14ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ಟರು ಕುಂದಾಪ್ರ ಡಾಟ್ ಕಾಂ ಗೆ ಅವರ ಮನೆಯಲ್ಲಿ ಮಾತಿಗೆ ಸಿಕ್ಕಾಗ ಹಂಚಿಕೊಂಡ ಒಂದಿಷ್ಟು ವಿಚಾರಗಳು:
* 14ನೇ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಈ ಬಗ್ಗೆ ತಮಗೆ ಎನೆನ್ನಿಸುತ್ತಿದೆ.
ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದು ಸಹಜವಾಗಿ ನನಗೆ ಖುಷಿ ತಂದಿದೆ. ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸದಸ್ಯನಾಗಿ, ಕಾರ್ಯದರ್ಶಿಯಾಗಿ, ಸಮ್ಮೇಳನಗಳ ವಿವಿಧ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿರುವುದು ಕನ್ನಡದ ಬಗೆಗೆ ಹಲವು ಅನುಭವಗಳನ್ನು ನೀಡಿದೆ. ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ 14ನೇ ಸಮ್ಮೇಳನದ ಸ್ವಾಗತಿ ಸಮಿತಿ ಹಾಗೂ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷನನ್ನಾಗಿ ಆಯ್ಕೆಮಾಡಿರುವುದು ನನ್ನು ಒಂದು ಹೊಸ ಅನುಭವಕ್ಕೆ ದಾರಿ ಮಾಡಿಕೊಟ್ಟಿದೆ.
* ನಿಮ್ಮ ದೃಷ್ಟಿಯಲ್ಲಿ ಸಾಹಿತ್ಯವೆಂದರೇನು?
ಹಿತೇನ ಯುಕ್ತಂ. ಹಿತದಿಂದ ಕೂಡಿರುವುದೇ ಸಾಹಿತ್ಯ. ಅದು ನಮ್ಮ ಬರವಣಿಗೆಯಾಗಿರಬಹುದು ಇಲ್ಲವೇ ಭಾಷೆಯ ಅಭಿವ್ಯಕ್ತಿಯಲ್ಲಾಗಿರಬಹುದು. ಸಾಹಿತ್ಯ ಸೃಷ್ಟಿಸುವಾತ ತನಗೆ ಮತ್ತು ಸಮಾಜದ ಇತರರಿಗೆ ಹಿತವನ್ನುಂಟುಮಾಡಬೇಕು. ಹಿತದಲ್ಲಿ ಪ್ರಿಯ ಮತ್ತು ಹಿತ ಎಂಬ ಎರಡು ಅರ್ಥವನ್ನು ಕಾಣಬಹುದು. ನಮಗೆ ಸಂತೋಷವನ್ನುಂಟುಮಾಡುವ ಕ್ರಿಯೆಗಳೆಲ್ಲ ಪ್ರಿಯವಾಗಬಹುದೇ ಹೊರತು ಹಿತವನ್ನುಂಟುಮಾಡುವುದಿಲ್ಲ. ಹಿತ ನಮಗೆ ಪರಿಣಾಮದಲ್ಲಿ ಒಳ್ಳೆಯದನ್ನು ಮಾಡುತ್ತದೆ.
ಬರೆದದ್ದಲ್ಲಾ ಸಾಹಿತ್ಯವೆಂದು ಹೇಳಲಾಗದು. ಸಾಹಿತ್ಯ ನಮ್ಮ ಬದುಕು, ಚಿಂತನೆ, ಪರಿಸರಕ್ಕೆ ಒಳ್ಳೆಯ ಪರಿಣಾಮವನ್ನುಂಟುಮಾಡಬೇಕು. ಸಾಹಿತ್ಯ ಭಾಷೆಯ ರೂಪದ ಕಲೆ. ಇದು ನಮ್ಮ ಭಾವನೆಯನ್ನು ಅರಳಿಸಬೇಕು. ಅದನ್ನೇ ಹಿತವೆನ್ನುತ್ತೇವೆ. ಸಾಹಿತ್ಯದೊಳಗಿನ ವಿಷಯವಸ್ತು ಸಮಾಜಕ್ಕೆ ಒಳ್ಳೆಯದನ್ನುಂಟುಮಾಡಬೇಕು.
* ಇಂದಿನ ಸಾಹಿತ್ಯದ ಸವಾಲುಗಳೇನು?
ಇಂದು ಸಾಹಿತಿಗಳು ಬರೆದದ್ದನ್ನು ಸ್ವೀಕರಿಸುವ, ಓದುವ, ಮೆಚ್ಚುವ ಮತ್ತು ಅದಕ್ಕೆ ಪ್ರತಿಕ್ರಿಯೆಯನ್ನು ಸೂಚಿಸುವ ಒಂದು ವರ್ಗ ಬೇಕಾಗಿದೆ. ಓದುವವರು ಹಾಗೂ ಕೇಳುವವರ ಸಂಖ್ಯೆ ಕಡಿಮೆಯಾದಂತೆ ಅದನ್ನು ಸೃಷ್ಟಿಸುವ ಪ್ರಕ್ರಿಯೇಯೂ ಕಡಿಮೆಯಾಗುತ್ತದೆ. ಇಂದು ಜೀವನದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಸಾಹಿತ್ಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸುಲಭದಲ್ಲಿ ಸಿಗುತ್ತಿರುವ ಟಿ.ವಿ, ಮೊಬೈಲ್ ಇವುಗಳಿಂದಾಗಿ ಕಲಿಯುವ ಮಗುವಿಗೆ ಕಥೆ ಪುಸ್ತಕ ಓದಬೇಕು ಎಂದೆನಿಸುವುದಿಲ್ಲ. ಅಂದು ಓದುಗರ ಒಂದು ದೊಡ್ಡ ವರ್ಗವೇ ಇರುತ್ತಿತ್ತು. ಆ ಕಾಲದಲ್ಲಿ ಬಿ.ಎ ಮುಗಿಸಿದವರು ಸುಮಾರಾಗಿ ಎಲ್ಲಾ ಕಾದಂಬರಿಗಳನ್ನು ಓದಿ ಮುಗಿಸಿರುತ್ತದ್ದರು. ಇಂದಿನವರಿಗೆ ಕಾರಂತರ ಕಾದಂಬರಿ, ವೈದೇಹಿಯ ಕಥೆಗಳ ಬಗ್ಗೆಯಾಗಲಿ, ಜಾನಪದ ಸಾಹಿತ್ಯದ ಗಂಧಗಾಳಿಯಾಗಲಿ ಇರುವುದಿಲ್ಲ.
ಸಾಹಿತಿಗಳಿಗೆ ಓದುಗರನ್ನೂ ಮೆಚ್ಚಿಸಿಕೊಂಡು ಸಾಹಿತ್ಯ ಪ್ರಕಟಿಸಬಹುದಾದರೂ ಅದರಿಂದ ಸಾಹಿತ್ಯದ ಮೌಲ್ಯ ಕಡಿಮೆಯಾಗುತ್ತದೆ ಮತ್ತು ಅದು ಸಾಹಿತ್ಯವೆಂದೆನಿಸಿಕೊಳ್ಳುವುದಿಲ್ಲ. ಇಂದಿನ ಪತ್ರಿಕೆಗಳು ಒಳ್ಳೆಯ ವಿಚಾರಗಳಿಗೆ ಸಂಬಂಧಿಸಿದ ವಿಚಾರಗಳನ್ನು ನೀಡಿದರೆ ಓದಿನ ಮೌಲ್ಯ ಹೆಚ್ಚುತ್ತದೆ. ಅದರ ಬದಲಿಗೆ ಅವು ಜನರ ಅಭಿರುಚಿಗೆ ತಕ್ಕಂತೆ ವಿಷಯಗಳನ್ನು ನೀಡುತ್ತಿದೆ. ಇದರಿಂದ ಪತ್ರಿಕೆಗಳ ಪ್ರಬುದ್ದತೆಯೂ ಕಡಿಮೆಯಾಗುತ್ತಿದೆ. ಸಾಹಿತಿಗಳಿಲ್ಲಿ ಬರೆದದ್ದು ಓದುತ್ತಾರೋ ಇಲ್ಲವೂ ಎಂಬ ಪ್ರಶ್ನೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
* ಯುವಜನರಲ್ಲಿ ಓದುವ ಆಭಿರುಚಿ ಮೂಡಿಸುವುದು ಹೇಗೆ?
ಸಾಹಿತ್ಯ ರಚನೆ ಮಾಡುವವರು ಮತ್ತು ಓದುಗರಿಬ್ಬರೂ ಕಡಿಮೆಯಾಗಿದ್ದಾರೆ. ಇಂದು ಬೇರೆ ಬೇರೆ ಮೂಲಗಳಿಂದ ಸಾಕಷ್ಟು ಮಾಹಿತಿಗಳು ದೊರೆತರೂ ಅದಕ್ಕೆ ಬರವಣಿಗೆಯ ರೂಪಕೊಡಲು ಬರಹಗಾರರಿಗೆ ಸಾಧ್ಯವಾಗುತ್ತಿಲ್ಲ. ಬದಲಾಗಿ ಸಮಯ ವ್ಯಯವಾಗುತ್ತಿದೆ. ಮೊದಲೆಲ್ಲಾ ಓದುಗರ ಸಂಖ್ಯೆ ಹೆಚ್ಚಾಗಿತ್ತು. ಹತ್ತು ಪುಸ್ತಕ ಓದುವವನಿಗೆ ಒಂದು ಪುಸ್ತಕ ಬರೆಯಬೇಕು ಎಂದೆನಿಸುತ್ತಿತ್ತು. ಇಂದು ಅದರ ಪ್ರಮಾಣವೂ ಕಡಿಮೆಯಾಗಿರುವುದರಿಂದ ಬರೆಯುವರಲ್ಲೂ ಸೃಜನಶೀಲತೆ ಕಡಿಮೆಯಾಗುತ್ತಿದೆ. ಧಾರಾವಾಹಿ, ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳು ಹೊರನೋಟಕ್ಕಷ್ಟೇ ಸೀಮಿತವಾದರೆ, ಓದುವುದು ಓದುಗನ ಅಂತರಂಗವನ್ನು ತಟ್ಟತ್ತದೆ.
ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳಸಬೇಕು. ಅವರಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಬೇಕು. ಅದು ಶಾಲೆಗಳಲ್ಲಿ ಸಾಧ್ಯ. ಕಡ್ಡಾಯವಾಗಿ ಕೆಲವು ತರಗತಿಗಳನ್ನು ಓದಲಿಕ್ಕಾಗಿಯೇ ಮೀಸಲಿಡಬೇಕು. ಇದರಿಂದ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಅಭಿರುಚಿ ಬೆಳೆಯುತ್ತದೆ. ಒಮ್ಮೆ ಓದಿನ ರುಚಿ ಬೆಳೆದರೆ ಮುಂದೆ ಅದು ಖಂಡಿತವಾಗಿಯೂ ಮುಂದುವರಿಯುತ್ತದೆ. ಇಂತಹ ವಾತಾವರಣವನ್ನು ಮೂಡಿಸುವ ಕೆಲಸವನ್ನು ಶಿಕ್ಷಕರು, ಪೋಷಕರು ನಿರಂತರವಾಗಿ ಮಾಡಬೇಕು.
* ಆಂಗ್ಲಮಾಧ್ಯಮ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ ಕಡ್ಡಾಯ ಮಾಡಬೇಕು ಎಂಬುದನ್ನು ತಾವು ಒಪ್ಪುತ್ತೀರಾ?
12 ವರ್ಷದ ವರೆಗೆ ಮಗುವಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು ಎಂದು ಮನಃಶಾಸ್ತ್ರೀಯವಾಗಿ ಎಲ್ಲಾ ಶಿಕ್ಷಣ ತಜ್ಞರು ಹೇಳುವ ಅಭಿಪ್ರಾಯ. ಮಾತೃಭಾಷೆಯಲ್ಲಿಯೇ ಮಗು ಶಿಕ್ಷಣ ಪಡೆದುಕೊಂಡಾಗ ಭಾಷೆಯಲ್ಲಿ ಪ್ರಬುದ್ಧತೆ ಬರುತ್ತದೆ. ಮಗು ಗರ್ಭದಲ್ಲಿರುವಾಗಲೇ ಭಾಷೆಯನ್ನು ಕೇಳುತ್ತಿರುತ್ತದೆ. ಹಾಗಾಗಿ 12 ವರ್ಷದ ವರೆಗೆ ತನ್ನ ಮಾತೃಭಾಷೆಯಲ್ಲಿಯೇ ಎಲ್ಲಾ ವಿಚಾರವನ್ನು ಗ್ರಹಿಸುವ ಶಕ್ತಿಯನ್ನು ಮುಗು ಬೆಳೆಸಿಕೊಳ್ಳಲು ಅವಕಾಶ ನೀಡಬೇಕು. ಆ ನಂತರ ಯಾವುದೇ ಭಾಷೆಯನ್ನು ಆಯ್ದುಕೊಂಡರೂ ಅದನ್ನು ಸುಲಭವಾಗಿ ಗ್ರಹಿಸುತ್ತದೆ.
ಇಂದು ಎಲ್ಲಾ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಬಗ್ಗೆ ಎದ್ದಿರುವ ಬಹಳ ದೊಡ್ಡ ಪ್ರಶ್ನೆಯೆಂದರೆ ಮಗು ಚನ್ನಾಗಿ ಭಾಷೆಯನ್ನು ಗ್ರಹಿಸಿವುದಿಲ್ಲ, ಅಭಿವ್ಯಕ್ತಿಪಡಿಸುತ್ತಿಲ್ಲ. ಇದು ಯಾಕೆ ಹೀಗೆ ಎನ್ನುವುದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಇಂಗ್ಲಿಷ್ ನಮ್ಮ ಜ್ಞಾನ, ಸಂವಹನಕ್ಕೆ ಅಗತ್ಯವಾಗಿ ಬೇಕು. ಆದರೆ ಕನ್ನಡ ಬಿಟ್ಟು ಇಂಗ್ಲಿಷ್ ಕಲಿಕೆ ಸರಿಯಲ್ಲ. ಆದ್ದರಿಂದ ಮಕ್ಕಳಿಗೆ 7ನೇ ತರಗತಿಯ ವರೆಗೆ ಕನ್ನಡ ಮಾಧ್ಯಮ ಕಡ್ಡಾಯ ಮಾಡಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಎಲ್ಲಾ ಮಕ್ಕಳೂ ಪ್ರಬುದ್ಧರಾಗಿರುತ್ತಾರೆ ಎಂದು ಹೇಳಲಾಗದು. ಪ್ರಬುದ್ಧತೆ ಯಾವ ಮಾಧ್ಯಮದಲ್ಲಿ ಕಲಿತರೂ ಬಂದೇ ಬರುತ್ತದೆ. ಸಾಮಾನ್ಯ ಮಕ್ಕಳಲ್ಲಿ ಗ್ರಹಿಸುವ ಶಕ್ತಿಯನ್ನು ಬೆಳೆಸಬೇಕಾದರೆ ಅವರಿಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿಸುವುದು ಸೂಕ್ತ.
* ಭಾಷೆಯ ಅಳಿವು-ಉಳಿವಿನ ಬಗೆಗೆ ನಿಮ್ಮ ನಿಲುವೇನು?
ಕಾಲದ ಪ್ರವಾಹದಲ್ಲಿ ಕನ್ನಡ ಬದಲಾಗುತ್ತಾ ಬಂದಿದೆ. ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡದಲ್ಲಿ ಕನ್ನಡ ಮರುರೂಪ ಪಡೆಯುತ್ತಾ ಬಂದಿದೆ. 10ನೇ ಶತಮಾನದಲ್ಲಿ ಆದ ಸಂಸ್ಕೃತ ಪ್ರಬಾವ ಕನ್ನಡವನ್ನು ಮತ್ತಷ್ಟು ಸಂಪದ್ಭರಿತನ್ನಾಗಿಸಿತು. ಹೀಗೆ ಹಲವು ಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಿ ಕನ್ನಡ ಮತ್ತಷ್ಟು ಬೆಳೆಯಿತು. ಆದರೆ ಇಂಗ್ಲಿಷ್ ಭಾಷೆ ಬಂದ ಮೇಲೆ ಇಂಗ್ಲಿಷ್ ಭಾಷೆ ಕಲಿಯುವುದರೊಂದಿಗೆ ಇಂಗ್ಲಿಷ್ ಒಂದೇ ಪ್ರಭಾವಿ ಭಾಷೆ ಎಂಬ ದೊಡ್ಡ ಭ್ರಮೆಯನ್ನು ಹುಟ್ಟಿಸಿದರು. ಆ ಭ್ರಮೆ ಇಂದಿಗೂ ಹಾಗೆಯೇ ಇದೆ. ಭಾಷೆಯ ಕೊಳ್ಳುಕೊಡುಗೆಯನ್ನು ನಾವು ವಿರೋಧಿಸಬಾರದು ಆದರೆ ಕನ್ನಡವನ್ನು ಬಿಟ್ಟು ಇಂಗ್ಲಿಷ್ ಅನುಕರಣೆ ಮಾಡುವುದು ಸರಿಯಲ್ಲ.
ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಭಾರತೀಯತೆಯನ್ನೇ ನಾಶ ಮಾಡುವ ಒಂದು ತಂತ್ರ ಅಡಗಿತ್ತು ಎಂಬುದನ್ನು ಹಲವು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ರೀತಿ ಶಿಕ್ಷಣ ಪದ್ಧತಿಯನ್ನು ತಿರಸ್ಕರಿದರೆ, ಬದಲಾವಣೆಗಳನ್ನು ತಂದರೆ ಮಾತ್ರ ನಮ್ಮ ಭಾಷೆಯ ಬೆಳವಣಿಗೆ ಸಾಧ್ಯ.
* ತಮ್ಮ ಸಾಹಿತ್ಯಕ್ಕೆ ಪ್ರೇರಣೆ ಏನು?
ನಾನು ಶಿಕ್ಷಕನಾಗಿ ಇಲ್ಲಿಗೆ ಸುಮಾರು ನಲವತ್ತ ವರ್ಷಗಳ ಹಿಂದೆ ಬಂದೆ. ಇಲ್ಲಿನ ಭಾಷೆ, ವೈವಿಧ್ಯ, ಸಂಸ್ಕೃತಿ ಎಲ್ಲವೂ ನನಗೆ ಪ್ರೇರಣೆ ನೀಡಿದೆ.
* ಕುಂದನಾಡಿನ ಕುರಿತು ನಿಮ್ಮ ಅಭಿಪ್ರಾಯವೇನು?
ಕುಂದಗನ್ನಡ ಕಲ್ಯಾಣಪುರ ಹೊಳೆಯಿಂದ ಉತ್ತರದ ಶಿರೂರಿನವರೆಗೆ ವ್ಯಾಪಿಸಿದೆ. ಇದನ್ನು ಕೋಟ ಕುಂದಗನ್ನಡ ಎಂದೇ ನಾನು ವಿಶೇಷವಾಗಿ ಕರೆಯುತ್ತೇನೆ. ಕುಂದಾಪುರ ಕನ್ನಡದ ವಿಶೇಷವೆಂದರೆ 1000 ವರ್ಷಗಳ ಹಿಂದಿನ ಉಚ್ಚಾರವನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಭಾಷೆಯ ಭಾಷಾಸಂಪತ್ತು ಮೂಲರೂಪದಲ್ಲಿಯೇ ಸಿಗುತ್ತದೆ. ಕುಂದಾಪ್ರ ಕನ್ನಡದಲ್ಲಿ ಕನ್ನಡದ ಸತ್ವವಿದೆ. ಜ್ಞಾನಪೀಠ ಪಡೆದ ಕಾರಂತರು, ನವ್ಯಕವಿ ಅಡಿಗರು, ಮಹಿಳಾ ಸಾಹಿತಿ ವೈದೇಹಿ, ಹನಿಗವಿ ದುಂಡಿರಾಜ್ ಮುಂತಾದ ಒಳ್ಳೆಯ ಸಾಹಿತಿಗಳನ್ನು ಕನ್ನಡಕ್ಕೆ ಕೊಟ್ಟಿದೆ. ಇಲ್ಲಿನ ಪ್ರತಿ ಸಾಹಿತಿಯಲ್ಲಿಯೂ ಸ್ವಂತಿಕೆ ಇದೆ. ಇದಕ್ಕೆ ಮೂಲ ಕಾರಣ ಇಲ್ಲಿನ ಭಾಷೆ, ಪರಿಸರ ಪರಂಪರೆಯಾಗಿದೆ.
* ಆಧ್ಯಾತ್ಮದ ಬಗೆಗೆ ತಮ್ಮ ಒಲವು ನಿಲುವುಗಳೇನು?
ಆಧ್ಯಾತ್ಮ ನಮ್ಮ ಮೂಲಭೂತ ಕ್ರೀಯೆಗಳಲ್ಲಿ ಒಂದು. ಸತ್ಯ, ಧರ್ಮ, ಶಾಂತಿ , ತ್ಯಾಗ, ಅಹಿಂಸೆ ಇವೆಲ್ಲವೂ ಆಧ್ಯಾತ್ಮಿಕ ಮೌಲ್ಯಗಳು. ಆತ್ಮ ಮತ್ತು ಪರಮಾತ್ಮನ ವಿಚಾರವನ್ನು ಹೇಳುವುದೇ ಆಧ್ಯಾತ್ಮ. ಆತ್ಮವೆಂದರೆ ಈ ಶರೀರಕ್ಕೆ ಮೂಲವಾದ ಚೈತನ್ಯ ಶಕ್ತಿ. ಪರಮಾತ್ಮವೆಂದರೆ ಜಗತ್ತು ಅಂದರೆ ಭೂಮಿಯೂ ಸೇರಿದಂತೆ ಇತರ ಗ್ರಹಗಳ ಹಿಂದಿರುವ ಚೈತನ್ಯ ಶಕ್ತಿ. ಇದು ಬರಿಯ ಕಲ್ಪನೆಯಲ್ಲ. ಹೇಗೆ ಯಾವುದೇ ಯಂತ್ರ ನಡೆಬೇಕಾದರೂ ವಿದ್ಯುತ್ ಬೇಕೋ ಹಾಗೆಯೇ ಶರೀರಕ್ಕೆ ಆತ್ಮದ ಅವಶ್ಯವಿದೆ.
ಶ್ರೀ ಬ್ರಹ್ಮಕುಮಾರಿ ಶಿಕ್ಷಣ ಕೇಂದ್ರದ ವತಿಯಿಂದ ರಾಜಯೋಗ ಶಿಕ್ಷಣವನ್ನು ಬಸ್ರೂರಿನಲ್ಲಿ ನಡೆಸುತ್ತಿದ್ದು ಇಲ್ಲಿ ಬ್ರಹ್ಮಕುಮಾರಿಯರು ಶಿಕ್ಷಣ ನೀಡುತ್ತಿದ್ದಾರೆ. ನಾವು ಅದರ ಅಭ್ಯಾಸ ಮಾಡಿಕೊಂಡು ಅದರ ಪ್ರಚಾರ, ಪ್ರಸಾರ ಮಾಡುತ್ತಿದ್ದೇನೆ. ಆಧ್ಯಾತ್ಮವೆಂದರೆ ವೈರಾಗ್ಯ, ಮನೆಯನ್ನು ಬಿಡಿಸುವುದು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ಇಂದು ನಾವು ಕಾಣುತ್ತಿರುವ ಮಹಾಪುರುಷರೆಲ್ಲರೂ ಆಧ್ಯಾತ್ಮದ ಚಿಂತಕರು. ಗಾಂಧೀಜಿಯೂ ಆಧ್ಯಾತ್ಮದ ಸಾಧಕರಾಗಿದ್ದರು. ನಮ್ಮ ಜೀವನದಲ್ಲಿಯೂ ಆಧ್ಯಾತ್ಮದ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ. ಯಶಸ್ಸು ಎಂದರೆ ಶಾಂತಿ, ನೆಮ್ಮದಿಯನ್ನು ಪಡೆಯುವುದೇ ಆಗಿದೆ.
ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ಟರ ಪರಿಚಯ
ಮುಖದಲ್ಲಿ ಮೆಲುನಗೆಯ ಹೊತ್ತು, ಶುಭ್ರ ಉಡುಗೆಯ ತೊಟ್ಟು ತನ್ನ ಸರಳ ನಡೆ ನುಡಿ ಹಾಗೂ ಸಜ್ಜನಿಕೆಯಿಂದಲೇ ಒಬ್ಬ ಆದರ್ಶ ಶಿಕ್ಷಕನಾಗಿ, ಧಾರ್ಮಿಕ, ನೈತಿಕ ಪ್ರಜ್ಞೆಯುಳ್ಳ ನಾಗರೀಕನಾಗಿ, ಉತ್ತಮ ಸಾಹಿತಿಯಾಗಿ, ಆಧ್ಯಾತ್ಮ ಚಿಂತಕರಾಗಿ ಚಿರಪರಿಚಿತರು ಡಾ ಕನರಾಡಿ ವಾದಿರಾಜ ಭಟ್.
ಉಡುಪಿಯ ಕನರಾಡಿಯಲ್ಲಿ 1951 ಜುಲೈ 2ರಂದು ಕೆ. ಲಕ್ಷ್ಮೀನಾರಾಯಣ ಮತ್ತು ಕಮಲಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ವಾದಿರಾಜ ಭಟ್ಟರು ಕನರಾಡಿಭವ, ಕವಾಭ ಮುಂತಾದ ಕಾವ್ಯನಾಮಗಳಿಂದ ಕೃತಿ ರಚನೆಯಲ್ಲಿ ತೊಡಗಿ ಏರಿದ ಎತ್ತರ ಅನನ್ಯವಾದುದು.
ಸುಮಾರು ನಲವತ್ತು ವರ್ಷಗಳಿಂದ ಕುಂದಾಪುರ ಪರಿಸರದಲ್ಲಿ ಕನ್ನಡ ಅಧ್ಯಾಪನ, ಭಾಷೆ, ಸಾಹಿತ್ಯ, ಜಾನಪದ, ಕ್ಷೇತ್ರಕಾರ್ಯ, ಗ್ರಂಥರಚನೆ, ಸಂಪಾದನೆ, ಪುಸ್ತಕ ಪ್ರಕಟಣೆ, ಕಲಾವಿದರಿಗೆ ಬಡವಿದ್ಯಾರ್ಥಿಗಳಿಗೆ ನೆರವು ಹೀಗೆ ಸಾಗಿ ಬರುವ ಕನರಾಡಿ ವಾದಿರಾಜ ಭಟ್ಟರು ಈಗಲೂ ಕನ್ನಡ ಜಾನಪದ ನಿಘಂಟು ಯೋಜನೆಯ ಕ್ಷೇತ್ರ ತಜ್ಞರಾಗಿ ನಶಿಸುತ್ತಿರುವ ಕನ್ನಡ ಪದಗಳ ನಿಘಂಟು ಯೋಜನೆಯಲ್ಲಿ ತೊಡಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಂದಾಪುರ ಕನ್ನಡ ಪದಗಳನ್ನು ಹುಡುಕಿ ಅವುಗಳಿಗೆ ಗ್ರಂಥರೂಪ ನೀಡುವಲ್ಲಿ ನೆರವಾಗಿದ್ದಾರೆ. ಅವರ ಕುರಿತಾಗ ಮೌಲ್ಯ ಸಾಧನೆ ಅಭಿನಂದನಾ ಗ್ರಂಥ ಹೊರಬಂದಿದೆ. ಈ ಬಾರಿಯ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷರಾಗಿ ಅವರು ಆಯ್ಕೆಯಾದುದು ಅವರ ಕನ್ನಡ ಕಾಯಕಕ್ಕೆ ದೊರೆತ ಗೌರವವೇ ಸರಿ.
-ಸುನಿಲ್ ಬೈಂದೂರು