ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಜೆಸಿಐ ಸಂಸ್ಥೆಯ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ರಂಗ ಸೈಕಲಿನಲ್ಲಿ ಛದ್ಮವೇಷ ಸ್ವರ್ಧೆ ನೋಡುಗರ ವಿಶೇಷ ಗಮನ ಸೆಳೆಯಿತು. ಯೂರೋಪ್ ಮೂಲದ ದೇಶಗಳಲ್ಲಿ ಸಾಕಷ್ಟು ಪ್ರಖ್ಯಾತ ಪಡೆದಿರುವ ಈ ಸೈಕಲ್ ಛದ್ಮವೇಷ ಜನಾಕರ್ಷಣೆಯ ಕೇಂದ್ರ ಬಿಂದು. ಭಾರತದಲ್ಲಿ ಇದರ ಕುರಿತು ಮಾಹಿತಿ ಕಡಿಮೆ ಇದ್ದರು ಕೂಡ ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದರು. ಕುಂದಾಪುರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಸೈಕಲ್ ಛದ್ಮವೇಷಕ್ಕೆ ಹಲವು ವೇಷಧಾರಿಗಳು ರಂಗು ತಂದರು. ಚಿಕ್ಕ ಮಕ್ಕಳಿಂದ ಹಿಡಿದು ಆಸಕ್ತ ಹಿರಿಯರು ಕೂಡ ಸೈಕಲ್ ಛದ್ಮವೇಷದಲ್ಲಿ ಕುಂದಾಪುರದ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು.
ಕುಂದಾಪುರ ಜೇಸಿಐ ಇದರ ಒಂದು ವಾರದ ರಂಗ ಸಪ್ತಾಹದ ಪ್ರಾರಂಭದ ದಿನದಂದು ಕುಂದಾಪುರ ಲಕ್ಷ್ಮೀ ನರಸಿಂಹ ಕಲಾ ಮಂದಿರದ ಮುಂಭಾಗದಿಂದ ಪ್ರಾರಂಭಗೊಂಡ ಸೈಕಲ್ ಜಾಥಾ ಮತ್ತು ಸೈಕಲ್ ಛದ್ಮವೇಷ ಕಾರ್ಯಕ್ರಮವನ್ನು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಂದಾಪುರ ಉದ್ಘಾಟಿಸಿದರು. ಇದೇ ಸಂದರ್ಭ ಕುಂದಾಪುರ ಸೈಕ್ಲಿಂಗ್ ಕ್ಲಬ್‌ನ ಲಾಂಛನದ ಬಿಡುಗಡೆ ನಡೆಯಿತು. ಸಹನಾ ಡೆವಲಪರ‍್ಸ್‌ನ ಸುರೇಂದ್ರ ಶೆಟ್ಟಿ ಸೈಕಲ್ ಜಾಥಕ್ಕೆ ಬಾವುಟ ಹಾರಿಸಿ ಚಾಲನೆ ನೀಡಿದರು.
ಕುಂದಾಪುರ ಜ್ಯೂನಿಯರ್ ಕಾಲೇಜು ಆವರಣದಿಂದ ಹೊರಟ ಸೈಕಲ್ ಛದ್ಮವೇಷ ಮತ್ತು ಸೈಕಲ್ ಜಾಥವು ಕುಂದಾಪುರದ ಸರ್ವೀಸ್ ಬಸ್ ನಿಲ್ದಾಣದ ಮೂಲಕ ಸಾಗಿ ಬಂದು ಪಾರಿಜಾತ ವೃತ್ತದ ಮೂಲಕ ಸಾಗಿ ಶಾಸ್ತ್ರೀ ವೃತ್ತದವರೆಗೆ ತೆರಳಿ ಪುನಃ ಕಲಾಮಂದಿರದ ಬಳಿ ಆಗಮಿಸಿತ್ತು. ಸೈಕಲ್ ಛದ್ಮವೇಷದಲ್ಲಿ ಚಿಕ್ಕ ಮಕ್ಕಳು ಮುಖವಾಡ ಧರಿಸಿ ಭಾಗವಹಿಸಿದ್ದರೆ, ನಾರದ, ಟ್ರೈಸಿಕಲ್, ಆಮೆಯ ರಕ್ಷಿಸಿ ಘೋಷಣೆ ಇರುವ ಸೈಕಲ್ ಛದ್ಮವೇಷಧಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಕುಂದಾಪುರ ಜೇಸಿಐ ಅಧ್ಯಕ್ಷೆ ಅಕ್ಷತಾ ಗಿರೀಶ್, ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್, ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೇಸಿಐ ರಾಪ್ಟ್ರೀಯ ಮಾಜಿ ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್., ಕಾರ್ಯದರ್ಶಿ ರಾಘು ವಿಠಲವಾಡಿ, ಜೇಸಿರೆಟ್ ಅಧ್ಯಕ್ಷೆ ನಾಗರತ್ನ, ಖಾಜಾಂಚಿ ಚೇತನ್ ದೇವಾಡಿಗ, ಪೂರ್ವಾಧ್ಯಕ್ಷ ನವೀನ್ ಶೇಟ್, ಕುಂದಾಪುರ ಸೈಕ್ಲಿಂಗ್ ಕ್ಲಬ್‌ನ ಸಚಿನ್ ನಕ್ಕತ್ತಾಯ, ಪ್ರವೀಣ್ ಕುಮಾರ್, ದಾಮೋದರ ಪೈ ಮತ್ತು ಅಕ್ಷತ್ ಶೆಟ್ ಉಪಸ್ಥಿತರಿದ್ದರು.