ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟಿಗೆ ಸಂಬಂಧಿಸಿದಂತೆ ಆಳ್ವಾಸ್ ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಪ್ರಾರಂಭಿಸಲಿದೆ. ಸಂಪೂರ್ಣ ಎರಡು ವರ್ಷಗಳ ಉಚಿತ ಶಿಕ್ಷಣದ ಪೂರ್ಣಾವಧಿ ಡಿಪ್ಲೋಮ ಕೋರ್ಸ್ ಇದಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು ಅಥವಾ ೧೬ರಿಂದ೨೫ ವರ್ಷದೊಳಗಿನ ವಯೋಮಿತಿಯವರಿಗೆ ಅವಕಾಶ ಕಲ್ಪಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಮಾಡುತ್ತಾ ಕಾಲೇಜು ಶಿಕ್ಷಣವನ್ನು ಪಡೆಯುವ ಹಂಬಲವಿದ್ದವರಿಗೆ ದೂರ ಶಿಕ್ಷಣದಡಿಯಲ್ಲಿ ಉಚಿತವಾಗಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಕೋರ್ಸ್‌ನ್ನು ಮಾಡುವ ಸದವಕಾಶವನ್ನು ತೆರೆದಿಟ್ಟಿದೆ. ಸಂಸ್ಥೆಯಿಂದ ಮಾಸಿಕ ವಿದ್ಯಾರ್ಥಿ ವೇತನವನ್ನು ಪಡೆಯುವುದರ ಜೊತೆಗೆ ತೆಂಕುತಿಟ್ಟು ಮತ್ತು ಬಡಗುತಿಟ್ಟನ್ನು ಪ್ರತ್ಯೇಕವಾಗಿ ಕಲಿಯುವ ಕೋರ್ಸ್ ಇದಾಗಿದೆ.
ಪ್ರಸಕ್ತ ಯಕ್ಷಗಾನ ಡಿಪ್ಲೋಮ ಕೋರ್ಸ್‌ನಲ್ಲಿ ಯಕ್ಷಗಾನದ ಹಿಮ್ಮೇಳ-ಮುಮ್ಮೇಳಜ್ಞಾನ, ಯೋಗ-ಪ್ರಾಣಾಯಾಮ,ಪುರಾಣಜ್ಞಾನ ಪರಿಚಯ, ಪ್ರಾತ್ಯಕ್ಷಿಕೆಗಳು, ಕೋರಿಯೋಗ್ರಫಿಯ ಅಧ್ಯಯನ, ಯಕ್ಷಗಾನ ಛಂದಸ್ಸು ಸೇರಿದಂತೆ ಯಕ್ಷಗಾನಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತ ಸಾಮಾನ್ಯಜ್ಞಾನ ಹಾಗೂ ಕರ್ನಾಟಕ ಸಂಗೀತದ ಪ್ರಾಥಮಿಕ ಬೋಧನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇಂದಿನ ಅಗತ್ಯತೆಗಳಿಗನುಗುಣವಾಗಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್‌ನ್ನು ಈ ಡಿಪ್ಲೋಮ ಕೋರ್ಸ್‌ನಡಿಯಲ್ಲಿ ಜಾರಿಗೊಳಿಸಲಾಗಿದೆ.
ಪ್ರಾಯೋಗಿಕ ಬೋಧನೆಯ ಜೊತೆಗೆ ಪಾಠ್ಯಬೋಧನೆ ಹಾಗೂ ನಾಡಿನ ಅನುಭವಿ ಯಕ್ಷಗಾನ ಬೋಧಕರಿಂದ ಕಲಿಯುವ ಸದಾವಕಾಶವನ್ನು ಈ ಡಿಪ್ಲೋಮ ಕೋರ್ಸ್ ನೀಡಲಿದೆ. ಕಲಾಕೇಂದ್ರಗಳಿಗೆ ಭೇಟಿ, ಯೋಜಿತಕಾರ್ಯ, ಬೇರೆ ಕಲೆಗಳ ಪರಿಚಯ ಮೊದಲಾದ ಪಾಠ್ಯಕ್ರಮವನ್ನು ಈ ಡಿಪ್ಲೋಮ ಕೋರ್ಸ್ ಹೊಂದಿದ್ದು ಯಕ್ಷಗಾನವನ್ನು ಸಮಗ್ರಕಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾಡಿನ ಯಕ್ಷಗಾನ ವಿದ್ವಾಂಸರ ಸಲಹೆ ಸೂಚನೆಯ ಮೇರೆಗೆ ಈ ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಪ್ರಾರಂಭಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಯಕ್ಷಗಾನ ವಿದ್ವಾಂಸರಾದ ಡಾ.ಪ್ರಭಾಕರ ಜೋಶಿ, ಗುಂಡ್ಮಿ ಸದಾನಂದ ಐತಾಳ್, ಡಾ.ರಾಘವ ನಂಬಿಯಾರ್, ಶ್ರೀಧರ ಡಿ.ಎಸ್, ಕಿಶನ್ ಹೆಗ್ಡೆ, ಡಾ. ಚಿನ್ನಪ್ಪ ಗೌಡ, ಡಾ. ಧನಂಜಯ ಕುಂಬ್ಳೆ, ಕದ್ರಿ ನವನೀತ್ ಶೆಟ್ಟಿ ಇವರು ಆಳ್ವಾಸ್ ಯಕ್ಷಗಾನ ಡಿಪ್ಲೋಮ ಕೋರ್ಸ್ ಇದರ ಸಲಹಾ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪಿಆರ್‌ಒ ಡಾ.ಪದ್ಮನಾಭ ಶೆಣೈ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ದೀವಿತ್ ಕೋಟ್ಯಾನ್ ಉಪಸ್ಥಿತರಿದ್ದರು.
ಕೋರ್ಸ್‌ನ ವಿಶೇಷತೆಗಳು:
* ಸಂಪೂರ್ಣ ಉಚಿತ ಶಿಕ್ಷಣ
* ಎರಡು ವರ್ಷದ ಪೂರ್ಣಾವಧಿ ಡಿಪ್ಲೊಮ ಕೋರ್ಸ್
* ವಿದ್ಯಾರ್ಹತೆ- ಎಸ್.ಎಸ್.ಲ್.ಸಿ ಪಾಸ್ ಅಥವಾ ಫೇಲ್
* ವಯೋಮಿತಿ- ೧೬ ರಿಂದ ೨೫ ವರ್ಷದೊಳಗೆ
* ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಮಾಸಿಕ ವಿದ್ಯಾರ್ಥಿ ವೇತನ
* ಉಚಿತವಾಗಿ ದೂರಶಿಕ್ಷಣದಡಿಯಲ್ಲಿ SSLC, PUC, Degree ಕೋರ್ಸ್ ಮಾಡಲು ಅವಕಾಶ.
* ಪ್ರಾಯೋಗಿಕ ಬೋಧನೆಯ ಜೊತೆಗೆ ಪಾಠ್ಯಬೋಧನೆ
* ನಾಡಿನ ಅನುಭವಿ ಯಕ್ಷಗಾನ ಬೋಧಕರಿಂದ ಕಲಿಯುವ ಅವಕಾಶ
* ಪ್ರತ್ಯೇಕವಾಗಿ ತೆಂಕು ಹಾಗೂ ಬಡಗುತಿಟ್ಟುವಿನ ತರಗತಿ.
ಪಠ್ಯದಲ್ಲಿ ಯಕ್ಷಗಾನ:
* ಹಿಮ್ಮೇಳ-ಮುಮ್ಮೇಳ (ತೆಂಕು ಮತ್ತು ಬಡಗು) ಸಂಪೂರ್ಣ ಪರಿಚಯ
* ಯೋಗ-ಪ್ರಾಣಾಯಾಮ ಇತ್ಯಾದಿ ಯಕ್ಷಗಾನ ಪೂರಕ ಚಟುವಟಿಕೆ
* ಇಂದಿನ ಅಗತ್ಯತೆಗನುಗುಣವಾಗಿ
* ಪುರಾಣ ಜ್ಞಾನ ಪರಿಚಯ (ರಾಮಾಯಣ ಮತ್ತು ಮಹಾಭಾರತ ಹಾಗು ಯಕ್ಷಗಾನಕ್ಕೆ ಸಂಬಂಧಿಸಿದ ಇತರ ಕಾವ್ಯ)
* ಯಕ್ಷಗಾನಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತ ಬೋಧನೆ
* ಕರ್ನಾಟಕ ಸಂಗೀತದ ಪ್ರಾಥಮಿಕ ಬೋಧನೆ
* ಯಕ್ಷಗಾನ ಛಂದಸ್ಸಿನ ಅಧ್ಯಯನ
* ೬ ತಿಂಗಳ ಯೋಜಿತ ಕಾರ್ಯ(project work)
* ಯಕ್ಷಗಾನ ಕೋರಿಯೋಗ್ರಫಿಯ ಅಧ್ಯಯನ
* ನಾಡಿನ ಪ್ರಖ್ಯಾತ ಕಲಾವಿದರಿಂದ ಪ್ರಾತ್ಯಕ್ಷಿಕೆಗಳು
* ಯಕ್ಷಗಾನಾಧಾರಿತ ನಿರಂತರ ಚಟುವಟಿಕೆಗಳು