ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಎ.15ರಿಂದ ಮೊದಲ್ಗೊಂಡು ಎ.23ರ ತನಕ ಜರುಗಲಿದ್ದು, ಆ ಪ್ರಯುಕ್ತ ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು. ಈ ಸಂದರ್ಭ ದೇವಳದ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು. ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಎ.21ರ ಶನಿವಾರ ಶ್ರೀ ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ ಎ.22ರಂದು ಅವಭೃತ ಸ್ನಾನ, ಓಕುಳಿ ಮತ್ತು ನಗರೋತ್ಸವ ನಡೆಯಲಿದೆ.