ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ನಡೆಯಲಿರುವ ವಸಂತ ವೇದಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಸಂಯುಕ್ತ ಆಶ್ರಯದಲ್ಲಿ 20 ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಅಡಿಗ ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 20 ವರ್ಷದಿಂದ ಬೇಸಿಗೆ ರಜೆಯಲ್ಲಿ ವಿಪ್ರ ಬಾಂಧವರ ಮಕ್ಕಳಿಗಾಗಿ ಸಾಲಿಗ್ರಾಮದಲ್ಲಿ ಆಯೋಜಿಸುತ್ತಿರುವ ‘ವಸಂತ ವೇದ ಶಿಬಿರ’ ಪೂಜೆಯ ವಿಧಿ-ವಿಧಾನ, ವೈದಿಕ ಪದ್ಧತಿಯ ಆಚಾರ-ವಿಚಾರ ಮುಂತಾದ ಧಾರ್ಮಿಕ ಪ್ರಜ್ಞೆಯನ್ನು ಬೋಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ 20 ದಿನಗಳ ಕಾಲ ಸಂಪೂರ್ಣ ಉಚಿತವಾಗಿ ಶಿಬಿರ ನಡೆಯಲಿದೆ. ಗೋವಾ, ಮುಂಬೈ ಹಾಗೂ ಹೊರ ಜಿಲ್ಲೆಗಳ ಸಹಿತ 400 ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಆಡಳಿತ ಮಂಡಳಿ ಸದಸ್ಯ ಸದಾರಮ ಹೇರ್ಳೆ ಮಾತನಾಡಿ, ಮಕ್ಕಳಿಗೆ ಧಾರ್ಮಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಶಿಬಿರ ಸಹಾಯಕವಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಠ-ಪ್ರವಚನಗಳನ್ನು ತಿಳಿಯಬೇಕು ಎಂದರು.
ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ ಐತಾಳ, ಚಂದ್ರಶೇಖರ್ ಉಪಾಧ್ಯ, ಕೂಟ ಮಹಾಜಗತ್ತು ಸಾಲಿಗ್ರಾಮ ಘಟಕದ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ಚಂದ್ರಶೇಖರ ಹೊಳ್ಳ ಉಪಸ್ಥಿತರಿದ್ದರು. ದೇವಸ್ಥಾನದ ಮ್ಯಾನೇಜರ್ ನಾಗರಾಜ್ ಹಂದೆ ಕಾರ್ಯಕ್ರಮ ನಿರೂಪಿಸಿದರು.