ಕುಂದಾಪುರ: ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ. ಎಲ್ಲಿಯ ಹೆಣ್ಣೋ, ಎಲ್ಲಿಯ ಗಂಡೋ ಎಂತಹ ವಿಚಿತ್ರ ಗೊತ್ತಾ? 8ವರ್ಷದ ಹಿಂದೆ ತಬ್ಬಲಿಯಾಗಿ ಕುಂದಾಪುರ ಸ್ಫೂರ್ತಿಧಾಮ ಸೇರಿಕೊಂಡು ಈವರೆಗೂ ಆಶ್ರಮದ ಮಡಿಲಲ್ಲಿ ಬೆಳೆದ ಹೆಣ್ಣು ಮಗುವೊಂದು ಈ ದಿನ ಗೌರಿ ಬಿದನೂರಿನ ವೆಂಕಟೇಶ ಕಾಮತ್ ಎಂಬ 29ರ ಹರೆಯದ ಗಂಡಿನ ಕೈಹಿಡಿದು ಹೊರಟು ನಿಂತ ದೃಶ್ಯ ನಿಜಕ್ಕೂ ಆಶ್ಚರ್ಯ. ಕುಂದಾಪುರ ಉಪನೋಂದಾವಣಾಧಿಕಾರಿಗಳ ಕಛೇರಿಯಲ್ಲಿ ಕಾನೂನು ರೀತಿ ಸತಿ-ಪತಿಗಳಾದ 20ರ ಹರೆಯದ ಪೂಜಾ 29ರ ಹರೆಯದ ವೆಂಕಟೇಶ ಕಾಮತ್ ಕಛೇರಿಯಿಂದ ಹೊರಬಂದು ನಿಂತಾಗ ಕಾಣುಗರ ಕಣ್ಣಿಗೆ ಹೀರೋಗಳಾದರು.
ಹೌದು ಅನಾಥೆಯೆಂದು ಹಣೆಪಟ್ಟಿ ಕಟ್ಟಿಕೊಂಡು ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸ್ಫೂರ್ತಿಧಾಮದ ಮಕ್ಕಳ ಆಶ್ರಮಕ್ಕೆ ದಾಖಲಾದ ಪೂಜಾ ಎಂಟು ವರ್ಷ ಕಳೆಯುವುದರ ಒಳಗೆ ಏರಿದ ಎತ್ತರವೆಷ್ಟು ಗೊತ್ತ? 5ನೇ ತರಗತಿಯಿಂದ 7ನೇ ತರಗತಿ, 7ನೇ ತರಗತಿಯಿಂದ ನೇರ 10ನೇ ತರಗತಿ ಈಗ ದ್ವೀತಿಯ ಪಿ.ಯು.ಸಿ. ವಿದ್ಯಾರ್ಥಿನಿ. ಆಗಲೇ ಕಂಕಣ ಭಾಗ್ಯ ಕೂಡಿ ಬಂತು. ಜೀವನದಲ್ಲಿ ಆದರ್ಶ ಮೆರೆಯಬೇಕೆಂಧು ಹಂಬಲಿಸುತ್ತಾ ಬಂದ ಹೆಣ್ಣುಗಳನ್ನೆಲ್ಲಾ ತಿರಸ್ಕರಿಸುತ್ತಾ ನಿಂತ ಪದವೀಧರ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಮುಗಿಸಿ ಗೌರಿಬಿದನೂರಿನಲ್ಲಿ ನೆಲೆಸಿರುವ ವೆಂಕಟೇಶ ಕಾಮತ್‍ರಿಗೆ ಪೂಜಾ ಸರಿಯಾದ ಜೋಡಿ ಎಂದು ಕಂಡಿತು. ತಾಯಿ ಇಲ್ಲದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆಗೆ ಆಸರೆಯಾಗಿ ನಿಂತ ಒಬ್ಬನೇ ಮಗನಾದ ವೆಂಕಟೇಶ ಕಾಮತ್‍ಗೆ ಆಸೆಗೆ ತಕ್ಕಂತೆ ಹೆಣ್ಣು ನೋಡುವ ಜವಾಬ್ದಾರಿ ಅತ್ತೆಯವರದ್ದಾಗಿತ್ತು. ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಕೇಶವ ಕೋಟೇಶ್ವರರನ್ನು ಸಂಪರ್ಕಿಸಿ ಹೆಣ್ಣಿಗಾಗಿ ಮನವಿ ಸಲ್ಲಿಸಿದರು. ಎರಡೂ ಕಡೆಯವರಿಗೆ ಒಪ್ಪಿಗೆಯಾಯಿತು. ನಿಯಮಾನುಸಾರ ಕಾನೂನು ಬದ್ದ ಮದುವೆಗೆ ಎರಡೂ ಕಡೆಯವರು ಒಪ್ಪಿ ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ ನಡೆದೇ ಹೋಯಿತು. ಇಲ್ಲಿ ಎರಡೂ ಕಡೆಯವರು ಸಂಪ್ರದಾಯಕ್ಕಿಂತ ಕಾನೂನು ಮತ್ತು ಆರೋಗ್ಯಕ್ಕೆ ಬೆಲೆ ಕೊಟ್ಟರು.
“ಇದು ನಿಜವಾಗಿಯೂ ಆದರ್ಶ. ಜಾತಿ ಧರ್ಮವೆಂಬ ಬೇಲಿಯಿಲ್ಲ ವರದಕ್ಷಿಣೆ ವರೋಪಚಾರವೆಂಬ ಹಿಂಸೆ ಇಲ್ಲ. ಮದುವೆಯ ಖರ್ಚಿಗಾಗಿ ಲಕ್ಷಾಂತರ ಸಾಲಮಾಡಿ ಸಾಲ ತೀರಿಸುವ ಸಲುವಾಗಿ ತಲೆಬಿಸಿ ಮಾಡಬೇಕಾಗಿಲ್ಲ. ಎಲ್ಲವೂ ಸಿಂಪಲ್. ಯುವ ಜನತೆಗೆ ಮಾದರಿ. ಸಮಾಜ ಸುಧಾರಣೆಯಾಗಬೇಕೆಂದು ಹಂಬಲಿಸುವ ಯುವಕರೆಲ್ಲರೂ ಈ ರೀತಿಯ ಮದುವೆಗೆ ಮುಂದಾದರೆ ಸುಧಾರಣೆ ಖಂಡಿತಾ ಸಾಧ್ಯ. ಮೊದಲು ನಾವು ಸುಧಾರಣೆ ಅಗಬೇಕು ಅಷ್ಟೆ?” -ಡಾ. ಕೇಶವ ಕೋಟೇಶ್ವರ