ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂಲಕ ಕಲೆ, ಸಾಹಿತ್ಯ, ಕೃಷಿ, ಜನಪದ, ಯುವಜನತೆ ಇವೆಲ್ಲವನ್ನೂ ಒಗ್ಗೂಡಿಸಿ ನಾಲ್ಕು ದಿನಗಳ ಕಾಲ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಸಂಫಟಿಸಿ ಸೈ ಎನಿಸಿಕೊಂಡಿದ್ದಾರೆ ಆಳ್ವಾಸ್ ಎಜುಕೇಶನ್ ಫೌಂಡೆಶನ್ ನ ಆಧ್ಯಕ್ಷರಾದ ಡಾ. ಎಂ ಮೋಹನ ಆಳ್ವ. ವಿಚಾರವಾದಿಗಳ ಟೀಕೆಗಳ ನಡುವೆಯೂ ತನ್ನ ಅವಿರತ ಶ್ರಮ ಮತ್ತು ಸಂಸ್ಕೃತಿ ಪ್ರೀತಿಯಿಂದ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದ್ದಾರೆ.
ಸಮ್ಮೇಳನದ ಮರುದಿನ ಕುಂದಾಪ್ರ ಡಾಟ್ ಕಾಂ ಆಳ್ವರನ್ನು ಸಂದರ್ಶಿಸಲು ತೆರಳಿದಾಗ ಬೆಳಿಗ್ಗೆಯೇ ತಮ್ಮ ಕಛೇರಿಯಲ್ಲಿ ಬಂದು ಕುಳಿತಿದ್ದ ಅವರ ಮೊಗದಲ್ಲಿ ಸಾರ್ಥಕತೆಯ ಭಾವವಿತ್ತು.
ಸಮ್ಮೇಳನಕ್ಕೂ ಮೊದಲು ಸಂದರ್ಶಿಸುವುದು ಸಾಮಾನ್ಯ. ಆದರೆ ಸಮ್ಮೇಳನ ನಡೆದ ಬಳಿಕ ಸಂಫಟನೊಬ್ಬನನ್ನು ಮಾತನಾಡಿಸಿ ಅವರಲ್ಲಿ ಮೂಡಿದ ಸಾರ್ಥಕತೆಯ ಭಾವವನ್ನು ಸಾಹಿತ್ಯ, ಕಲಾಭಿಮಾನಿಗಳಿಗೆ ಹಂಚುವುದು ತರವೆನ್ನಿಸಿ ಕುಂದಾಪ್ರ ಡಾಟ್ ಕಾಂ ನಡೆಸಿದ ಕಿರು ಸಂದರ್ಶನದ ಪೂರ್ಣಪಾಠ ಇಲ್ಲಿದೆ.’
ಕುಂದಾಪ್ರ ಡಾಟ್ ಕಾಂ:* ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ್ನು ಯಶಸ್ವಿಯಾಗಿ ಸಂಫಟಿಸಿದ್ದಿರಿ. ಈ ಕ್ಷಣದಲ್ಲಿ ನಿಮಗೇನನಿಸುತ್ತೆ?
ಡಾ.ಆಳ್ವ: ಎಲ್ಲರೂ ಜೊತೆಯಾಗಿ ಕಾರ್ಯಕ್ರಮಕ್ಕೆ ಬಂದಾಗ ಬಹಳ ಖಷಿಯಾಗುತ್ತೆ. ಸಮ್ಮೇಳನ ಹೇಗಿರುತ್ತೆ ಎಂಬುದನ್ನು ನೂರು ಬಾರಿ ಉಚ್ಚಾರ ಮಾಡಿದ್ದೆವು. ಅದೆಲ್ಲವೂ ಫಲಪ್ರಧವಾಗಿದೆ. ಇಡೀ ಸಮ್ಮೇಳನ ನಾವು ಅಂದುಕೊಂಡಂತೆ ನಡೆದಿದೆ, ಅದು ಖಷಿ ಕೊಡುವ ವಿಚಾರ.
* ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ಮುಂದೆ ಹೇಗೆ ನಡೆಯಲಿದೆ?
ಡಾ. ಆಳ್ವ: ಅದನ್ನಿನ್ನು ನಾವು ನಿರ್ಧರಿಸಬೇಕಾಗಿದೆ.ನುಡಿಸಿರಿ ವಿರಾಸತ್ ಹೇಗೆ ನಡೆಸುವುದು. ಅದರ ಪರಿಕಲ್ಪನೆ ಏನು, ಒಟ್ಟಿಗೆ ನಡೆಸುವುದಾ ಅಥವಾ ಬೇರೆ ಬೇರೆ ನಡೆಸುವುದಾ ಎಂಬುದರ ಕುರಿತಾಗಿ ನಿರ್ಧರಿಸಲಾಗುವುದು.
* ಇಡೀ ಸಮ್ಮೇಳನದ ವಿಶೇಷತೆಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ…
ಡಾ. ಆಳ್ವ: ಭಾಷಾ ಸಾಹಿತ್ಯ, ಕೃಷಿ, ಜಾನಪದ, ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಿರುವುದು ಸಂತೋಷವನ್ನುಂಟುಮಾಡಿದೆ. ನಾಲ್ಕು ವಿಭಾಗಗಳ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ. ಮುಂದೆ ಈ ವಿಭಾಗಗಳೆಲ್ಲವೂ ಈ ಕಾಲಕ್ಕೆ ಸರಿಯಾಗಿ ಸ್ಪಂದಿಸಿಕೊಂಡು ಹೋಗಬೇಕಾಗಿದೆ ಮತ್ತು ಈ ವಿಚಾರಗಳನ್ನು ನಮ್ಮ ವಿದ್ಯಾರ್ಥಿಗಳ ಮುಂದೆ ಕೊಂಡೊಯ್ಯಬೇಕಾಗಿದೆ. ಪರಿಕಲ್ಪನೆಯಲ್ಲಿ ಅಂದು ಮುಗಿದು ಹೋಗಿದೆ. ಇಂದು ನಡಿಯುತ್ತಿದೆ. ಮುಂದನ್ನು ಒಳ್ಳೆಯ ರೀತಿಯಲ್ಲಿ ನಡೆಸಬೇಕು ಎಂಬುದು ನಮ್ಮ ಆಶಯ.
* ಕನ್ನಡ ಭವನ ನಿರ್ಮಿಸುವ ಪ್ರಸ್ತಾಪ ಮಾಡಿದ್ದಿರಿ. ಆ ಕುರಿತು…
ಡಾ. ಆಳ್ವ: ಕನ್ನಡ ಭವನವನ್ನು ಮಾಡಬೇಕೆಂಬ ಆಸೆ ಇದೆ. ಅದನ್ನು ನಿಲ್ಲಿಸುವ ಮಾತೇ ಇಲ್ಲ. ಮುಂದಿನ 15 ದಿನಗಳ ಒಳಗೆ ಮೂಹರ್ತವನ್ನು ಮಾಡಲಾಗುತ್ತದೆ. ಯೋಜನೆ ಪೂರ್ಣಗೊಳ್ಳಲು 2 ವರ್ಷ ತಗುಲಬಹುದು.
* ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಬಗೆಗೆ ತಾವು ಕಂಡ ಕನಸುಗಳೆಲ್ಲವೂ ಸಾಕಾರಗೊಂಡಿದೆಯಾ?
ಮೋ.ಆಳ್ವ: ಖಂಡಿತ ಹಾಗೆ ಎಲ್ಲವೂ ಸಾಕಾರಗೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಆಗಿರುವ ಕೆಲಸಗಳಿಂದ ಮನಸ್ಸಿಗೆ ತೃಪ್ತಿ ಆಗಿದೆ. ಅಂದುಕೊಂಡದ್ದೆಲ್ಲವೂ ಸಾಕಾರಗೊಂಡಿದೆ ಎಂಬುಂದು ತಪ್ಪಾಗಬುಹುದು ಬದಲಿಗೆ ತೃಪ್ತಿ ಇದೆ.