2004ರ ಬಳಿಕ ಕ್ಲಿಷ್ಟಕರ ಶಿಖರವೇರಿದ ಮೊದಲಿಗ
ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: 2016ರಲ್ಲಿ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರವೇರಿದ್ದ ಕುಂದಾಪುರದ ಆರ್ಡಿ ಮೂಲದವರಾದ ಹರ್ಷದ್ ರಾವ್ ಈ ವರ್ಷ ಭಾರತದ ಅತೀ ಎತ್ತರದ ಪರ್ವತವಾಗಿರುವ ಸಿಕ್ಕಿಂ ರಾಜ್ಯ ಹಾಗೂ ನೇಪಾಳ ದೇಶದ ಮಧ್ಯೆ ಬರುವ ಕಾಂಚನಜುಂಗಾವನ್ನು ಏರುವ ಮೂಲಕ ಭಾರತದ ಶ್ರೇಷ್ಠ ಪರ್ವತಾರೋಹಿತಗಳ ಯಾದಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಹರ್ಷ್‌ದ್ ರಾವ್ ಮೇ 20ರಂದು ಸುಮಾರು 28,169 ಅಡಿ ಎತ್ತರದ ಕಾಂಚನಜುಂಗಾ (ಕಾಂಚನಗಂಗಾ- ಕೆ-2) ಪರ್ವತವೇರುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ. 2014ರ ಅನಂತರ ಕಾಂಚನ ಜುಂಗಾ ಶಿಖರವೇರುತ್ತಿರುವವರ ಪೈಕಿ ಹರ್ಷದ್ ಮೊದಲಿಗರು. ಅಲ್ಲಿಯ ತನಕ ಕಾಂಚನಜುಂಗಾ ಶಿಖರವೇರಲು ಹಲವು ಮಂದಿ ಪ್ರಯತ್ನಪಟ್ಟರೂ ಕೂಡ ಯಾರೂ ಅದರಲ್ಲಿ ಸಫಲತೆ ಕಂಡಿರಲಿಲ್ಲ. 2016ರಲ್ಲಿಯೂ ಅನೇಕ ಮಂದಿ ಪರ್ವತಾವೇರಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.
ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ 29ರ ಹರೆಯದ ಹರ್ಷದ್ ರಾವ್, ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದು, ಆರ್ಡಿಯ ಕಮಲಾಕ್ಷ ರಾವ್ ಹಾಗೂ ಹೇಮಲತಾ ರಾವ್ ದಂಪತಿಯ ಪುತ್ರ.
ಪರ್ವತಾರೋಹಣದ ಅನುಭವವನ್ನು ಬಿಚ್ಚಿಟ್ಟ ಹರ್ಷದ್ ರಾವ್, ಪರ್ವತಾರೋಹಣದಲ್ಲಿ ಯಾವಾಗಲೂ ಸವಾಲು ಹವಾಮಾನ. ಮಂಜುಗಡ್ಡೆ ಯಾವಾಗ ಕರಗುತ್ತದೋ ಗೊತ್ತಾಗುವುದಿಲ್ಲ. ಎವರೆಸ್ಟ್ಗೆ ಏರಿದಾಗಲೂ ಆಕ್ಸಿಜನ್ ರೆಗ್ಯುಲೇಟರ್ ಕೈ ಕೊಟ್ಟಿತ್ತು. ಆದರೂ ಬೇರೆಯವರ ಸಹಾಯದಿಂದ ಶಿಖರವೇರಿದ್ದರು. ಕೆ-2 ನಲ್ಲೂ ಅದೇ ರೀತಿ ಆಕ್ಸಿಜನ್ ಸಮಸ್ಯೆ ಕಾಡಿತ್ತು. ಶಿಖರವೇರುವಾಗ 4 ಹಂತಗಳಿದ್ದು, ಅದರಲ್ಲಿ ಕೊನೆಯ ಸಮ್ಮಿಟ್ (ಮುಕ್ತಾಯ) ಎನ್ನುವ ಹಂತದಿಂದ ಕೆ-2ನ ತುತ್ತತುದಿಗೆ 1,200ಮೀ. ಎತ್ತರವಿದ್ದರೆ, ಅದೇ ಎವರೆಸ್ಟ್‌ನಲ್ಲಿ ಸುಮಾರು 300 ಮೀ. ಎತ್ತರದ ಕಡಿಮೆ ಇರುತ್ತದೆ. ಆ ಕಾರಣದಿಂದ ಕೆ-2 ಶಿಖರವೇರುವುದು ತ್ರಾಸದಾಯಕ ಎನ್ನುತ್ತಾರೆ.
ಹರ್ಷದ್ ರಾವ್ ಅವರು ವಿಶ್ವದ ಎರಡು ಶ್ರೇಷ್ಠ ಶಿಖರಗಳನ್ನು ಏರಿ, ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಕುಂದಾಪುರಕ್ಕೆ ಮಾತ್ರವಲ್ಲದೇ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿ.
ಇದನ್ನೂ ಓದಿ:
ಮೌಂಟ್ ಎವರೆಸ್ಟ್ ಏರಿದ ಕುಂದಾಪುರ ಮೂಲದ ಯುವಕ ಹರ್ಷದ್ ರಾವ್ – http://kundapraa.com/?p=15587