ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜು, ಕುಂದಾಪುರ ಮತ್ತು ಕಾರ್ಮಿಕ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜು ಕುಂದಾಪುರದ ಎ.ವಿ.ಹಾಲ್‌ನಲ್ಲಿ ಜರುಗಿತು.
ಕುಂದಾಪುರದ ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಚಂದ್ರಶೇಖರ ಬಣಕಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಜೂನ್ ೧೨ ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸುತ್ತಿದ್ದು, ಚಿಕ್ಕ ಮಕ್ಕಳಿಂದ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ಕೈಬಿಟ್ಟು, ಮಗುವಿನ ದೈಹಿಕ, ಮಾನಸಿಕ ಮತ್ತು ಬೌಧ್ಧಿಕ ಬೆಳವಣಿಗೆ ಸಹಾಯವಾಗುವ ಪೂರಕ ಅಂಶಗಳನ್ನು ಪೂರೈಸಿ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವುದರ ಜೊತೆಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬದುಕುವ ಅವಕಾಶವನ್ನು ಕಲ್ಪಿಸಬೇಕು ಹಾಗೂ ಅಂತಹವರನ್ನು ಶಾಲೆಗಳಿಗೆ ಸೇರಿಸುವಲ್ಲಿ ಎಲ್ಲರೂ ಸಹಕರಿಸಿದಾಗ ಮಾತ್ರ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಸಾಧ್ಯ ಎಂದು ಹೇಳಿ ಪ್ರತಿಜ್ಷಾ ವಿಧಿ ಭೋದಿಸಿದರು.
ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ, ಕುಂದಾಪುರ ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ ನಾಯ್ಕ, ಕುಂದಾಪುರ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪುರದ ವಕೀಲರಾದ ಹಂದಕುಂದ ಅಶೋಕ ಶೆಟ್ಟಿ ಇವರು ಬಾಲ ಕಾರ್ಮಿಕ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ ೧೯೮೬ಕ್ಕೆ ತಿದ್ದುಪಡಿ ಆಗಿ ಭಾರತ ಸರ್ಕಾರ ೨೦೧೬ರ ಅಧಿಸೂಚನೆ ಪ್ರಕಾರ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆಯನ್ನು ತಿದ್ದುಪಡಿ ಮಾಡಿದ್ದು, ಆ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ, ಈ ಕಾನೂನು ಉಲ್ಲಂಘನೆ ಮಾಡಿದವರಿಗೆ ಗರಿಷ್ಟ ೨ ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ. ೫೦ ಸಾವಿರ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
ಕುಂದಾಪುರ ಕಾರ್ಮಿಕ ನಿರೀಕ್ಷಕರಾದ ಶ್ರೀ ಡಿ.ಎಸ್. ಸತ್ಯನಾರಾಯಣ ಇವರು ಸ್ವಾಗತಿಸಿ, ಕುಂದಾಪುರ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸರೋಜ ಇವರು ಕಾರ್ಯಕ್ರಮ ನಿರೂಪಿಸಿ, ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಗಣೇಶ ಇವರು ವಂದಿಸಿದರು.















