ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೀವಜಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳದೇ ಇರುವುದರಿಂದ ಉಡುಪಿ ಜಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಿದೆ. ಭೂಮಿಯನ್ನು ತಂಪಾಗಿರಿಸುತ್ತಿದ್ದ ಅರಣ್ಯ ಸಂಪತ್ತು ವರ್ಷದಿಂದ ವರ್ಷಕ್ಕೆ ನಾಶವಾಗುತ್ತಿರುವುದು ನೀರಿಗೆ ಕೊರೆತೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಬಾಂಡ್ಯ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಇಂಗುಗುಂಡಿ ನೋಡಬನ್ನಿ ಜಲಸಂರಕ್ಷಣಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಳ್ಳಿ ನೀರಿನ ವ್ಯವಸ್ಥೆ ಹೆಚ್ಚಾದಂತೆ ಅದರ ದುರುಪಯೋಗವೂ ಹೆಚ್ಚಾಗಿದೆ. ಕೊಳವೆ ಬಾವಿಯಿಂದಾಗಿ ನೀರಿನ ಮಟ್ಟ ಕುಸಿದಿದೆ. ಮಳೆ ನೀರಿನ ಕೊಯ್ಲು, ಇಂಗು ಗುಂಡಿ, ಇಂಗು ಬಾವಿಯಂತಹ ನೀರಿಂಗಿಸುವ ವಿಧಾನವನ್ನು ಒಳಗೊಂಡು ನೀರು ಉಳಿಸುವ ಕಾರ್ಯಕ್ಕೆ ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಬಿಡಬೇಕಾದ ಸಂದರ್ಭ ಬಂದೊದಗಲಿದೆ ಎಂದರು.
ಜಲ ತಜ್ಞ ಶ್ರೀಪಡ್ರೆ ಮಾತನಾಡಿ ಕೃತಕವಾಗಿ ನೀರು ಇಂಗಿಸುವ ಕ್ರಮ ಅಳವಡಿಸಿಕೊಳ್ಳುವುದು ಅನಿವಾರ್ಯ. ಕಾಡು ನಾಶ ಮಾಡಿದ್ದಕ್ಕೆ ಇದೊಂದು ಪ್ರಾಯಶ್ಚಿತದಂತೆ ಮಾಡಬೇಕಾದ ಕಾರ್ಯ. ಬುದ್ದಿವಂತರ ನಾಡೆಸಿಕೊಂಡಿರುವ ಜಿಲ್ಲೆಯಲ್ಲಿ ನೀರಿನ ಬಗೆಗೆ ಆಸಕ್ತಿ ಇಲ್ಲದೇ ಹೋದರೆ ಕಷ್ಟವಾದಿತು. ಜನಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಡಳಿತ ಯಂತ್ರಕ್ಕೆ ಅಂಟಿಕೊಳ್ಳದೇ ಜನರೇ ಒಂದಾಗಿ ಸ್ವಪ್ರೇರಣೆಯಿಂದ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ವಕ್ವಾಡಿ ಗುರುಕುಲ ಸಂಸ್ಥೆ ಸ್ವಪ್ರೇರಣೆಯಿಂದ ಭಾರಿಗೆ ಕೈಗೊಂಡ ಇಂಗು ಬಾವಿ ಪ್ರಯೋಗ ಕರಾವಳಿಗೆ ಮಾದರಿ ಎನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಶೆಟ್ಟಿ, ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ನಿರ್ದೇಶಕರುಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಇಂಗು ಬಾವಿಯ ಕುರಿತು ಜಲತಜ್ಞ ಶ್ರೀಪಡ್ರೆ ಅವರು ಉಪನ್ಯಾಸ ನಡೆಸಿಕೊಟ್ಟರು. ಗುರುಕುಲದಲ್ಲಿ ನಿರ್ಮಿಸಲಾದ ಎರಡು ಇಂಗುಬಾವಿ ಹಾಗೂ ಇಂಗು ಗುಂಡಿಗಳ ಬಗೆಗೆ ವೀಕ್ಷಕರಿಗೆ ಮಾಹಿತಿ ನೀಡಲಾಯಿತು.