ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಪವಿತ್ರತೀರ್ಥ ಎಂದು ಬೊಗಸೆ ತುಂಬಿಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಚಕ್ರಾನದಿ ನೀರು ಅಪವಿತ್ರ! ಕೈಯಲ್ಲಿ ನೀರು ಮುಟ್ಟಲು ಹೇಸಿಗೆ ಆಗುತ್ತದೆ. ಚಕ್ರಾ ನದಿ ಪಾತ್ರ ತ್ಯಾಜ್ಯಗಳ ಗೊಬ್ಬರಗುಂಡಿ. ಸತ್ತ ಪ್ರಾಣಿಗಳ ಕಳೇಬರ, ಜಲ ಮಾಲಿನ್ಯದಿಂದ ಸತ್ತಜಲಚರ, ಮೊಟ್ಟೆಗಳ ಓಡು, ಥರಹೇವಾರಿ ತ್ಯಾಜ್ಯ ತೊಟ್ಟಿ!
ಒಂದುಕಾಲದಲ್ಲಿ ವಂಡ್ಸೆ ಬಳಿ ಪವಿತ್ರಚಕ್ರಾ ನದಿಯಲ್ಲಿ ಸ್ನಾನ ಮಾಡಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಾತ್ರೆಗೆ ಹೋಗುತ್ತಿದ್ದರು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಭಕ್ತರು ಚಕ್ರಾ ನದಿಯಲ್ಲಿ ಮಿಂದು, ಬಟ್ಟೆ ಒಣಗಿಸಿ, ಮುಂದೆ ಹೋಗುತ್ತಿದ್ದರಿಂದ ವಂಡ್ಸೆ ಎಂಬ ಹೆಸರು ಬರಲು ಕಾರಣ. ಒಣಸೆ ಸಂಕುಚತಗೊಂಡು ವಂಡ್ಸೆ ಆಗಿದೆ ಎನ್ನೋದು ಸ್ಥಳೀಯರ ನಂಬಿಕೆ. ಇಂತಾ ಪವಿತ್ರತೀರ್ಥದಲ್ಲಿ ಈಗ ಸ್ನಾನ ಮಾಡಿದರೆ ಚರ್ಮರೋಗ ಖಂಡಿತ. ಚಕ್ರಾ ನದಿಗೆ ಇಳಿಯೋದಕ್ಕೂ ಭಯವಾಗುತ್ತದೆ.
ಚಕ್ರಾ ನದಿಯ ಒಡಲಲ್ಲಿ ಇಂತಾದ್ದೇ ತ್ಯಾಜ್ಯ ಬೀಳುತ್ತದೆ ಎನ್ನೋದಕ್ಕೆ ಬರೋದಿಲ್ಲ. ಮೊಟ್ಟೆ ಚಿಪ್ಪಿಂದ ಹಿಡಿದು, ಮಳಿ ಓಡಿನತನಕ, ಪ್ಲಾಸ್ಟಿಕ್, ಅಂಗಡಿ ಮುಂಗಟ್ಟು, ಹೋಟೆಲ್ ಸಮುಚ್ಛಯದ ಗೊಬ್ಬರಗುಂಡಿ ಚಕ್ರಾನದಿ ಪಾತ್ರ! ಸತ್ತ ಪ್ರಾಣಿಗಳ ಕಳೇಬರ ಸಿಗುತ್ತದೆ. ಸತ್ತ ಪ್ರಾಣಿ ಕೊಳೆತು ಹೋದು ಕುರುಹು ಇದೆ. ಕೋಳಿ ಹಾಗೂ ಇನ್ನಿತರ ತ್ಯಾಜ್ಯ ನೀರು ಹೊಳೆ ಸೇರುವುದರಿಂದ ನೀರು ಕುಲಷಿತಗೊಂಡ ಸತ್ತ ಜಲಚರಗಳು ಸಿಗುತ್ತದೆ. ನೀರು ಕೂಡಾ ಬೊಗಸೆಯಲ್ಲಿ ಹಿಡಿದರೆ ಕಪ್ಪಾಗಿ ಕಾಣುತ್ತದೆ. ಒಟ್ಟಾರೆ ಪವಿತ್ರತೆಯ ಪ್ರತೀಕದಂತಿದ್ದ ಚಕ್ರಾ ನದಿ ನೀರು ಅಪವಿತ್ರಗೊಂಡಿದೆ. ಚಕ್ರಾ ನದಿ ದೇವರ ಸೃಷ್ಟಿಯಾದರೆ, ನದಿ ಮಲೀನ ಮಾನವ ಸೃಷ್ಟಿಯ ಅವಾಂತರ!
ತ್ಯಾಜ್ಯ ಬಿಸಾಕುವ ಹೈಪೈ ಜನ:
ಚಕ್ರಾ ನದಿ ಮಲೀನ ಆಗಲು ವಂಡ್ಸೆ ಪೇಟೆತ್ಯಾಜ್ಯ ಎಷ್ಟು ಕಾರಣವೋ ಅಷ್ಟೇ ಕಾರಣ ಹೈಪೈ ಜನರು ಎನ್ನೋದು ಅಷ್ಟೇ ಸತ್ಯ. ವಂಡ್ಸೆ ಪೇಟೆ ಸಂಪರ್ಕ ಬೆಸೆಯುವ ಸೇತುವೆ ಮಗ್ಗಲು ನಾಗರಿಕರ ಕೊಡುಗೆಗೆ ಕಸದತೊಟ್ಟಿ. ಲಕ್ಷಾಂತರ ಬೆಲೆ ಬಾಳುವ ಕಾರ್ ಮೂಲಕ ಬರುವ ಮುಂದುವರಿದವರ ಪಟ್ಟಿಗೆ ಸೇರಿದ ನಾಗರಿಕರು! ಸೇತುವೆ ಬಳಿ ಕಾರ್ ಸ್ಲೋಮಾಡಿ ಮನೆಯಿಂದ ಕಟ್ಟಿತಂದಕಸದ ಪ್ಲಾಸ್ಟಿಕ್ ಬ್ಯಾಗ್ ಬಿಸಾಕಿ ಪರಾರಿಯಾಗುತ್ತಿದ್ದಾರೆ. ಹೊಳೆ ತೀರದ ಸೇತುವೆ ಮಗ್ಗಲು ಚರಂಡಿ ಕಸಕಡ್ಡಗಳ ಅಡ್ಡೆ. ಮಳೆ ನೀರುಕಸಕಡ್ಡಿ ಹೊಳೆಗೆ ವೈಯ್ಯುತ್ತದೆ. ಇದರಿಂದಲೂ ನೀರು ಮಲೀನವಾಗುವ ಜೊತೆ ನದಿ ಪಾತ್ರಕೂಡಾ ಕುಲಷಿತ. ಇಂತವರ ಕಾಯೋದುಯಾರು? ವಂಡ್ಸೆ ಕೇವಲ ತ್ಯಾಜ್ಯ ಬಿಸಾಕುವ ಮೂಲಕ ನದಿ ಕುಲಷಿತ ಮಾಡೋದಿಲ್ಲ. ಬದಲಾಗಿ ಇಡೀ ವಂಡ್ಸೆ ಪೇಟೆಯನ್ನೇಗಬ್ಬೆಬ್ಬಿಸಲಾಗುತ್ತಿದೆ.
ನದಿಗಳಿಗೆ ಮೋಟರ್ ಅಳವಡಿಸಿ ನೀರು ಪೂರೈಕೆ ಮಾಡಲು ಅವಕಾಶ ಇಲ್ಲದಿದ್ದರೂ ಚಕ್ರಾನದಿಗೆ ಅತಿಕ್ರಮ ಮೋಟಾರ್ ಅಳವಡಿಸಿಕೊಂಡು ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ನದಿ ತೀರದಲ್ಲಿರುವ ಕೋಳಿ ಅಂಗಡಿಯವರು ಚಕ್ರಾ ನದಿಗೆ ಗಿಡ-ಗೆಂಡೆಗಳ ಸಂಧಿಯಲ್ಲಿ ಯಾರಿಗೂ ತಿಳಿಯದ ಹಾಗೆ ಮೋಟಾರ್ ಅಳವಸಿಕೊಂಡಿದ್ದು, ಕೋಳಿ ಸ್ವಚ್ಛ ಮಾಡಲು ನೀರು ಬಳಸಿಕೊಳ್ಳುತ್ತಿದ್ದಾರೆ. ಕೋಳಿ ಕ್ಲೀನ್ ಮಾಡಿದ ತ್ಯಾಜ್ಯ ನೀರುಚಕ್ರಾ ನದಿಗೆ ಬಿಡುತ್ತಾರೆ ಎಂದು ಸ್ಥಳೀಯರು ನೇರವಾಗಿ ಆರೋಪಿಸಿದ್ದಾರೆ.
ಚಕ್ರಾ ನದಿ ಪಾತ್ರದಲ್ಲಿ ಮೋಟಾರ್ ಅಳವಡಿಸಿಕೊಂಡು ಸ್ವಲ್ಪದೂರು ಪೈಪ್ ಹಾಕಿದ್ದು, ನಡುವೆ ಡಾಂಬರ್‌ರಸ್ತೆ ಬಂದಿದ್ದರಿಂದ ರಸ್ತೆಅಡಿಯಿಂದ ಪೈಪ್ ಸಾಗಿ ಹೋಗಿದೆ. ಮೋಟಾರಿಗೆ ವಿದ್ಯುತ್ ಸಂಪರ್ಕ ಇದ್ದು ಅದೂ ಅಕ್ರಮ. ಎಲ್ಲಿಂದಲೋ ವಯರ್‌ತಂದು ಮೋಟಾರಿಗೆ ಫಿಕ್ಸ್ ಮಾಡಲಾಗಿದೆ. ವಿದ್ಯುತ್ ಕಳ್ಳತನದ ಜೊತೆಚಕ್ರಾ ನದಿ ನೀರು ಕೂಡಾ ಅಕ್ರಮವಾಗಿ ಬಳಸಿಕೊಳ್ಳಲಾಗುತ್ತದೆ. ನೀರಾವರಿ ಇಲಾಖೆ ಹಾಗೂ ಮೆಸ್ಕಾಂ ಎಚ್ಚೆತ್ತುಕೊಂಡುಅಕ್ರಮಕ್ಕೆ ಬ್ರೇಕ್ ಹಾಕಬೇಕು ಎನ್ನೋದು ಸ್ಥಳೀಯರು ಒತ್ತಾಯ.