ತಿಂಗಳ ಬೆಳಕಿನಲ್ಲಿ ಸಂಗೀತದ ಕಂಪು

Click Here

Call us

Call us

Call us

ಡಾ. ಪಾರ್ವತಿ ಜಿ.ಐತಾಳ್ | ಕುಂದಾಪ್ರ ಡಾಟ್ ಕಾಂ ಲೇಖನ
ಭಾರತೀಯ ಸಂಗೀತ ಕಲಾ ಪರಂಪರೆಗೆ ಜಗತ್ತಿನಲ್ಲಿ ಅದರದ್ದೇ ಆದ ಅನನ್ಯತೆಯಿದೆ. ಭಾವಪೂರ್ಣ ಸೊಬಗನ್ನು ಹೊಂದಿದ ಅದು ಕೇಳುಗನನ್ನು ದೈವೀಕವಾದ ಆತ್ಮಾನಂದದತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಅದನ್ನು ಕೇಳಿ ಆನಂದಿಸಬೇಕಾದರೆ ಸುಸಂಸ್ಕೃತವಾದ ಒಂದು ಮನಸ್ಸು ಬೇಕು. ಆದರೆ ಇಂದಿನ ವೇಗದ ಯುಗದಲ್ಲಿ ನಮ್ಮ ಈ ಶ್ರೀಮಂತ ಪರಂಪರೆಯ ಬಗ್ಗೆ ಗಮನ ಹರಿಸದೆ, ಮನಸ್ಸನ್ನು ಉದ್ರೇಕಗೊಳಿಸುವ ಉನ್ಮಾದಪೂರ್ಣ ಪಾಶ್ಚಾತ್ಯ ಜನಪ್ರಿಯ ಸಂಗೀತವನ್ನು ಅಳವಡಿಸಿಕೊಂಡ ಗೀತೆಗಳನ್ನು ಕೇಳುವ ಹುಚ್ಚನ್ನು ಬೆಳೆಸಿಕೊಂಡ ಜನರನ್ನು ನಾವು ನೋಡುತ್ತೇವೆ. ಕುಂದಾಪುರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಬಗ್ಗೆ ಒಲವುಳ್ಳ ವಾತಾವರಣ ಇಲ್ಲದಿರುವುದನ್ನು ಮನಗಂಡ ಅನೇಕ ಸಂಸ್ಥೆಗಳು ಅದನ್ನು ಪ್ರೋತ್ಸಾಹಿಸಲು ಈ ಹಿಂದೆಯೂ ಪ್ರಯತ್ನಿಸಿದ್ದಿದೆಯಾದರೂ ಇನ್ನೂ ಅದು ಸಾಕಷ್ಟು ಪುಷ್ಟಿಗೊಂಡಿಲ್ಲವೆಂಬ ಕಾರಣಕ್ಕೆ ಕೋಟೇಶ್ವರದ ಶಾಂತಿಧಾಮ ಟ್ರಸ್ಟ್(ರಿ) ಇವರು ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್,(ರಿ), ಸಾಧನಾ ಕಲಾ ಸಂಗಮ (ರಿ), ಕಲಾಕ್ಷೇತ್ರ ಮತ್ತು ನಾಟ್ಯಚಂದ್ರಿಕಾ ಎಂಬ ಇತರ ನಾಲ್ಕು ಸಂಸ್ಥೆಗಳ ಸಹಯೋಗದೊಂದಿಗೆ ಶಾಂತಿಧಾಮ ಪೂರ್ವ ಗುರುಕುಲದ ಬಯಲುರಂಗಮಂದಿರದ ಗ್ರಾಮೀಣ ಪ್ರದೇಶದಲ್ಲಿ ನಾಡಿನ ಪ್ರಸಿದ್ಧ ಸಂಗೀತ ಕಲಾವಿದರು ಮತ್ತು ಅರಳು ಪ್ರತಿಭೆಗಳನ್ನು ಸೇರಿಸಿಕೊಂಡು ಸಂಜೆ 7 ಗಂಟೆಯಿಂದ 11 ಗಂಟೆಯ ತನಕ ’ ಲಹರಿ-ತಿಂಗಳ ಬೆಳಕಿನಲ್ಲಿ ಸಂಗೀತದ ಕಂಪು ’ ಎಂಬ ಅಪೂರ್ವ ಸಂಗೀತ ಕಾರ್ಯಕ್ರಮವನ್ನು ನಡೆಸಿದರು.
ನೆರೆದಿದ್ದ ಶ್ರೋತೃವರ್ಗವು ಸಂಗೀತದ ರಸದೌತಣವನ್ನು ಉಂಡು ತೃಪ್ತಿಯಿಂದ ತಲೆದೂಗಿತು..

Call us

Click Here

ಪ್ರಬುದ್ಧ ಕಲಾವಿದರಿಂದ ಒಂದೊಂದು ಗಂಟೆಗಳ ಎರಡು ಹಿಂದುಸ್ಥಾನಿ ಮತ್ತು ಒಂದು ಕರ್ಣಾಟಕಿಯ ವೀಣಾವಾದನ ಕಛೇರಿಗಳು ಕಾರ್ಯಕ್ರಮಕ್ಕೆ ಅಪೂರ್ವ ಕಳೆಯನ್ನಿತ್ತವು. ಆರಂಭದಲ್ಲಿ ಶಾರದಾ ಭಟ್, ಕಟ್ಟಿಗೆ ಮತ್ತು ಕೊನೆಯಲ್ಲಿ ಗಜಾನನ ಹೆಬ್ಬಾರ್ ಅವರುಗಳಿಂದ ಹಿಂದೂಸ್ಥಾನಿ ಗಾಯನಗಳಿದ್ದವು. ಶುದ್ಧ ಶಾರೀರದ ಶಾರದಾ ಭಟ್ ತಮ್ಮ ಗಾಯನವನ್ನು ಶುದ್ಧ ಕಲ್ಯಾಣ್ ರಾಗದ ’ತುಮ ಬಿನಾ ಕೋನ್ ರಾಮ ರಘುನಾಥ’ ಎಂಬ ಚೀಸ್‌ನೊಂದಿಗೆ ಆರಂಭಿಸಿದರು. ಎಲ್ಲ ಸ್ಥಾಯಿಗಳಲ್ಲಿ ಅನಾಯಾಸವಾಗಿ ಸಂಚರಿಸುತ್ತ ಧೃತ್‌ನ್ನು ಅತ್ಯಂತ ಪ್ರಾಮಾಣಿಕ ಆರೈಕೆಯಿಂದ ಆಕರ್ಷಣೀಯವಾಗಿ ಪೋಷಿಸುವ ಮೂಲಕ ಅವರು ತಮ್ಮ ಅನನ್ಯತೆಯನ್ನು ಮೆರೆದರು. ಮುಂದೆ ದುರ್ಗಾರಾಗದಲ್ಲಿ ’ಸಖಿ ಮೋರೆ ರುಮ ಝುಮ’ಎಂಬ ಪ್ರಭಾತ್ ರೇ ಅವರ ಬಂದಿಶನ್ನು ಹಾಡಿ ನಂತರ ’ಕ್ಷಣ ಭರ ಉಗಡನಯನ ದೇವಾ’ ಎಂಬ ಭಕ್ತಿಗೀತೆಯೊಂದಿಗೆ ತಮ್ಮ ಗಾಯನವನ್ನು ಮುಕ್ತಾಯಗೊಳಿಸಿದರು.

ಹಿಂದೂಸ್ಥಾನಿ ಗಾಯನ ಮತ್ತು ಸಾರಂಗಿ ವಾದನಕ್ಕೆ ಪ್ರಸಿದ್ಧಿ ಗಳಿಸಿದ ಗಜಾನನ ಹೆಬ್ಬಾರ್ ಬಿಹಾಗ್ ರಾಗವನ್ನು ಪ್ರಧಾನ ರಾಗವಾಗಿ ಆಯ್ದುಕೊಂಡು ವಿಲಂಬಿತ್ ಮತ್ತು ದೃತ್‌ಗಳಲ್ಲಿ ’ಸಜನಿ ತೂ ಮೋಹಮಯಿ’ ಎಂಬ ಬಂದಿನ್ನು ವಿಸ್ತಾರವಾಗಿ ಮಂದ್ರ-ಮಧ್ಯಮ-ತಾರಗಳ ನಡುವೆ ಲೀಲಾಜಾಲವಾಗಿ ಸಂಚರಿಸುತ್ತ ಹಾಡಿ ರಸಿಕರ ಮನಗೆದ್ದರು. ಮುಂದೆ ಕೇದಾರದಲ್ಲಿ ’ತುಮ ಸುಗರ ಚತುರ ಭೈಯಾ’ ಎಂಬ ಪಾರಂಪರಿಕ ಬಂದಿಶ್ ಮತ್ತು ’ಚೈನ ತೋ ಆಯಿ’ ಎಂಬ ಕುಮಾರ ಗಂಧರ್ವರ ಬಂದಿಶ್‌ಗಳನ್ನು ಹಾಡಿದರು. ಗುರಾತೋ ಜಿನೆ ಹಾಗೂ ಗುರೂಜೀ ಮ್ಹಾರೆ ಮಾನೆ’ ಎಂಬ ನಿರ್ಗುಣಿ ಭಜನ್ ಹಾಡಿ ನಂತರ ಕೊನೆಯಲ್ಲಿ ಭೈರವಿಯ ’ ಅಬ್ ಮೋರೆ ನೈಯಾಂಪಾರ್ ಕರೋ ಪ್ರಭೂ’ ಎಂಬ ಭಾವಪೂರ್ಣ ಭಜನ್ ಹಾಡುತ್ತ ತಮ್ಮ ಗುರುಗಳಾದ ನಾರಾಯಣ ಪಂಡಿತ್ ಅವರು ತಮ್ಮ ಕೊನೆಯ ದಿನಗಳಲ್ಲಿ ರಚಿಸಿ ಅದನ್ನು ಬಹಳವಾಗಿ ಇಷ್ಟ ಟ್ಟು ಹಾಡುತ್ತಿದ್ದುದನ್ನು ನೆನೆಸಿಕೊಂಡು ಭಾವುಕರಾದರು.

                 ಡಾ. ಪಾರ್ವತಿ ಜಿ.ಐತಾಳ್ |

ಈ ಎರಡೂ ಕಛೇರಿಗಳಿಗೆ ಅದ್ಭುತ ಸಂವಾದಿಯಾಗಿ ಹಾರ್ಮೋನಿಯಂ ನುಡಿಸಿದವರು ಪ್ರಸಿದ್ಧ ಹಾರ್ಮೋನಿಯಂ ಕಲಾವಿzರಾದ ಶಶಿಕಿರಣ್. ವಿಶೇಷ ಭಾರವನ್ನು ಲಯದಲ್ಲಿ ತೋರಿಸಿಕೊಳ್ಳುವ ಬೆರಳುಗಾರಿಕೆಯ ಭಾರ್ಗವಿ ದೇರಾಜೆಯವರು ತಬಲಾ ಸಾಥ್ ನೀಡಿದರು. ಡಾ.ರಾಘವೇಂದ್ರ ಹೆಬ್ಬಾರ್ ಮತ್ತು ಶ್ಯಮಂತಕ ಐತಾಳ್ ಸಹಗಾಯನದಲ್ಲಿದ್ದರು.

ಪ್ರತಿಭಾವಂತ ವೀಣಾವಾದಕಿ ಶ್ರುತಿ ಕೆ,ರಾವ್ ಬೆಂಗಳೂರಿನವರಾದರೂ ಮೂಲತಃ ಬಾರಕೂರಿನವರು. ವಾದನದ ನಾದಸೌಖ್ಯವನ್ನು ತುಂಬಿಸಿ ಕೊಡಲು ತಮ್ಮ ಶಕ್ತಿಮೀರಿ ಶ್ರಮಿಸಿ ಯಶಸ್ವಿಯಾದ ಇವರ ಪ್ರಸ್ತುತಿಯ ಹಿಂದೆ ಬಹಳಷ್ಟು ಪರಿಶ್ರಮವಿದ್ದದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ದರ್ಬಾರ್ ರಾಗದ ’ಚಲಮೇಲ’ ವರ್ಣದಿಂದ ತಮ್ಮ ಕಛೇರಿಯನ್ನು ಆರಂಭಿಸಿದ ಇವರು ಹಂಸಧ್ವನಿಯ ’ಗಂಗಣಪತೇ’ ಮೂಲಕ ಮುಂದುವರೆದು ನಳಿನಕಾಂತಿ ರಾಗದ ’ಮನವ್ಯಾಲಕುಂ’ ನುಡಿಸಿದ ನಂತರ ಕಛೇರಿಯ ಪ್ರಧಾನ ರಾಗವಾಗಿ ಹೇಮಾವತಿ ರಾಗದ ’ ಶ್ರೀಕಾಂತಿ ಮತಿಂ’ಯನ್ನು ವಿಸ್ತಾರವಾಗಿ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಧನಶ್ರೀ ರಾಗದ ತಿಲ್ಲಾನ ನುಡಿಸಿ ನಧ್ಯಮಾವತಿಯ ’ ಭಾಗ್ಯದ ಲಕ್ಷ್ಮಿ ಬಾರಮ್ಮ’ ದೊಂದಿಗೆ ಅಚ್ಚುಕಟ್ಟಾಗಿ ತಮ್ಮ ಕಛೇರಿಗೆ ಮಂಗಳ ಹಾಡಿದರು. ಇವರಿಗೆ ಮೃದಂಗ ಪಕ್ಕವಾದ್ಯ ನುಡಿಸಿದವರು ಅನುಭವಿ ಮೃದಂಗ ವಾದಕರಾದ ಬಾಲಚಣದ್ರ ಆಚಾರ‍್ಯ. ಕಛೇರಿ ಸುಖವಾಗಿ ಸಾಗಲು ಕಾರಣ ಇವರ ಪಕ್ಕವಾದ್ಯವೂ ಹೌದು. ತಾಳದಲ್ಲಿ ಸಹಕರಿಸಿದವರು ಪವನ ಬಿ.ಆಚಾರ್ಯ.

Click here

Click here

Click here

Click Here

Call us

Call us

ಈ ಮುಖ್ಯ ಕಛೇರಿಗಳ ನಡುವೆ ಕೃತ್ತಿಕಾ ಶೆಣೈ ಮತ್ತು ಅನೂಷಾ ಭಟ್ ಎಂಬ ಇಬ್ಬರು ಸ್ಥಳೀಯ ಅರಳು ಪ್ರತಿಭೆಗಳ ಗಾಯನಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಮಧುರ ಕಂಠದ ಇಬ್ಬರು ಕಲಾವಿದೆಯರೂ ಪದಲಾಲಿತ್ಯ, ಮತ್ತು ಸೂಕ್ತ ಸಂಚಾರಗಳೊಂದಿಗೆ ಚೊಕ್ಕವಾಗಿ ಹಾಡಿ ಭವಿಷ್ಯದಲ್ಲಿ ತಾವು ಉತ್ತಮ ಕಲಾವಿದೆಯರಾಗಬಲ್ಲೆವೆಂದು ತೋರಿಸಿಕೊಟ್ಟರು. ಇವರಿಗೆ ಬೆಳೆಯುತ್ತಿರುವ ಕಲಾವಿದರಾದ ರಾಘವೇಂದ್ರ ಭಟ್ಕಳ ತಬಲಾದಲ್ಲಿ ಮತ್ತು ಶ್ಯಮಂತಕ ಐತಾಳ್ ಹಾರ್ಮೋನಿಯಂನಲ್ಲಿ ಸಹಕರಿಸಿದರು.

ಇಂಥ ಗಾನ ಲಹರಿಯನ್ನು ಪ್ರತಿ ವರ್ಷವೂ ಇನ್ನಷ್ಟು ವೈಶಿಷ್ಟ್ಯ ಮತ್ತು ವೈವಿಧ್ಯಗಳೊಂದಿಗೆ ಇಡೀ ರಾತ್ರಿ ನಡೆಸಬೇಕೆಂಬ ಆಶಯವನ್ನು ಸಂಘಟಕರು ವ್ಯಕ್ತಪಡಿಸುವುದರೊಂದಿಗೆ ತಿಂಗಳ ಬೆಳಕಿನ ಸಂಗೀತಕ್ಕೆ ಮಂಗಳ ಹಾಡಲಾಯಿತು.

 

Leave a Reply