಲ್ಲಿ ಮುಗಿಯದ ಕೋವಿಡ್ ಮತ್ತು ಪೂರೈಕೆಯ ಸವಾಲುಗಳು. ರಷ್ಯಾ-ಉಕ್ರೇನ್ ಯುದ್ಧದ ಕಾರಣ ಜಾಗತಿಕವಾಗಿ ಎದುರಾಗಿರುವ ಇಂಧನ ಕೊರತೆ ಈಗಾಗಲೇ ಪಾಶ್ಚಾತ್ಯ ದೇಶಗಳ ಆರ್ಥಿಕ ಬೆಳವಣಿಗೆಗೆ ದೊಡ್ಡ ಪೆಟ್ಟನ್ನು ನೀಡಿವೆ. ಆಹಾರ ಉತ್ಪನ್ನಗಳು, ರಸಗೊಬ್ಬರ, ಸ್ಟೀಲ್ ಸೇರಿದಂತೆ ಅನೇಕ ವಸ್ತುಗಳ ಬೆಲೆಯೇರಿಕೆ ಎಲ್ಲಾ ಚಟುವಟಿಕೆಗಳಿಗೆ ಹಿನ್ನಡೆಯನ್ನುಂಟುಮಾಡಿದೆ. ಆದರೂ ರಷ್ಯಾದೊಂದಿಗಿನ ಸ್ನೇಹ ಮತ್ತು ಜಾಗತಿಕವಾಗಿ ಯಾರ ಒತ್ತಡಕ್ಕೂ ಮಣಿಯದೇ ಸ್ವತಂತ್ರ ನಿಲುವನ್ನು ಹೊಂದಿರುವ ಕಾರಣ ರಷ್ಯಾದಿಂದ ಭಾರತ ಕಡಿಮೆ ದರಕ್ಕೆ ಇಂಧನ ಮತ್ತು ಇತರ ಸೌಲಭ್ಯಗಳು ಸಿಗುವ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದ ಕಷ್ಟದ ಸಮಯದಲ್ಲೂ ಭಾರತಕ್ಕೆ ಹೆಚ್ಚು ಹಾನಿಯಾಗಿಲ್ಲ. ಆದರೂ ಯುದ್ಧದ ದೀರ್ಘಕಾಲೀನ ಪರಿಣಾಮ ಇತರ ಆರ್ಥಿಕತೆಗಳಂತೆ ಭಾರತದ ಮೇಲೂ ಗಂಭೀರ ಪರಿಣಾಮವಾಗಲಿದೆ.

ಇದರೊಂದಿಗೆ ಆಂತರಿಕವಾಗಿ ಹಣದುಬ್ಬರ, ನಿರುದ್ಯೋಗ, ಹೆಚ್ಚಿನ ಬಡ್ಡಿದರ, ಅದಾನಿ ಷೇರು ವ್ಯವಹಾರದ ಕುರಿತ ಗೊಂದಲಗಳು, ಕೋವಿಡ್ ನಂತರದಲ್ಲಿ ಪೂರ್ತಿಯಾಗಿ ಚೇತರಿಸಿಕೊಳ್ಳದ ಆರ್ಥಿಕ ವಲಯಗಳು, ಹೊಸ ಕಾಲದ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿರುವ ಸವಾಲುಗಳು ಎದುರಾಗಿವೆ. ಬಜೆಟ್ ನಲ್ಲಿ ಈ ಸವಾಲುಗಳಿಗೆ ಉತ್ತರ ನೀಡುವುದು ಅನಿವಾರ್ಯ.

Click here

Click here

Click here

Click Here

Call us

Call us

ಭಾರತ 3.1 ಟ್ರಿಲಿಯನ್‌ ಜಿಡಿಪಿಯೊಂದಿಗೆ ವಿಶ್ವದ ವೇಗವಾಗಿ ಬೆಳೆಯುವ, ಬಲಿಷ್ಠ ಮತ್ತು ವಿಶ್ವದ 5 ನೇ ದೊಡ್ಡ ಆರ್ಥಿಕತೆಯಾಗಿದೆ. ಇದನ್ನು ಇನ್ನಷ್ಟು ಸುಸ್ಥಿರಗೊಳಿಸುವುದು ಸರ್ಕಾರದ ಉದ್ದೇಶ. ಹಿಂಜರಿತದ ಕಾರಣ ಖಾಸಗಿ ಹೂಡಿಕೆಯೇ ಕಷ್ಟಕರ. ಅಮೆರಿಕದ ಕೇಂದ್ರಿಯ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರ ಏರಿಸುತ್ತಿದೆ. ಇದರಿಂದ ಹೂಡಿಕೆದಾರರು ಅಮೆರಿಕದತ್ತ ಮುಖ ಮಾಡಿದ್ದಾರೆ. ಅದರೊಂದಿಗೆ ಅಮೆರಿಕನ್‌ ಡಾಲರ್‌ ಎದುರು ಭಾರತದ ರುಪಾಯಿ ಮೌಲ್ಯ ಕುಸಿಯುತ್ತಿದೆ. ಹಾಗಾಗಿ ಆಮದು ಮಾಡಿಕೊಳ್ಳುವ ಸಮಯದಲ್ಲಿ ಭಾರತ ಹೆಚ್ಚುವರಿ ಹಣ ಪಾವತಿಯ ಹೊರೆ ತೆರಬೇಕಿದೆ. ಇದರಿಂದ ಆಮದಿನ ಸಮಯದ ವ್ಯಾಪಾರ ವಿನಿಮಯ ಕೊರತೆ (Current Account Deficit) ಹೆಚ್ಚಾಗಲಿದೆ. ಇದೆಲ್ಲವನ್ನೂ ಸರಿದೂಗಿಸಿ ಬೆಳವಣಿಗೆಗೆ ಉತ್ತೇಜನ ನೀಡಲು ಹೆಚ್ಚುವರಿ ಹೂಡಿಕೆ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಇದಕ್ಕಾಗಿ ಸರಕಾರ ಹೆಚ್ಚುವೆರಿ ಸಾಲ ಮಾಡಬೇಕು ಅಥವಾ ಸರಕಾರಿ ಸಂಪತ್ತನ್ನು ಖಾಸಗೀಕರಣಗೊಳಿಸುವ ಅಥವಾ ಖಾಸಗಿಗೆ ಬಾಡಿಗೆಗೆ ಕೊಡುವ ಪ್ರಕ್ರಿಯೆ ನಡೆಸಬೇಕು. ಅದೀಗ ಅನಿವಾರ್ಯ. ಈಗಾಗಲೇ ಭಾರತ ಸರ್ಕಾರ 100 ಲಕ್ಷ ಕೋಟಿಯ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಆರಂಭಿಸಿದೆ. ರಸ್ತೆ, ರೈಲ್ವೆ ಸೇರಿದಂತೆ ಮೂಲಸೌಕರ್ಯಗಳನ್ನು ನಿರ್ಮಿಸುವುದು ಉದ್ದೇಶ. ಈ ರೀತಿಯ ಹೂಡಿಕೆಗೆ ಹಣ ಹೊಂದಿಸಲು ಸಾಲ ಮಾಡಬೇಕೆಂಬುದೇನೋ ನಿಜ. ಆದರೆ ಆ ಸಾಲ ಉತ್ಪಾದನೆಗೆ ಹೂಡಿಕೆಯಾದರೆ ಅದರಿಂದ ದೇಶಕ್ಕೆ ಹೊರೆಯಲ್ಲ. ಕೇವಲ ಉಚಿತ ಯೋಜನೆ ನೀಡಿದರೆ ಸಾಲಮಾಡಿ ತುಪ್ಪ ತಿಂದಂತೆ. ಇದಕ್ಕಾಗಿ ಸರ್ಕಾರ ಕೆಲವು ಉಚಿತ ಸಬ್ಸಿಡಿ ಯೋಜನೆಗಳನ್ನು ಕಡಿತಗೊಳಿಸಬೇಕಾಗಬಹುದು.

ಇದು ಜನಪ್ರಿಯ ನಡೆಯಲ್ಲದಿದ್ದರೂ ಸರ್ಕಾರದ ಆರ್ಥಿಕ ಶಿಸ್ತು ಸ್ಥಾಪಿಸಲು, ವಿತ್ತಿಯ ಕೊರತೆ ತಗ್ಗಿಸಲು ಮತ್ತು ಹೆಚ್ಚು ಉದ್ಯೋಗ ಸೃಷ್ಟಿಸಲು, ಕೈಗಾರಿಕಾ ಉತ್ಪಾದನೆ ಹೆಚ್ಚಿಸಲು ಇದು ಅನಿವಾರ್ಯ. ಜಿಡಿಪಿಯ 14% ಇರುವ ಉತ್ಪಾದನಾ ವಲಯವನ್ನು 25%ಕ್ಕೆ ಏರಿಸುವುದು ಬೆಳೆಯುತ್ತಿರುವ ಭಾರತದ ಅಶೋತ್ತರಗಳನ್ನು ಮುಟ್ಟಲು ಅನಿವಾರ್ಯ. ಹಾಗಾದಾಗ ಮಾತ್ರ 2030ರ ಹೊತ್ತಿಗೆ ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ 5 ಟ್ರಿಲಿಯನ್‌ ಜಿಡಿಪಿ ತಲುಪಿ, ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಸಾಧ್ಯ.

ಈಗಾಗಲೇ ಮೋದಿ ಸರಕಾರ ಆಹಾರ ಮತ್ತು ಇಂಧನ ಉಚಿತ ಯೋಜನೆಗಳನ್ನು ಕಡಿತ ಗೊಳಿಸುವ ಹಾದಿಯಲ್ಲಿದೆ. ಇದರಿಂದ ಸರ್ಕಾರಕ್ಕೆ ಕನಿಷ್ಠ 1 ಟ್ರಿಲಿಯನ್ ರೂಪಾಯಿಗಳಷ್ಟು ಹೆಚ್ಚುವರಿ ಉಳಿತಾಯವಾಗಲಿದೆ. ಆದರೆ ಪಿ.ಎಂ. ಕಿಸಾನ್‌ ಮೂಲಕ ರೈತಾಪಿವರ್ಗಕ್ಕೆ, ಅಂತ್ಯೋದಯ ಅನ್ನ ಯೋಜನೆಯಂತಹ ಸಹಾಯಧನಗಳು ಬೊಕ್ಕಸಕ್ಕೆ ಹೊರೆಯಾದರೂ ಸಮಸ್ಯೆಯಲ್ಲಿರುವ ಜನರಿಗೆ ಅನುಕೂಲವನ್ನೂ ಒದಗಿಸಿದೆ. ಹಣಕಾಸಿನ ಕಡಿತ ಮತ್ತು ಹಂಚಿಕೆ ಸರಿದೂಗಿಸುವುದೂ ದೊಡ್ಡ ಸವಾಲು. ಕೊಡಲೂಬೇಕು, ಕೊಡಲುಬಾರದು ಎಂಬ ಗೊಂದಲ ವಿತ್ತ ಇಲಾಖೆಯದ್ದು. ಆದರೆ ಈ ವರ್ಷ ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಈ ಬಜೆಟ್ ಉದ್ಯೋಗ ಸೃಷ್ಟಿ, ಉತ್ಪಾದನೆ ಕೇಂದ್ರಿತ ಆಯಾಮದಲ್ಲಿ ಜನಪ್ರಿಯ, ಜನಪರ ಆಗಬಹುದು ಎಂಬ ನಿರೀಕ್ಷೆಯಿದೆ.

ಆದರೆ ಅನೇಕ ಸಂಕಟಗಳ ನಡುವೆ ಸ್ವಲ್ಪ ಎಡವಿದರೂ ದಾರಿ ತಪ್ಪಬಹುದಾದ ಆರ್ಥಿಕತೆಯನ್ನು ಸರಿದಾರಿಗೆ ತರುವುದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ಬಹುಮುಖ್ಯ ಸವಾಲು. ಅಭಿವೃದ್ಧಿಯೇ ಬಜೆಟ್ ನ ಆಧಾರಸ್ತಂಭವಾಗಿರಲಿದೆ. ಈಗಾಗಲೇ ಕೊರೋನದ ಬಿಕ್ಕಟ್ಟು, ಹೆಚ್ಚುವರಿ ಹೂಡಿಕೆ ಮತ್ತು ಅನೇಕ ಸಾಮಜಿಕ ಭದ್ರತಾ ಯೋಜನೆಗಳ ಕಾರಣ ಸರ್ಕಾರದ ವಿತ್ತಿಯ ಕೊರತೆ ಜಿಡಿಪಿಯ 6.5%ಗೆ ಏರಿದೆ. ಇದನ್ನು FRBM Act ಪ್ರಕಾರ ಮುಂದಿನ ಎರಡು, ಮೂರು ವರ್ಷಗಳಲ್ಲಿ ಕನಿಷ್ಟ 4.5%ಗೆ ಇಳಿಸುವುದು ಅನಿವಾರ್ಯ. ರಾಜ್ಯಗಳಲ್ಲಿ ವಿತ್ತಿಯ ಕೊರತೆ ಪ್ರಮಾಣ 3-3.5% ನಷ್ಟು ಇರುವುದು ಮತ್ತೊಂದು ಸವಾಲು. ಈಗಿನ ಈ ಆರ್ಥಿಕ ಹೊರೆಯನ್ನೇ ತಗ್ಗಿಸುವ ಬದಲು ಚುನಾವಣೆ ಗೆಲ್ಲಲು ಬೊಕ್ಕಸ ಬರಿದು ಮಾಡುವ ಉಚಿತ ಯೋಜನೆಗಳನ್ನು ರಾಜಕೀಯ ಪಕ್ಷಗಳು ಘೋಷಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಶ್ರೀಲಂಕಾ, ಪಾಕಿಸ್ತಾನ ಮೊದಲಾದ ದೇಶಗಳ ಪರಿಸ್ಥಿತಿ ಭಾರತಕ್ಕೆ ಬರಬಾರದು. ಹಾಗಾಗಿ ಆರ್ಥಿಕ ಶಿಸ್ತು ಬಹಳ ಮುಖ್ಯ.

ಕೋವಿಡ್ ನಂತರ ಭಾರತ ಅತೀ ವೇಗವಾದ ಬೆಳವಣಿಗೆ ಧರವನ್ನು ಸಾಧಿಸಿತ್ತು. ಲಾಕ್‌ ಡೌನ್‌ ಕಾರಣದಿಂದ ಕುಗ್ಗಿದ್ದ ಆರ್ಥಿಕತೆ ಚೇತರಿಕೆಯಾದಾಗ ದೊಡ್ಡ ಬೆಳವಣಿಗೆಯ ಜಿಗಿತದಂತೆ ಕಂಡಿತು (8.7% 2020-21). ಆದರೆ ಈ ಮಹಾಜಿಗಿತದ ನಡುವೆ ಅನೇಕ ವಲಯಗಳು ಕುಸಿದುಹೋಗಿದ್ದನ್ನು ಗಮನಿಸುವುದಿಲ್ಲ. ಅದರ ಹೊರತಾಗಿಯೂ ಈ ಪ್ರಕ್ರಿಯೆಯಲ್ಲಿ ಭಾರತದ ಆರ್ಥಿತೆಯಲ್ಲಿ ಸಾಕಷ್ಟು ಬದಲಾವಣೆಯಾಗಿ ಹೊಸ ಕ್ಷೇತ್ರಗಳಲ್ಲಿ ಅವಕಾಶ ಮತ್ತು ಉದ್ಯೋಗಗಳು ಸೃಷ್ಟಿಯಾಗಿವೆ. ಇದರೊಂದಿಗೆ ವಿಶ್ವ ನಿಧಾನವಾಗಿ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಬ್ಲಾಕ್ಚೈನ್, ಮಷೀನ್ ಲರ್ನಿಂಗ್, ಶುದ್ಧ ಇಂಧನ ಮೊದಲಾದ ತಂತ್ರಜ್ಞಾನಗಳತ್ತ ಮುಖ ಮಾಡಿದೆ. ಇದರಿಂದ ವೇಗದ ಕೆಲಸ ಮಾತ್ರ ಆಗುತ್ತಿಲ್ಲ, ಅನೇಕ ಉದ್ಯೋಗಗಳೂ ಕಡಿತಗೊಳ್ಳುತ್ತಿವೆ. ಇನ್ನು ಜಗತ್ತಿನ ಆರ್ಥಿಕತೆಗೆ ಕರಾಳ ಛಾಯೆಯಾಗಿ ಪರಿಣಾಮಿಸಬಹುದಾದ ಕ್ರಿಪ್ಟೋ ಕರೆನ್ಸಿಯ ಪರಿಣಾಮ, ಭಾರತದ ವಹಿವಾಟುಗಳ ಮೇಲೆ ಆಗುತ್ತಿರುವ ಪ್ರಭಾವಕ್ಕೂ ಈಗಿನಿಂದಲೇ ಉತ್ತರ ಹುಡುಕುವುದು ಅನಿವಾರ್ಯ.

ಭಾರತ ನಿಧಾನವಾಗಿ ಶುದ್ಧ ಇಂಧನ ಮೂಲಗಳತ್ತ ಸಾಗುತ್ತಿದೆ. ಈ ವಲಯದ ಅಭಿವೃದ್ಧಿ, ರೂಪಾಂತರಕ್ಕೆ ಹಣಕಾಸು ಬೇಕಾಗಬಹುದಾದರೂ ಭವಿಷ್ಯದಲ್ಲಿ ಹೆಚ್ಚುವರಿ ಇಂಧನ ಹೊರೆ, ಒಪೆಕ್‌ ದೇಶಗಳ ಮೇಲಿನ ಅವಲಂಭನೆ ತಗ್ಗಿಸಲು ಸಹಾಯಕ. ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮತ್ತು ಸುಧಾರಣೆ, ಸಿರಿಧಾನ್ಯ, ಎಣ್ಣೆಕಾಳುಗಳ ಹೆಚ್ಚಿನ ಪ್ರಮಾಣದ ಉತ್ಪಾದನೆ ಆತ್ಮನಿರ್ಭರ ಭಾರತಕ್ಕೆ ಅನಿವಾರ್ಯ. ಗ್ರಾಮೀಣಾಭಿವೃದ್ಧಿ, ಕೃಷಿ, ಆರೋಗ್ಯ ಮತ್ತು ಇತರ ಸೇವಾ ವಲಯಗಳು, ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಕೊಟ್ಟಾಗ ಮಾತ್ರ ಭಾರತದ ವೇಗಕ್ಕೆ ಗತಿ ಒದಗುವುದು. ಕಳೆದ ಬಾರಿಯ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ 25 ವರ್ಷಗಳು ಭಾರತದ ಸುವರ್ಣ ಕಾಲ. ಈ ಅವಧಿಯಲ್ಲಿ ಭಾರತದ ಆರ್ಥಿಕತೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ ಎಂದು ಹೇಳಿದ್ದರು. ಅದಕ್ಕೆ ಬೇಕಾದ ದೂರದೃಷ್ಟಿಯ ಯೋಜನೆಗಳು ಇನ್ನಷ್ಟೇ ಜಾರಿಯಾಗಬೇಕು. ಭಾರತರತದ ಬೆಳವಣಿಗೆಗೆ ಇಂಬು ಕೊಡುವುದು ಈ ಅವಧಿಯ ಆಶಯ ಮತ್ತು ಅನಿವಾರ್ಯತೆ. ಹಾಗಾಗಿ ಎಲ್ಲಾ ವಲಯಗಳಲ್ಲಿ ಸರ್ಕಾರವೇ ಹೆಚ್ಚುವರಿ ಹೂಡಿಕೆ ಮಾಡಬೇಕಿದೆ. ಮತ್ತಷ್ಟು ಸಾಲ ಮಾಡಬಾರದು ಎಂದರೆ ಯೋಜನೆಗಳಿಗೆ ಹಣಕಾಸು ಹೊಂದಿಸಲು Monetisation pipeline, disinvestment, PPP ಮಾದರಿಗೆ ಮೊರೆ ಹೋಗುವುದು ಅನಿವಾರ್ಯ.

ಭಾರತವನ್ನು ಬೆಳವಣಿಗೆಯ ಹಾದಿಯಲ್ಲಿ ಮೇಲೆತ್ತಲು ಸರ್ಕಾರವೇ ಹೂಡಿಕೆ ಮಾಡಲಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗದು. ಹೂಡಿಕೆಯ ಮೂಲಕವೇ ಭಾರತದ ಗತಿ ಶಕ್ತಿ ರೂಪಿಸುವುದು ಈ ಬಾರಿಯ ಬಜೆಟ್‌ ಕೆಲಸವಾಗಲಿದೆ. ಮಧ್ಯಮ ವರ್ಗ, ಬಡ ಜನರ, ತೆರಿಗೆದಾರರ ಮತ್ತು ಉದ್ಯೋಗಶೀಲರ ಆಶೋತ್ತರಗಳನ್ನು ಈಡೇರಿಸುವ ಕಸರತ್ತು ನಡೆಯಲಿದೆ. ಇದರೊಂದಿಗೆ ಭಾರತದ ಆರ್ಥಿಕತೆಯ ಪ್ರಸ್ತುತ ಮತ್ತು ಮೂಲಭೂತ ಸವಾಲುಗಳನ್ನು ಕೈಬಿಡುವಂತಿಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು, ಮತಗೆಲ್ಲುವ ಘೋಷಣೆ-ಯೋಚನೆಗಳನ್ನು ಕೈಬಿಡುವುದು ಕಷ್ಟ. ಆದರೆ ಯಾವ ವಲಯಗಳಲ್ಲಿ ಯಾವ ಅಂಕಿ ಸಂಖ್ಯೆಗಳಲ್ಲಿ ಆಟವಾಡಿ ಇದನ್ನು ಸಾಧಿಸುತ್ತಾರೆ ಎಂಬುದೇ ಈ ಹೊತ್ತಿನ ಸವಾಲು. ಭಾರತ ಮತ್ತು ಭಾರತೀಯರ ಆಶೋತ್ತರ ಈಡೇರಿಸಲು ಆಶಾದಾಯಕ, ಚೇತೋಹಾರಿ ಬಜೆಟ್‌ ಅನ್ನು ಮಾರುಕಟ್ಟೆ ಮತ್ತು ಜನರು ನಿರೀಕ್ಷಿಸುತ್ತಿದ್ದಾರೆ. ಕೊರೊನ ಸಮಯದ ಅನುಭವ ಮತ್ತು ಹಿಂದಿನ ಬಜೆಟ್‌ಗಳ ಪಾಠ ವಿತ್ತ ಸಚಿವರ ಜೊತೆಗಿದೆ. ಈ ಹಿನ್ನೆಲೆಯಲ್ಲಿ ಯಾವ ಗೇಮ್‌ ಚೇಂಜರ್‌ ಯೋಜನೆ, ಆಲೋಚನೆ ನೀಡಬಹುದೆಂಬ ನಿರೀಕ್ಷೆ ಎಲ್ಲರದ್ದಾಗಿದೆ.

ಕೊನೆಗೆ ಇದೀಗ ಅದಾನಿ ಪ್ರಕರಣ ಭಾರತದ ಮಾರುಕಟ್ಟೆಯಲ್ಲಿ ಆಗಬಹುದಾದ ದೊಡ್ಡ ಮುಗ್ಗಟ್ಟು ಅಥವಾ ಬದಲಾವಣೆಯತ್ತ ಬೊಟ್ಟು ಮಾಡುತ್ತಿದೆ. ಈ ಪ್ರಕರಣದ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಭಾರತದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮವನ್ನು ಇದು ಬೀರಬಹುದು. ಭಾರತದ ಆರ್ಥಿಕತೆಯ ಅಡಿಪಾಯ ಗಟ್ಟಿ ಇದೆ ಅನ್ನುವುದು ನಿಜವಾದರೂ, ಎಲ್ಲಾ ವಲಯಗಳಲ್ಲಿ ಸುಧಾರಣೆಗಳು ಆಗುತ್ತಿರಬೇಕು. ಪವರ್ ನಿಂದ ಟವರ್ ತನಕದ ಸುಧಾರಣೆಗಳು ಆಗದ ಹೊರತು ಎಲ್ಲಾ ವಲಯಗಳಲ್ಲಿ ಆಗಾಗ ಒಂದಲ್ಲ ಒಂದು ಆರ್ಥಿಕತೆಯಲ್ಲಿನ ನಿರ್ಮಿತ ಗುಳ್ಳೆಗಳು ಹೊಡೆಯಲಾರಾಂಭಿಸುತ್ತವೆ. ಇದು ಭಾರತದ ಆರ್ಥಿಕತೆಗೆ ಕಂಟಕವಾಗಬಲ್ಲದು.

Leave a Reply