ಎದೆಗೆ ಬಿದ್ದ ಬೆಂಕಿ

Call us

Call us

Call us

ಸತೀಶ್ ಚಪ್ಪರಿಕೆ. ಕುಂದಾಪ್ರ ಡಾಟ್ ಕಾಂ ಲೇಖನ |
ನನ್ನೆದೆಗೆ ಬೆಂಕಿ ಬಿದ್ದಿದೆ. ಎದೆಯೊಳಗಿನ ಗೂಡಲ್ಲಿರುವ ಹೃದಯ ಹೊತ್ತಿ ಉರಿಯುತ್ತಿದೆ. ನನ್ನೊಬ್ಬನ ಹೃದಯ ಮಾತ್ರವಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ‘ಮನುಷ್ಯ’ರ ಹೃದಯ ಕೂಡ ಈಗ ಧಗಧಗಿಸುತ್ತಿದೆ. ಏಕೆಂದರೆ, ನಮ್ಮ ದಕ್ಷಿಣ ಕನ್ನಡದ ಕುರಿತು ಕೇಳಿ ಬರುತ್ತಿರುವ ಮಾತುಗಳಿಂದಾಗಿ. ಆಡಳಿತಾತ್ಮಕ ನೆಲೆಯಲ್ಲಿ ಅವಿಭಜಿತ ಜಿಲ್ಲೆಯೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡಾಗಿ ಹೋಳಾಗಿದ್ದರೂ, ನಮ್ಮೆಲ್ಲರ ಪಾಲಿಗೆ ಅದಿನ್ನೂ ಒಂದೇ ಜಿಲ್ಲೆಯಾಗಿದೆ. ಈ ಜಿಲ್ಲೆ ಕೇವಲ ಒಂದು ಭೂಮಿ ತುಂಡಲ್ಲ. ಬದಲಾಗಿ ನಮ್ಮೆಲ್ಲರ ಬದುಕನ್ನು ರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ ನೆಲೆ.

Call us

Click Here

ದಕ್ಷಿಣ ಕನ್ನಡ ರಾಜ್ಯದ ಅತಿ ಹೆಚ್ಚು ವಿದ್ಯಾವಂತರ ನೆಲೆ. ಆದರೆ, ವಿದ್ಯೆ ಇದ್ದ ಕೂಡಲೇ ಪ್ರಜ್ಞೆ ಇರಬೇಕಿಂದಿಲ್ಲ ಎಂದು ದಕ್ಷಿಣ ಕನ್ನಡದ ಬಗ್ಗೆ ರಾಜ್ಯದ ಒಬ್ಬ ‘ಪ್ರಜ್ಞಾವಂತ’ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್ ನೋಡಿದಾಗ ನಗಬೇಕೋ? ಅಳಬೇಕೋ? ಎಂದು ಅರ್ಥವಾಗಲಿಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆ ಮತ್ತು ಅದರ ಸುತ್ತಮುತ್ತ ನಡೆದ ಘಟನೆಗಳನ್ನು ಆಧರಿಸಿ, ಕೊಡಗಿನ ಆ ‘ಪ್ರಜ್ಞಾವಂತ’ರು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಪಾಪ ಅವರದ್ದೇನೂ ತಪ್ಪಿಲ್ಲ. ದಕ್ಷಿಣ ಕನ್ನಡದ ಬಗ್ಗೆ ರಾಜ್ಯದ ಹೊರಭಾಗದಲ್ಲಿ ಮತ್ತು ದೇಶದೆಲ್ಲೆಡೆ ಕೇಳಿ ಬರುತ್ತಿರುವ ಸಾಮಾನ್ಯ ಮಾತಿದು. ಆ ‘ಪ್ರಜ್ಞಾವಂತ’ರಂತೆಯೇ ಹೊರಗಿನ ಬಹುತೇಕರು ದಕ್ಷಿಣ ಕನ್ನಡದ ಬಗ್ಗೆ ‘ಕರ್ನಾಟಕದ ಕಾಶ್ಮೀರ’ ಎಂಬ ನಿರ್ಧಾರಕ್ಕೆ ಬಂದಾಗಿದೆ.

ನನ್ನ ಆತ್ಮೀಯ ಗೆಳೆಯರು ಮತ್ತು ಹಿರಿಯ ಪತ್ರಕರ್ತರೂ ಆದ ಒಬ್ಬರು, ‘ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡ’ ಎಂದು ಕೂಡ ಘೋಷಣೆ ಮಾಡಿಬಿಟ್ಟಿದ್ದಾರೆ. ಇನ್ನೂ ಕೆಲವು ತಿಂಗಳ ಹಿಂದೆ ‘ಶ್ರೇಷ್ಠ ಮುಸ್ಲಿಂ ಸಾಹಿತಿ’ ಎಂಬ ಪ್ರಶಸ್ತಿಗಳಿಸಿದ ನಾವೆಲ್ಲರೂ ಪ್ರೀತಿಸುವ ಹಿರಿಯ ಸಾಹಿತಿಯೊಬ್ಬರು ‘ದಕ್ಷಿಣ ಕನ್ನಡದ ಮುಸ್ಲಿಂರ ರಕ್ಷಣೆಗೆ ಯಾವ ರಾಜಕೀಯ ಪಕ್ಷದ ಮೊರೆ ಹೋಗಬೇಕು?’ ಎಂದು ಮೊರೆಯಿಟ್ಟಿದ್ದಾರೆ. ದುರಂತವೆಂದರೆ ಅಂತರ್ ರಾಷ್ಟ್ರೀಯ ಸಮ್ಮೇಳನದ ವೇದಿಕೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ದಕ್ಷಿಣ ಕನ್ನಡದ ಬಗ್ಗೆ ಗೋಳು ಹೋಯ್ದುಕೊಳ್ಳುತ್ತಿರುವ ಇವರ‍್ಯಾರಿಗೂ ಅಲ್ಲಿನ ಸಾಮಾಜಿಕ ಹಂದರ ಈಗಲೂ ಎಷ್ಟು ಬಿಗಿಯಾಗಿದೆ ಎಂಬ ಅರಿವಿಲ್ಲ. ಕುಂದಾಪ್ರ ಡಾಟ್ ಕಾಂ ಲೇಖನ.

ಅವಿಭಜಿತ ದಕ್ಷಿಣ ಕನ್ನಡದ ಸಾಮಾಜಿಕ ಪರಿಸ್ಥಿತಿ ಮೊದಲಿನಂತೆ ಈಗಿಲ್ಲ. ಖಂಡಿತ ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಈಗಲ್ಲಿ ಕೋಮು ದಳ್ಳುರಿ ಹೊತ್ತಿಕೊಂಡು ಮನುಷ್ಯರು ಬದುಕುವ ಸ್ಥಿತಿಯೇ ಇಲ್ಲ ಎನ್ನುವುದು ಮಾತ್ರ ಅತಿರಂಜಕ. ಇದು ಮಾಧ್ಯಮಗಳು, ಅಧಿಕಾರ ಪೀಪಾಸು ರಾಜಕಾರಣಿಗಳು ಒಟ್ಟಾಗಿ ಸೃಷ್ಟಿಸಿದ ಭ್ರಮೆಯಷ್ಟೆ. ಅಂತಹ ಭ್ರಮೆ ಸೃಷ್ಟಿಯಾಗಲು ಸ್ಥಳೀಯ ಕೆಲವು ರಾಜಕೀಯ ಶಕ್ತಿಗಳು ಕೂಡ ಕುಮ್ಮಕ್ಕು ನೀಡುತ್ತಿವೆ. ಏಕೆಂದರೆ ಈ ಭ್ರಮೆ ಇದ್ದರಷ್ಟೇ ಚುನಾವಣೆಗಳ ಸಂದರ್ಭದಲ್ಲಿ ’ಧರ್ಮ’ಗಳ ಹೆಸರಲ್ಲಿ ಮತಗಳ ಧ್ರುವೀಕರಣವಾಗಿ ಅವರು ಗೆಲ್ಲಲಾಗುವುದು. ಇದು ಗೊತ್ತಿದ್ದೋ, ಗೊತ್ತಿಲ್ಲೆದೆಯೋ ನಮ್ಮ ಬುದ್ಧಿ ಜೀವಿಗಳು ಗೋಳು ಹೊಯ್ದುಕೊಳ್ಳಲಾರಂಭಿಸಿದ್ದಾರೆ. ಟಿಆರ್‌ಪಿ ಬೆನ್ನ ಹಿಂದಿರುವ ಮಾಧ್ಯಮಗಳು ಬೊಬ್ಬೆ ಹೊಡೆಯಲಾರಂಭಿಸಿವೆ. ಎಲ್ಲೋ ಒಂದೆಡೆ ಇವರೆಲ್ಲ ಅರಿವಿದ್ದೋ, ಅರಿವಿಲ್ಲದೆಯೋ ರಾಜಕೀಯ ಪಕ್ಷಗಳು ಹಾಕಿರುವ ಬಹುದೊಡ್ಡ ’ಟ್ರ್ಯಾಪ್’ಗೆ ಹೋಗಿ ಬೀಳಲಾರಂಭಿಸಿದ್ದಾರೆ.

ಕಳೆದ ಸುಮಾರು ನಾಲ್ಕು ದಶಕಗಳಿಂದ ದಕ್ಷಿಣ ಕನ್ನಡದ ಏಳು-ಬೀಳುಗಳ ಅವಿಭಾಜ್ಯ ಅಂಗವಾಗಿ ಬೆಳೆದು ಬಂದ ಲಕ್ಷಾಂತರ ಜನಸಾಮಾನ್ಯರ ಪೈಕಿ ಒಬ್ಬನಾಗಿ, ಅಲ್ಲಿನ ನಿವಾಸಿಯಾಗಿ, ಆ ನೆಲದ ಸಾಮಾಜಿಕ ಹಂದರದ ಒಂದೆಳೆಯಾಗಿ ಹೇಳುವುದಾದರೆ ಈಗ ನಡೆಯುತ್ತಿರುವುದೆಲ್ಲ ಅಧಿಕಾರ ಪೀಪಾಸು ರಾಜಕೀಯ ಪಕ್ಷಗಳ ಮತ್ತು ನಾಯಕರ ’ಧರ್ಮ’ದಾಟ. ಈ ’ಧರ್ಮ’ದಾಟಕ್ಕೆ ಬಲಿಯಾಗುತ್ತಿರುವುದು ಯಾರೆಂದರೆ… ಗಲಭೆಗಳಿಗೆ ಮೂಲ ಕಾರಣರಾದ ಯಾವುದೇ ಭಟ್ಟ-ಶೆಟ್ಟಿ-ಸಾಯ್ಬರ ಮನೆ ಮಕ್ಕಳಲ್ಲ. ಬದಲಾಗಿ ಸಾಮಾಜಿಕ ಸ್ಥರದಲ್ಲಿ ಕೆಳಹಂತದಲ್ಲಿರುವ ಬಡವರ ಮನೆಯ ಮಕ್ಕಳು. ಬೇಕಿದ್ದರೆ ಉಡುಪಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ ಪತ್ರದಲ್ಲಿನ ಪಟ್ಟಿಯನ್ನೇ ತೆಗೆದು ನೋಡಿ!

Click here

Click here

Click here

Click Here

Call us

Call us

ಮೂಲತಃ ಯಾವುದೇ ಕೋಮುದ್ವೇಷ ಇಲ್ಲದೇ, ಕೆಲವೊಮ್ಮೆ ವೈಯಕ್ತಿಕ ದ್ವೇಷಾಸೂಯೆ, ಆಸ್ತಿ ವಿವಾದಗಳ ಕಾರಣದಿಂದ ನಡೆದ ಗಲಭೆ-ಹಲ್ಲೆ-ಕೊಲೆಗೆ ಕೂಡ ರಾಜಕೀಯ ಪಕ್ಷಗಳು ಕೋಮು ಭಾವನೆಯ ಬಣ್ಣ ಬಳಿದು, ಹೆಣವನ್ನೇ ಬಂಡವಾಳ ಮಾಡಿಕೊಳ್ಳುವ ಅಮಾನುಷ ವೃತ್ತಿ ಮಾಡುತ್ತಿವೆ. ಇಲ್ಲಿ ಹಿಂದು ಯುವಕರ ಮೇಲೆ ನಡೆಯುತ್ತಿರುವ ಎಲ್ಲ ಹಲ್ಲೆಯಲ್ಲಿ ಮುಸ್ಲಿಂರ ಕೈವಾಡವಿರುವುದಿಲ್ಲ. ಅದೇ ರೀತಿ ಎಲ್ಲ ಮುಸ್ಲಿಂ ಯುವಕರ ಮೇಲೆ ನಡೆಯುವ ಹಲ್ಲೆಯ ಹಿಂದೆ ಹಿಂದುಗಳ ಕೈವಾಡ ಇರುವುದಿಲ್ಲ. ಆದರೆ, ಹಲ್ಲೆ ನಡೆದು ಹೆಣ ಬಿದ್ದ ಕೂಡಲೇ ಅದಕ್ಕೆ ಕೋಮು ಬಣ್ಣ ಬಳಿಯಲು ರಾಜಕೀಯ ಪಕ್ಷಗಳ ಸಿದ್ಧವಾಗಿರುತ್ತವೆ. ಬಡವರ ಮಕ್ಕಳ ಹೆಣಗಳ ಮೇಲೆ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರು ನೃತ್ಯ ಮಾಡುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಅಥವಾ ಇನ್ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಬಡವರ ಮಕ್ಕಳ ಹೆಣವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿದ್ದಾರೆ. ಇನ್ನು ಮುಂದೆ ಕೂಡ ಅದನ್ನೆ ಮಾಡಲು ಹೊರಟಿದ್ದಾರೆ. www.kundapraa.com

ನಾಲ್ಕು ದಶಕಗಳ ಹಿಂದಿನಿಂದ ಈವರೆಗಿನ ದಕ್ಷಿಣ ಕನ್ನಡದ ರಾಜಕೀಯ ಇತಿಹಾಸ ಗಮನಿಸಿದರೆ ಇಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ. ಈವತ್ತು ಈ ಅಧಿಕಾರ ಪೀಪಾಸುಗಳು ಬಡವರ ಮಕ್ಕಳ ಹೆಣವನ್ನು ಏಕೆ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಅರ್ಥವಾಗುತ್ತದೆ. ಎಪ್ಪತ್ತರ ದಶಕದಲ್ಲಿ ಇಡೀ ಕರ್ನಾಟಕ ಇಂದಿರಾ ಕಾಂಗ್ರೆಸ್ ಅಲೆಯಲ್ಲಿ ಕೊಚ್ಚಿ ಹೋದ ಸಂದರ್ಭದಲ್ಲಿಯೇ ದಕ್ಷಿಣ ಕನ್ನಡದಲ್ಲಿ ಜನಸಂಘ ಮತ್ತು ಆರ್‌ಎಸ್‌ಎಸ್ ಭದ್ರವಾಗಿದ್ದವು. ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ನಾಗ್ಪುರ ಆರ್‌ಎಸ್‌ಎಸ್ ಶಕ್ತಿಕೇಂದ್ರವೋ, ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದ ಮಟ್ಟಿಗೆ ಪುತ್ತೂರು ಆರ್‌ಎಸ್‌ಎಸ್ ಶಕ್ತಿ ಕೇಂದ್ರವಾಗಿತ್ತು. ಈಗಲೂ ಆಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕೂಡ ಗಲಭೆಗಳು ನಡೆಯುತ್ತಿರುವುದು ಪುತ್ತೂರು ಮತ್ತು ಬಂಟ್ವಾಳ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ. ಉಳಿದಂತೆ ಸುಳ್ಯ, ಬೆಳ್ತಂಗಡಿ, ಮಂಗಳೂರು, ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ ಮತ್ತು ಕಾಪು ತಾಲ್ಲೂಕುಗಳು ತಣ್ಣಗೆ ಇವೆ. ಹಾಗೆಂದ ಕೂಡಲೇ ಬಂಟ್ವಾಳ ಮತ್ತು ಪುತ್ತೂರು ಕೂಡ ಹೊತ್ತಿ ಉರಿಯುತ್ತಿಲ್ಲ. ಸಮಾಜದ ಎಲ್ಲ ಸ್ತರದಲ್ಲಿರುವ ಹಿಂದುಗಳು ಮತ್ತು ಮುಸ್ಲಿಂಮರು ಸಾಮೂಹಿಕವಾಗಿ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ರಸ್ತೆಯ ಮೇಲೆ ಹೊಡೆದಾಡುತ್ತಾ ನಿಂತಿಲ್ಲ. ರಾಜಕೀಯ ಪ್ರೇರಿತ ಕೆಲವು ನಾಯಕರು ಮತ್ತು ಅವರ ಹಿಂಬಾಲಕರು ಹಲ್ಲೆ ನಡೆದಾಗ ಮತ್ತು ಹೆಣ ಬಿದ್ದಾಗ ಅದನ್ನು ಬಂಡವಾಳ ಮಾಡಿಕೊಳ್ಳುವ ಯತ್ನ ನಡೆಸಿದಾಗ ಪರಿಸ್ಥಿತಿ ಗಂಭೀರವಾಗುತ್ತದೆ. ಶರತ್ ಮಡಿವಾಳ ಅವರ ಪ್ರಕರಣವನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಹಲ್ಲೆ ನಡೆದು ಅವರು ಅಂಗಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಒಬ್ಬ ಮುಸ್ಲಿಂ ಯುವಕ. ಯಾರು ಈ ಹಲ್ಲೆ ನಡೆಸಿದರು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸುವ ಮೊದಲೇ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ರಂಗ ಪ್ರವೇಶ ಮಾಡಿಯಾಗಿತ್ತು. ಪರಿಸ್ಥಿತಿಯ ’ಸದುಪಯೋಗ’ ಮಾಡಿಕೊಳ್ಳುವ ಎಲ್ಲ ಷಡ್ಯಂತ್ರಗಳು ಕೂಡ ಸೃಷ್ಟಿಯಾಗಿ ಬಿಟ್ಟಿದ್ದವು.

ಆ ಘಟನೆ ನಡೆಯುವ ಹಿಂದೆ, ನಡೆದ ಸಂದರ್ಭ ಮತ್ತು ಆನಂತರ ಸುಮಾರು ಎರಡು ವಾರಗಳ ಕಾಲ ನಾನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಓಡಾಡುತ್ತಿದ್ದೆ. ಗಲಭೆ ಸೃಷ್ಟಿಯಾದ ಬಿ.ಸಿ.ರೋಡ್, ಕಲ್ಲಡ್ಕ ಮತ್ತು ಮಂಗಳೂರು ಹಾದಿಯಲ್ಲಿ ಹಗಲು-ರಾತ್ರಿ ಓಡಾಡಿದ್ದೆ. ಎಲ್ಲಿಯೂ ’ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡ’ ನನ್ನ ಕಣ್ಣಿಗಂತೂ ಕಂಡು ಬಂದಿರಲಿಲ್ಲ. ’ಒಳಗೊಳಗೆ ಕೊತ ಕೊತ ಕುದಿಯುತ್ತಿರುವ’ ಹಿಂದು ಅಥವಾ ಮುಸ್ಲಿಂ ಯುವಕರಂತೂ ನನ್ನ ’ಕುರುಡು’ ಕಣ್ಣಿಗೆ ಬಿದ್ದಿರಲಿಲ್ಲ. ಇದರರ್ಥ ನೂರಕ್ಕೆ ನೂರು ಎಲ್ಲವೂ ಸಹಜವಾಗಿಯೇ ಇತ್ತು ಎಂದಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸಿಲು ಶೇಕಡಾ ಹತ್ತರಷ್ಟು ಶಕ್ತಿಗಳು ಶತಪ್ರಯತ್ನ ಮಾಡಿದ್ದರೂ, ಉಳಿದ ಶೇಕಡಾ ತೊಂಬತ್ತರಷ್ಟು ಮಂದಿ ದಿನ ನಿತ್ಯದ ಜಂಜಡಗಳಲ್ಲಿ ಮಗ್ನರಾಗಿದ್ದರು. ಉಳಿದಂತೆ ಅವಿಭಜಿತ ದಕ್ಷಿಣ ಕನ್ನಡದ ಜನಜೀವನ ಎಂದಿನಂತೆ ಸರಾಗವಾಗಿಯೇ ಇತ್ತು. ಆದರೆ ಬೆಂಗಳೂರಿನ ಟೆಲಿವಿಷನ್ ಸ್ಟುಡಿಯೋಗಳಲ್ಲಿ, ಕೆಲವು ರಾಷ್ಟ್ರೀಯ ಚಾನೆಲ್‌ಗಳಲ್ಲಿ ದಕ್ಷಿಣ ಕನ್ನಡಕ್ಕೆ ಬೆಂಕಿ ಹತ್ತಿಸಲಾಗಿತ್ತು! ದಕ್ಷಿಣ ಕನ್ನಡದ ಜನಜೀವನದ ಕುರಿತು ಎಬಿಸಿಡಿ ಗೊತ್ತಿಲ್ಲದ ನಿರೂಪಕರು ಬೆಂಕಿ ಉಗುಳುತ್ತಿದ್ದರೆ, ಸ್ವಯಂಘೋಷಿತ ತಜ್ಞರು-ಬುದ್ಧಿ ಜೀವಿಗಳು ಅದಕ್ಕೆ ಪೆಟ್ರೋಲ್ ಸುರಿಯುತ್ತಿದ್ದರು.

ಹಾಗಿದ್ದರೆ ಇಲ್ಲಿ ನಡೆಯುತ್ತಿರುವುದೇನು? ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯಲ್ಲಿ ಸುಮಾರು ಶೇಕಡಾ ೨೫ರಷ್ಟು ಮುಸ್ಲಿಂರಿದ್ದಾರೆ. ಸಾಂಪ್ರದಾಯಿಕವಾಗಿ ಇಲ್ಲಿನ ಮುಸ್ಲಿಂ ಮತದಾರರು ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಜೊತೆಗೆ ಮೊಗವೀರರು, ಖಾರ್ವಿಗಳು, ಈಡಿಗರು ಕೂಡ ಮೂಲತಃ ಕಾಂಗ್ರೆಸ್ ಬೆಂಬಲಿಗರೇ. ಇನ್ನು ಕ್ರೈಸ್ತ ಜನಾಂಗದವರು ಕಾಂಗ್ರೆಸ್ ಜೊತೆಗೆ ನಿಂತಿದ್ದರು. ಜನಸಂಘ, ಜನತಾಪಕ್ಷ ಪರಿಣಾಮ ಕಾಂಗ್ರೆಸ್‌ನ ಭದ್ರ ಕೋಟೆಯನ್ನು ಒಡೆಯಲು ಬಿಜೆಪಿ ಕೈಯಲ್ಲಿ ಇರುವ ಒಂದೇ ಒಂದು ಅಸ್ತ್ರ ’ಕೋಮು ಗಲಭೆ’ ಸೃಷ್ಟಿಸಿ, ಹಿಂದುಗಳ ಮತಗಳ ಧ್ರುವೀಕರಣ. ಸದ್ಯ ಎರಡು ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕಾಂಗ್ರೆಸ್ ಕೈಯಲ್ಲಿದೆ. 2 ಬಿಜೆಪಿ ಮತ್ತು ಒಬ್ಬ ಪಕ್ಷೇತರರು ಇದ್ದಾರೆ. ಇರುವ ಮೂರು ಅರೆ-ಬರೆ ಲೋಕಸಭಾ ಕ್ಷೇತ್ರಗಳು ಬಿಜೆಪಿ ಕೈಯಲ್ಲಿದೆ. ಅರೆ-ಬರೆ ಏಕೆಂದರೆ ಬೈಂದೂರು ತಾಲ್ಲೂಕು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಉಡುಪಿ ಕ್ಷೇತ್ರ ಚಿಕ್ಕಮಗಳೂರಿಗೆ ಸೇರಿದೆ. ಇನ್ನು ಮಂಗಳೂರು ಮಾತ್ರ ಪೂರ್ತಿ ದಕ್ಷಿಣ ಕನ್ನಡದ ತಾಲ್ಲೂಕುಗಳನ್ನೇ ಒಳಗೊಂಡ ಲೋಕಸಭಾ ಕ್ಷೇತ್ರವಾಗಿದೆ.

ಮುಂಬರುವ 2018ರ ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿ ಹೇಳುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಅದು ಅಳಿವು-ಉಳಿವಿನ ಪ್ರಶ್ನೆ. ಅವಿಭಜಿತ ದಕ್ಷಿಣ ಕನ್ನಡವನ್ನು ಪ್ರತಿನಿಧಿಸುವ ಮೂವರು ಲೋಕಸಭಾ ಸದಸ್ಯರೆಂದರೆ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟಿಲ್.

ಈಗ ಯಡಿಯೂರಪ್ಪ, ಶೋಭಾ ಮತ್ತು ನಳಿನ್ ಕುಮಾರ್ ಅವರು ಬೆಂಕಿ ಹಾಕುತ್ತೇವೆ ಎಂಬ ಹೇಳಿಕೆ ನೀಡಿದ್ದು ಏಕೆ ಎನ್ನುವುದು ಸ್ಪಷ್ಟವಾಗಬಹುದು. ಹೇಗಾದರೂ ಮಾಡಿ ಬೆಂಕಿ ಹಾಕಿದರೆ, ಸಮಾಜದ ಸ್ವಾಸ್ಥ್ಯ ಕೆಡಿಸಿದಲ್ಲಿ ಮಾತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ವಿಧಾನ ಸಭಾ ಕ್ಷೇತ್ರದಲ್ಲಿ ಆರೇಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗುತ್ತದೆ. ಮಿಷನ್ 150ರ ಬಳಿ ಸಾಗಿ ಮತ್ತೆ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎನ್ನುವುದು ಅವರ ಲೆಕ್ಕಾಚಾರ. ಇಲ್ಲಿ ಕೇವಲ ಬಿಜೆಪಿಯತ್ತ ಬೆರಳು ತೋರಿಸುವುದು ತಪ್ಪು. ಏಕೆಂದರೆ ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಕೂಡ ತನ್ನ ಭದ್ರಕೋಟೆಯನ್ನು ಇನ್ನಷ್ಟು ಭದ್ರ ಮಾಡಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆ ಕಾರಣದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ತಪ್ಪು ಮಾಡಿದವರು ಹಿಂದುಗಳೇ ಆಗಿರಲಿ ಅಥವಾ ಇನ್ಯಾವುದೇ ಧರ್ಮದವರಾಗಿರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಪ್ಪೇ ಸಾರಿಸಿದ್ದರು. ಇನ್ಯಾವುದೇ ಧರ್ಮ ಎನ್ನುವ ಬದಲು ಮುಸ್ಲಿಂಮರು ಎಂಬ ಬಾಯಿ ಬಿಟ್ಟು ಹೇಳಿದರೆ, ಎಲ್ಲಿ ಅವರು ಮತ ನೀಡುವುದಿಲ್ಲವೋ ಎಂಬ ಭಯ ಕಾಂಗ್ರೆಸ್ ಪಕ್ಷಕ್ಕೆ. ಕಾಂಗ್ರೆಸ್ ಪಾಲಿಗೆ ಮುಸ್ಲಿಂಮರು ಮತ್ತು ಹಿಂದುಳಿದ ವರ್ಗದವರೆಂದರೆ ಅವರ ಮತಬ್ಯಾಂಕ್. ಕಳೆದ 70 ವರ್ಷಗಳಿಂದಲೂ ಕಾಂಗ್ರೆಸ್ ಮಾಡಿದ್ದು ಇದನ್ನೇ. ಬಿಜೆಪಿ ಹಿಂದೂಗಳಲ್ಲಿ ಭಯ ಹುಟ್ಟಿಸಿ, ಅದರ ಮೂಲಕ ಅವರನ್ನು ಒಗ್ಗೂಡಿಸಿ ಮತ ಸೆಳೆಯುವ ತಂತ್ರ ಬಳಸುತ್ತಿದ್ದರೆ, ಕಾಂಗ್ರೆಸ್ ಮುಸ್ಲಿಂ ಮತ್ತು ಹಿಂದುಳಿದವರ ಮನಸ್ಸಲ್ಲಿ ಭಯ ಬಿತ್ತಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳುವ ಯತ್ನ ಮಾಡುತ್ತಿದೆ.

ಶರತ್ ಮಡಿವಾಳ ಅವರ ಪ್ರಕರಣದ ಸಂದರ್ಭವನ್ನೇ ತೆಗೆದುಕೊಳ್ಳಿ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಅವರನ್ನು ಒಳಗೊಂಡು ಎಲ್ಲ ಪಕ್ಷಗಳ ನಾಯಕರು ರಣಹದ್ದುಗಳಂತೆ ದಕ್ಷಿಣ ಕನ್ನಡಕ್ಕೆ ಬಂದಿಳಿದರು. ಇಲ್ಲಿ ಒಬ್ಬರು ತಮ್ಮ ಪಕ್ಷದ ಸಭೆಯ ನೆಪದಲ್ಲಿ ಬಂದಿಳಿದರೆ, ಮತ್ತೊಬ್ಬರು ಶ್ರದ್ಧಾಂಜಲಿ ಅರ್ಪಿಸಲು ಆಗಮಿಸಿದ್ದರು. ಆದರೆ ಇಬ್ಬರ ಉದ್ದೇಶವೂ ಒಂದೇ ಆಗಿತ್ತು. ಪರಿಸ್ಥಿತಿಯ ದುರ್ಲಾಭ ಪಡೆಯುವುದು.

ಇದು ಕೇವಲ ದಕ್ಷಿಣ ಕನ್ನಡ ಮತ್ತು ಕರ್ನಾಟಕಕ್ಕೆ ಸೀಮಿತವಾದ ರಾಜಕೀಯವಲ್ಲ. ನಮ್ಮ ಇಡೀ ದೇಶದ ರಾಜಕೀಯಕ್ಕೆ ಅಂಟಿಕೊಂಡಿರುವ ಬಹುದೊಡ್ಡ ಶಾಪ. ಕಾಂಗ್ರೆಸ್ ಇನ್ನೂ ತನ್ನ ಹಳೆಯ ತಂತ್ರಗಾರಿಕೆಗೆ ಅಂಟಿಕೊಂಡಿದೆ. ಆದರೆ, ಬಿಜೆಪಿ ತನ್ನ ತಂತ್ರಗಾರಿಕೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡಿಕೊಂಡಿದೆ ಎನ್ನುವುದಕ್ಕೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಆಯ್ಕೆ ಒಂದು ಉದಾಹರಣೆ. ಕೋವಿಂದ್ ಅವರನ್ನು ಆ ಸ್ಥಾನದಲ್ಲಿ ಕೂರಿಸುವ ನಿರ್ಧಾರದಲ್ಲಿ ಒಂದಿನಿತು ರಾಜಕೀಯ ಇಲ್ಲವೇ? ಅದು ಬಿಜೆಪಿಯ ಉದಾತ್ತ ಮನೋಭಾವದ ಫಲವೇ? ಖಂಡಿತ ಅಲ್ಲ. ಯಾರಾದರೂ ಇಲ್ಲ ಬಿಜೆಪಿ ಸಂಪೂರ್ಣ ಬದಲಾಗಿದೆ. ಕೋವಿಂದ್ ಆಯ್ಕೆಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರೆ, ನಾನು ಆ ಮಾತುಗಳನ್ನು ಒಂದು ’ಕಂಡಿಷನ್’ ಮೇಲೆ ಒಪ್ಪಿಕೊಳ್ಳುತ್ತೇನೆ. ಆ ಷರತ್ತು ಏನೆಂದರೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೊತೆಯಾಗಿ ವೈಷ್ಣೋದೇವಿ, ಬನಾರಸ್‌ನ ಸಂಕಟ ಮೋರ್ಚನ, ಉಡುಪಿ ಕೃಷ್ಣ ಮಠ, ಮಧುರೈ ಮೀನಾಕ್ಷಿ ಮತ್ತು ತಿರುಪತಿ ತಿಮ್ಮಪ್ಪನ ಗರ್ಭ ಗುಡಿ ಪ್ರವೇಶಿಸಿ ಆ ದೇವರುಗಳಿಗೆ ಕೈಯಾರೆ ಪೂಜೆ ಮಾಡಿ ಬರಲಿ. ದೇಶದೆಲ್ಲಡೆ ಇರುವ ಮಠಗಳನ್ನು ಪ್ರವೇಶಿಸಿ ಮಠಾಧಿಪತಿಗಳ ಜೊತೆ ಕೂತು ಒಂದು ಬಾರಿ ಊಟ ಮಾಡಿ ಬರಲಿ. ಇನ್ನು ಕಾಂಗ್ರೆಸ್ ಅಂಬೇಡ್ಕರ್ ಹೆಸರಲ್ಲಿ ಮಾಡಿದ ಅಂತರ್ ರಾಷ್ಟ್ರೀಯ ಸಮ್ಮೇಳನವೂ ರಾಜಕೀಯವೇ. ಇಲ್ಲ. ಖಂಡಿತ ಈ ಮೂಲಕ ಸಿದ್ದರಾಮಯ್ಯ ರಾಜಕೀಯ ಮಾಡಿಲ್ಲ ಎಂದು ಯಾರಾದರೂ ಹೇಳಿದರೆ ಅದನ್ನೂ ನಾನು ಒಪ್ಪಲು ಸಿದ್ಧನಿದ್ದೇನೆ. ಆದರೊಂದು ಷರತ್ತು. ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವ ಎಚ್.ಆಂಜನೇಯ ಅವರು ಇದುವರೆಗೆ ಎಷ್ಟು ಜನ ಸಂಪುಟದ ಸಹೋದ್ಯೋಗಿಗಳ ಮನೆಯ ಅಡುಗೆ ಮನೆ ಪ್ರವೇಶಿಸಿ, ಅಲ್ಲೇ ಪಕ್ಕದಲ್ಲಿರುವ ಡೈನಿಂಗ್ ಟೇಬಲ್ ಮೇಲೆ ಊಟ ಮಾಡಿ ಬಂದಿದ್ದಾರೆ ಎಂದು ಹೇಳಲಿ. ಬಿಜೆಪಿ ಪಾಲಿಗೆ ’ಹಿಂದುತ್ವ’ ಒಂದು ಪ್ರಮುಖ ಅಸ್ತ್ರವಾದರೆ; ಕಾಂಗ್ರೆಸ್ ಪಾಲಿಗೆ ’ಅಲ್ಪಸಂಖ್ಯಾತತ್ವ’ ಮತ್ತು ’ಹಿಂದುಳಿದತ್ವ’ ಬಹುದೊಡ್ಡ ಅಸ್ತ್ರಗಳು. ಇವರ ನಡುವೆ ಜನರು ಮೂರ್ಖರಷ್ಟೇ.

ಈ ರಾಜಕೀಯಕ್ಕೆ ಅವಕಾಶ ನೀಡದೇ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುವ ಪ್ರತಿಯೊಂದು ಹಲ್ಲೆ ಅಥವಾ ಕೊಲೆ ಪ್ರಕರಣಗಳ ತನಿಖೆಯನ್ನು ಮುಕ್ತವಾಗಿ ಮಾಡುವ ಅವಕಾಶವನ್ನು ಪೊಲೀಸ್ ಇಲಾಖೆಗೆ ನೀಡಲಿ ನೋಡೋಣ. ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್), ಕಮ್ಯುನಿಸ್ಟ್… ಯಾವುದೇ ಪಕ್ಷದವರು ಪೊಲೀಸ್ ಇಲಾಖೆಯ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸದೇ ಹೋದಲ್ಲಿ, ಅವರಿಗೆ ಮುಕ್ತವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಿದಲ್ಲಿ ಇಲ್ಲಿ ಯಾವುದೇ ’ಕೋಮು ಗಲಭೆ’ ನಡೆಯುವುದಿಲ್ಲ. ಅಥವಾ ಇಲ್ಲಿನ ಗಲಭೆಗಳಿಗೆ ಕೋಮು ಬಣ್ಣ ಅಂಟಿಕೊಳ್ಳುವುದಿಲ್ಲ.

ದುರಂತವೆಂದರೆ ನಮ್ಮ ಸೋ ಕಾಲ್ಡ್ ಬುದ್ಧಿ ಜೀವಿಗಳು, ಸಾಹಿತಿಗಳು, ಪ್ರಜ್ಞಾವಂತರು, ಪತ್ರಕರ್ತರು ಯಾವುದೇ ಹಂತದಲ್ಲಿ ಅವರು ವೈಯಕ್ತಿಕವಾಗಿ ಒಪ್ಪಿಕೊಂಡು ತತ್ವದ ನೆಲೆಯ ಮೇಲೆ ನಿಂತ ರಾಜಕಾರಣಿ ತಪ್ಪು ಮಾಡಿದರೂ, ಅವನನ್ನು ಪ್ರಶ್ನಿಸುವುದಿಲ್ಲ. ಸಮಾಜದ ಸಾಕ್ಷಿಪ್ರಜ್ಞೆಯಾಗಿ ’ತಪ್ಪು ಯಾರೇ ಮಾಡಿದರೂ ತಪ್ಪು’ ಎಂದು ಧೈರ್ಯವಾಗಿ ಹೇಳುವುದಿಲ್ಲ. ಅದನ್ನು ಬಿಟ್ಟು ’ಸೆಲೆಕ್ಟಿವ್ ರಿಯಾಕ್ಷನ್’ ಕೊಡುತ್ತಾ ಸಾಗಿದರೆ ನೀವು ರಾಜಕಾರಣಿಗಳಿಗಿಂತ ಅಪಾಯಕಾರಿ ಆಗಿ ಬಿಡುತ್ತೀರಿ. ಈ ಅಪಾಯಕಾರಿ ಜೀವಿಗಳು ಸಮಾಜದ ಪರವಾಗಿ ನಿಲ್ಲುವುದಿಲ್ಲ. ಅವರಿಗೆ ಬೇಕಾದವರ ಪರ ನಿಂತು, ಸುಃಖ ಅನುಭವಿಸುತ್ತಾರೆ. ಕಾಂಗ್ರೆಸ್‌ನ ಓಲೈಸುವ ರಾಜಕಾರಣ ಮತ್ತು ಬಿಜೆಪಿ ಕಟ್ಟಾ ಹಿಂದುತ್ವ ಎರಡೂ ಪ್ರಜಾಪ್ರಭುತ್ವಕ್ಕೆ ಮಾರಕವೇ. ಇದನ್ನು ಜನರಿಗೆ ಸಾರಿ, ಸಾರಿ ಹೇಳುವ ಜವಾಬ್ದಾರಿ ಸಮಾಜದ ‘ಸಾಕ್ಷಿಪ್ರಜ್ಞೆ’ಗಳದ್ದಾಗಿರಬೇಕು. ಅದಕ್ಕೆ ಗಂಡೆದೆಯೂ ಇರಬೇಕು.

ಅದು ಏಕೆ ಎಂದರೆ, ನಮ್ಮ ದೇಶದ ನೂತನ ರಾಷ್ಟ್ರಪತಿ ಅವರ ಪ್ರಪ್ರಥಮ ಭಾಷಣದಲ್ಲಿ ಹೇಳಿದಂತೆ, ಭಾರತ ವೈವಿದ್ಯಗಳ ಆಗರ. ವೈವಿಧ್ಯಗಳ ಮೂಲಕವೇ ಏಕತೆಯನ್ನು ಸಾಧಿಸಿರುವ ನಮ್ಮ ದೇಶದ ಸಾಮಾಜಿಕ ಹಂದರ ಎಷ್ಟು ಗಟ್ಟಿಯಾಗಿದೆ ಎನ್ನುವುದು ನೇರವಾಗಿ ಬೇರು ಮಟ್ಟದಲ್ಲಿ ಸಂಪರ್ಕ ಇದ್ದವರಿಗೆ ಮಾತ್ರ ಗೊತ್ತಿರುತ್ತದೆ. ಯಾಕೋ ಹೇಳಿಕೊಳ್ಳಬೇಕು ಎಂದೆನ್ನಿಸುತ್ತಿದೆ. ನಾನು ಹುಟ್ಟಿನಲ್ಲಿ ಜೈನ. ಆಚರಣೆಯಲ್ಲಿ ಮನುಷ್ಯನಾಗುವ ಯತ್ನದಲ್ಲಿರುವ ಹುಲು ಮಾನವ. ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಈಗಲೂ ಅಲ್ಲಿನ ಜನರೊಂದಿಗೆ ನೇರ ಸಂಪರ್ಕದಲ್ಲಿರುವವ. ಹುಟ್ಟಿನಿಂದ ಇಂದಿನವರೆಗೆ ಅಲ್ಲಿನ ಹಿಂದುಗಳು, ಹಿಂದುಳಿದವರು, ಮುಸ್ಲಿಂರು, ಕ್ರೈಸ್ತರು… ಎಲ್ಲರೊಂದಿಗೂ ಜೊತೆಯಾಗಿ ಬೆಳೆದವ ಮತ್ತು ಬದುಕುತ್ತಿರುವವ. ಈವತ್ತು ನನ್ನನ್ನು ಬಿಟ್ಟು ನನ್ನ ಕುಟುಂಬದ ಎಲ್ಲ ಸದಸ್ಯರೂ ಜೈನ ಧರ್ಮದ ಅಪ್ಪಟ ಅನುಯಾಯಿಗಳು. ಆದರೆ, ಉಜಿರೆಯ ನಮ್ಮ ಮನೆಯ ಕೆಲಸಕ್ಕೆ ಬರುವ ಶೋಭಾ ಹಿಂದುಳಿದ ವರ್ಗದ ಮಹಿಳೆ. ಆಗಾಗ ನಮ್ಮ ಕಾರಿನ ಡ್ರೈವರ್ ಆಗಿ ಬರುವ ಆಡಮ್ ಮುಸ್ಲಿಂ ಹಾಗೂ ಇನ್ನೊಬ್ಬ ಡ್ರೈವರ್ ವೆಂಕಪ್ಪ ಈಡಿಗ ಸಮುದಾಯಕ್ಕೆ ಸೇರಿದವರು. ಈ ಮೂವರು ಅಥವಾ ಯಾರೇ ನಮ್ಮ ಮನೆಗೆ ಬಂದರೂ ನೇರವಾಗಿ ಅಡುಗೆ ಮನೆಗೆ ಬರುತ್ತಾರೆ. ನಮ್ಮೊಂದಿಗೆಯೇ ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡುತ್ತಾರೆ. ಇಲ್ಲಿ ಎಲ್ಲದಕ್ಕಿಂತ ದೊಡ್ಡದು ಮಾನವ ಧರ್ಮ. ಒಬ್ಬ ಮನುಷ್ಯನಾಗಿ ಮತ್ತೊಬ್ಬ ಮನುಷ್ಯನ ಮೇಲೆ ಪ್ರೀತಿ-ವಿಶ್ವಾಸ ತೋರಿಸಲು ಸಾಧ್ಯವಿಲ್ಲ ಎಂದಾದಲ್ಲಿ ನಾವು ಯಾವ ಧರ್ಮಕ್ಕೆ ಸೇರಿದ್ದರೂ ಅದಕ್ಕೆ ಬೆಲೆಯಿರುವುದಿಲ್ಲ.

ನಮ್ಮ ಮನೆಯಲ್ಲಿ ಇರುವ, ಈ ಕೋಮು ಸೌಹಾರ್ದ ಮನೋಭಾವ ಸ್ವಲ್ಪ ಹೆಚ್ಚು-ಕಮ್ಮಿ ದಕ್ಷಿಣ ಕನ್ನಡದ ಬಹುತೇಕ ’ವಿದ್ಯಾವಂತ’ ಹಿಂದು, ಮುಸ್ಲಿಂ, ಕ್ರೈಸ್ತ ಮತ್ತು ಎಲ್ಲ ಧರ್ಮದವರ ಮನೆಗಳಲ್ಲಿ ಕಾಣಬಹುದು. ನಾನು ಕಣ್ಣಾರೆ ಕಂಡಿದ್ದೇನೆ ಕೂಡ. ಈ ಸೌಹಾರ್ದ ಮನೋಭಾವವನ್ನು ತುಂಡರಿಸುವ ಯತ್ನ ಕಳೆದ ಏಳು ದಶಕಗಳಿಂದಲೂ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಅದಕ್ಕೆ ಇಲ್ಲಿನ ಪ್ರಜ್ಞಾವಂತರು ಎಂದೂ ಬಲಿ ಬಿದ್ದಿಲ್ಲ. ಬೀಳಲಾರರು. ಅದಕ್ಕೇ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಈವತ್ತು ಮೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದರೆ, 13 ವಿಧಾನ ಸಭಾ ಕ್ಷೇತ್ರದಲ್ಲಿ 10 ಕಾಂಗ್ರೆಸ್ ಶಾಸಕರಿದ್ದಾರೆ. ಇದಕ್ಕಿಂತ ದೊಡ್ಡ ಪ್ರಜ್ಞಾವಂತಿಕೆ ಬೇಕಿಲ್ಲ ಎಂದೆನ್ನಿಸುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ.

ಪರಿಸ್ಥಿತಿ ಹೀಗಿದ್ದರೂ, ದಕ್ಷಿಣ ಕನ್ನಡ ಹೊತ್ತಿ ಉರಿಯುತ್ತಿದೆ ಎಂಬ ಮಾತು ಕೇಳಿದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದಂತೆ ಬೆಂಕಿ ಹಾಕಬೇಕು ಎಂದೆನ್ನಿಸುತ್ತದೆ. ಬೆಂಕಿ ಹಾಕಬೇಕು, ಯಾವುದಕ್ಕೆಂದರೆ ಕಾಂಗ್ರೆಸ್‌ನ ಓಲೈಸುವ, ಬಿಜೆಪಿ ಹಿಂದುತ್ವದ ರಾಜಕಾರಣಕ್ಕೆ; ವಾಸ್ತವದ ಅರಿವೇ ಇಲ್ಲದೇ ಟಿಆರ್‌ಪಿ ಬೆನ್ನ ಹಿಂದೆ ಬಿದ್ದು ಒಂದು ಸಣ್ಣ ಘಟನೆಯನ್ನು ವೈಭವೀಕರಿಸುವ ನ್ಯೂಸ್ ಚಾನೆಲ್‌ಗಳಿಗೆ ಮತ್ತು ಯಾವುದೋ ವೈಯಕ್ತಿಕ ಮೋಹ-ತತ್ವ-ಸಿದ್ಧಾಂತಗಳಿಗೆ ಬಲಿಯಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಬುದ್ಧಿ ಜೀವಿಗಳ ಮನಸ್ಥಿತಿಗೆ.

ಲೇಖಕರು ಹಿರಿಯ ಪತ್ರಕರ್ತರು ಹಾಗೂ ಸಾಹಿತಿ.

ಇದನ್ನೂ ಓದಿ: ಸಂದರ್ಶನ – ಮನುಷ್ಯತ್ವ ಹಾಗೂ ಮನುಷ್ಯ ಸಂವೇದನೆಯ ಸಾಹಿತ್ಯವೇ ಮೇಲು: ಸತೀಶ ಚಪ್ಪರಿಕೆ – http://kundapraa.com/?p=21545 

Leave a Reply