ಶಿಕ್ಷಣ ವಂಚಿತ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಆರ್‌ಎಸ್‌ಎಸ್ ಉದ್ದೇಶ ಸಾಕಾರ
ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ದೂರದ ಮಣಿಪುರದಿಂದ ಬೈಂದೂರು ತಾಲೂಕಿನ ಗಂಟಿಹೊಳೆಗೆ ಬಂದು, ಕನ್ನಡ ಕಲಿತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 83.04 ಅಂಕ ಗಳಿಸುವ ಮೂಲಕ ಬಾಲಕನೊಬ್ಬ ಗಮನಸೆಳೆದಿದ್ದಾನೆ. ರಾಜ್ಯಕ್ಕೆ ಬಂದಾಗ ಕನ್ನಡದಲ್ಲಿ ವ್ಯವಹರಿಸಲು ಪರದಾಡುತ್ತಿದ್ದ ಈ ಬಾಲಕ ಕನ್ನಡ ಪರೀಕ್ಷೆಯಲ್ಲೇ 108 ಅಂಕ ಗಳಿಸಿದ್ದಾನೆ.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ರಾಜ್ಯದಲ್ಲೇ ಅಗ್ರ ಫಲಿತಾಂಶ ಪಡೆಯುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ ತೇರ್ಗಡೆ ಹೊಂದುವುದು ಅಚ್ಚರಿ ವಿಷಯವೇನಲ್ಲ. ಆದರೆ ಮಣಿಪುರ ವಿದ್ಯಾರ್ಥಿಯ ಸಾಧನೆ ಕಡಿಮೆ ಇಲ್ಲ.
ಮಣಿಪುರ ರಾಜ್ಯದ ಹೈರೋಕ್ ಎಂಬ ಪುಟ್ಟ ಹಳ್ಳಿಯಲ್ಲಿ ಬಡ ಕೃಷಿ ಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಕುಂದ್ರಕ್ಟಮ್ ಬಿದ್ಯಾಸುನ್ ಸಿಂಗ್ ಈ ಸಾದನೆ ಮಾಡಿದ ಬಾಲಕ. ಹತ್ತಾರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ವು ಈಶಾನ್ಯ ರಾಜ್ಯಗಳಲ್ಲಿ ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾದ ಸಾವಿರಾರು ವಿದ್ಯಾರ್ಥಿಗಳನ್ನು ಕರ್ನಾಟಕ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೆ ಕರೆ ತಂದು ಅವರಿಗೆ ಸೂಕ್ತ ಶಿಕ್ಷಣದ ವ್ಯವಸ್ಥೆ ಮಾಡಿಕೊಡುತ್ತಿದೆ. ಇದೇ ರೀತಿ ಆರ್‌ಎಸ್‌ಎಸ್ ಮೂಲಕ 5ನೇ ವಯಸ್ಸಿನಲ್ಲಿದ್ದಾಗ ಕರ್ನಾಟಕಕ್ಕೆ ಬಂದ ಬಿದ್ಯಾಸುನ್, ಬೈಂದೂರು ತಾಲೂಕಿನ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಗೆ ಸೇರಿದ. ಸಂಘದ ಸ್ಥಳೀಯ ಕಾರ್ಯಕರ್ತ ಗುರುರಾಜ್ ಗಂಟಿಹೊಳೆ ಅವರ ಮನೆಯಲ್ಲಿ ತನ್ನಂತೆಯೇ ಬಂದಿದ್ದ 17 ಮಂದಿ ಮಣಿಪುರಿ ವಿದ್ಯಾರ್ಥಿಗಳೊಂದಿಗೆ ಆಶ್ರಯ ಪಡೆದು ಶಿಕ್ಷಣ ಮುಂದುವರೆಸಿದ್ದಾನೆ.
ವ್ಯಾಸಂಗದಲ್ಲಿ ಆಸಕ್ತಿ ಹೊಂದಿದ್ದ ಬಿದ್ಯಾಸುನ್, ಆರಂಭದಲ್ಲಿ ಕನ್ನಡ ಭಾಷೆ ಬಾರದೇ ಸಾಕಷ್ಟು ಕಷ್ಟಪಟ್ಟ. ಆದರೆ, ಬಹುಬೇಗ ಕನ್ನಡ ಕಲಿತ. ಹಿಂದಿ ಮಾತನಾಡುತ್ತಿದ್ದ ಈತ ಇತರ ಮಣಿಪುರಿ ವಿದ್ಯಾರ್ಥಿಗಳಿಗೂ ಕನ್ನಡ ಕಲಿಸಿಕೊಟ್ಟ. ಇದನ್ನು ಗಮನಿಸಿದ ಆತನ ಶಾಲೆಯ ಶಿಕ್ಷಕರು, ಮಣಿಪುರ ವಿದ್ಯಾರ್ಥಿಗಳೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಬಿದ್ಯಾಸುನ್ಗೆ ಸೂಚಿಸಿದರು. ಇದರಿಂದಾಗಿ ಇತರ ಮಣಿಪುರಿ ವಿದ್ಯಾರ್ಥಿಗಳು ಕನ್ನಡ ಕಲಿಯಲು ಸುಲಭವಾಯಿತು.
ಕನ್ನಡ ಭಾಷೆಯನ್ನಷ್ಟೇ ಅಲ್ಲ. ಇಲ್ಲಿನ ಆಹಾರ, ಬಟ್ಟೆ, ಜೀವನಪದ್ಧತಿ, ಹವಾಮಾನ , ಸಂಸ್ಕ್ರತಿಗಳಿಗೆ ಈತ ಹೊಂದಿಸಿಕೊಂಡ. ಹೆತ್ತವರನ್ನು ಬಿಟ್ಟು ದೂರವಿರುವ ನೋವಿನ ನಡುವೆಯೂ, ಬಿದ್ಯಾಸುನ್ ಊರಿನ ನಾಟಕ, ಯಕ್ಷಗಾನ, ಹಬ್ಬ, ಜಾತ್ರೆ, ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಒಮ್ಮೆ ಅಯ್ಯಪ್ಪ ವ್ರತಧಾರಿಯಾಗಿ, ಶಬರಮಲೆಗೂ ಹೋಗಿ ಬಂದ. 10 ವರ್ಷ ಕರ್ನಾಟಕದಲ್ಲೇ ಕಳೆದ ಬಿದ್ಯಾಸುನ್, ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.83.04 ಅಂಕ ಗಳಿಸಿ ಸಾಧನೆ ಮಾಡಿದ್ದಾನೆ.
ಇಲ್ಲಿನಷ್ಟು ಒಳ್ಳೆಯ ಶಿಕ್ಷಣ ನಮ್ಮಲ್ಲಿಲ್ಲ- ಬಿದ್ಯಾಸುನ್
ಡಿಸ್ಟಿಂಕ್ಷನ್ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿದ್ಯಾಸುನ್ , ನಮ್ಮದು ಗುಡ್ಡಗಾಡು ಪ್ರದೇಶ. ಕೃಷಿಯೇ ಅಲ್ಲಿನ ಮುಖ್ಯ ಕಸುಬು. ಶಾಲೆಗಳಿಗೆ ಹೊಗಬೇಕಾದರೆ ನಗರಗಳಿಗೆ ಹೋಗಬೇಕು. ಆದರೂ , ಅಲ್ಲಿ ಇಲ್ಲಿನಷ್ಟು ಒಳ್ಳೆಯ ಶಾಲೆ, ಶಿಕ್ಷಕರು, ಗುಣಮಟ್ಟ ಇರುವುದಿಲ್ಲ. ಹಾಗಾಗಿ , ಆರ್ಎಸ್ಎಸ್ ಮೂಲಕ ಮಣಿಪುರ, ಮೇಘಾಲಯ, ಮಿಜೋರಾಂ, ಅಸ್ಸಾಂ, ತ್ರಿಪುರಗಳಿಂದ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಾರೆ. ತುಂಬಾ ಜನರು ಇಲ್ಲಿ ಕಲಿತು ಪುನಃ ಅಲ್ಲಿಗೆ ಹೋಗಿ ಒಳ್ಳೆಉ ಉದ್ಯೋಗಕ್ಕೆ ಸೇರಿದ್ದಾರೆ ಎಂದು ತಿಳಿಸಿದ್ದಾನೆ
ಈಶಾನ್ಯ ರಾಜ್ಯಗಳಲ್ಲಿ ಮತಾಂತರದ ಪಿಡುಗಿನ ಜೊತೆಗೆ ಪ್ರತ್ಯೇಕತಾವಾದವೂ ಬೆಳೆಯುತ್ತಿದೆ. ಇದರಿಂದಾಗಿ ಶಿಕ್ಷಣ ಇಲ್ಲದೇ ಯುವಕರು ಭಯೋತ್ಪಾದನಾ ಚಟುವಟಿಕೆಗಳಿಗೆ ಸೇರುತ್ತಿದ್ದಾರೆ. ಇದನ್ನು ತಪ್ಪಿಸಲು ಸಂಘವು ಅವರನ್ನು ಕರೆತಂದು ರಾಷ್ಟ್ರೀಯತೆ ಬಿತ್ತುವ ಕೆಲಸ ಮಾಡುತ್ತಿದೆ. ಬಿದ್ಯಾಸುನ್ನಂತೆ ಸಾವಿರಾರು ವಿದ್ಯಾರ್ಥಿಗಳು ಸಂಘದ ಉದ್ದೇಶ ಈಡೇರಿಸುತ್ತಿದ್ದಾರೆ.- ಗುರುರಾಜ್ ಗಂಟಿಹೊಳೆ ಆರ್‌ಎಸ್‌ಎಸ್ ಕಾರ್ಯಕರ್ತ