ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಥಳೀಯ ಟಾರ್ಪೆಡೋಸ್ ತಂಡದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ‘ಟಿಪಿಎಲ್-2017’ ಅಂತರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಉದ್ಘಾಟನೆಗೊಂಡಿತು.
ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿ ಮಾತನಾಡಿ ವಿದೇಶದಲ್ಲಿ ಹುಟ್ಟಿದ ಕ್ರಿಕೆಟ್ ಇಂದು ವಿಶ್ವ ವ್ಯಾಪಿಯಾಗಿದೆ. ಎಲ್ಲಾ ವರ್ಗದ ಜನರ ಆಕರ್ಷಣೆಯ ಪಂದ್ಯವಾಗಿರುವ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದಾಗಿ ದೇಹಕ್ಕೆ ವ್ಯಾಯಾಮದೊಂದಿಗೆ ಇತರರಲ್ಲಿ ಪ್ರೀತಿ ಬೆಳೆಯುತ್ತದೆ ಎಂದರು.
ಕ್ರಿಕೆಟ್ ಆಟಕ್ಕೆ ಹೆಸರುವಾಸಿಯಾಗಿದ್ದ ಕುಂದಾಪುರದ ಚಕ್ರವರ್ತಿ ಹಾಗೂ ಟಾರ್ಪೆಡೋಸ್ ಸಂಸ್ಥೆಗಳ ಕ್ರೀಡಾ ಪ್ರೋತ್ಸಾಹ ಶ್ಲಾಘನೀಯ. ವಿದೇಶದಲ್ಲಿ ದುಡಿಯುತ್ತಿರುವ ನಮ್ಮ ಊರಿನ ಯುವಕರನ್ನು ಇಲ್ಲಿ ಸೆಳೆಯುವ ಪ್ರಯತ್ನ ಆಗಿದೆ. ದುಡಿಯುಮೆಯ ಜತೆಯಲ್ಲಿ ಕ್ರಿಕೆಟ್ ಬೆಳೆಸುವ ಯುವಕರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು
ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಉದ್ಯಮಿಗಳಾದ ಸದಾನಂದ ನಾವುಡ, ಗಣೇಶ್ ಕಾಮತ್, ರಮೇಶ್ ಶೆಟ್ಟಿ, ನಾಗಭೂಷಣ ರೆಡ್ಡಿ, ಶಾಂತಾರಾಮ್ ಶೆಟ್ಟಿ ಮಂಗಳೂರು, ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ, ಮೂಡಾ ಸದಸ್ಯ ವಸಂತ ಬರ್ನಾಡ್ ಮಂಗಳೂರು, ಇಬ್ರಾಹಿಂ ಮುಲ್ಕಿ, ಡಾ.ದಿಶಾ ದಿನಕರ್, ಟಾರ್ಪೆಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ಇದ್ದರು.
ಈ ಸಂದರ್ಭದಲ್ಲಿ ಹಿರಿಯ ಕ್ರಿಕೆಟ್ ಆಟಗಾರ ಹರಿಪ್ರಸನ್ನ ಪಿ ಭಟ್ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಉದ್ಯಮಿ ಇಬ್ರಾಹಿಂ ಗಂಗೊಳ್ಳಿ ಅವರನ್ನು ಗೌರವಿಸಲಾಯಿತು. ಟಾರ್ಪೆಡೋಸ್ ಸಂಸ್ಥೆಯ ಗೌರವಾಧ್ಯಕ್ಷ ವಿಜಯನಾಥ್ ಹೆಗ್ಡೆ ಸ್ವಾಗತಿಸಿದರು, ವಿಲಾಸ್ ಹೆಗ್ಡೆ ಬೆಂಗಳೂರು ನಿರೂಪಿಸಿದರು.