ಕುಂದಾಪುರ: ಇಲ್ಲಿನ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಮೃತಾ ಜಿ. ನಾಯ್ಕ್ ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸುವ(592) ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಕುಂದಾಪುರ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಜಿ.ಬಿ. ನಾಯ್ಕ್ ಹಾಗೂ ಗಾಯತ್ರಿ ನಾಯ್ಕ್ ದಂಪತಿಯ ಪುತ್ರಿಯಾಗಿರುವ ನಮೃತಾ ಮೂಲತಃ ಬೈಂದೂರಿನವರಾಗಿದ್ದು ಪ್ರಸ್ತುತ ಕುಂದಾಪುರ ಚಿಕನ್ ಸಾಲ್ ರಸ್ತೆಯಲ್ಲಿನ ನಿವಾಸದಲ್ಲಿ ತನ್ನ ಅಜ್ಜಿಯಯೊಂದಿಗೆ ವಾಸವಾಗಿದ್ದಾರೆ. ಈಕೆಯ ತಂದೆ ಗೋವಾದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ತಾಯಿಯೂ ಅವರೊಂದಿಗೆ ನೆಲೆಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವ ನಮೃತಾ, ತನ್ನ ತಂದೆ ತಾಯಿ ಮುಖ್ಯವಾಗಿ ಅಜ್ಜಿಯ ನಿರಂತರ ಪ್ರೋತ್ಸಾಹ ತನ್ನನ್ನು ಕಲಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿತ್ತು ಎಂದಿದ್ದಾರಲ್ಲದೇ, ಕುಂದಾಪುರ ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜಿನ ತನ್ನ ಶಿಕ್ಷಕರ ಸಹಕಾರದಿಂದಾಗಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
ಏರೋನಾಟಿಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡುವ ಬಯಕೆ ವ್ಯಕ್ತಪಡಿಸಿರುವ ನಮೃತಾ, ಸಿಇಟಿಯಲ್ಲಿಯೂ ಉತ್ತಮ ರ್ಯಾಂಕ್ ಗಳಿಸುವ ಭರವಸೆ ಹೊಂದಿದ್ದಾಳೆ. ಭಾಷಣ, ಡ್ರಾಯಿಂಗ್, ಟೇಬಲ್ ಟೆನ್ನಿಸ್ ಆಡುವುದು ಮುಂತಾದ ಹವ್ಯಾಸಗಳನ್ನು ಹೊಂದಿದ್ದರೂ ಅವುಗಳ ಜೊತೆಗೆ ಅಜ್ಜಿಯ ಮನೆಯಲ್ಲಿ ಹಾಗೂ ಕಾಲೇಜಿನಲ್ಲಿ ಕಲಿಕೆಗೆ ಪೂರಕ ವಾತಾವರಣ ದೊರೆತದ್ದು ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂದಿದ್ದಾಳೆ.
ಆರ್. ಎನ್. ಶೆಟ್ಟಿ ಕಾಲೇಜಿಗೆ: ಶೆ.98 ಫಲಿತಾಂಶ
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.98.18 ಫಲಿತಾಂಶ ಪಡೆದಿದ್ದು 276 ವಿದ್ಯಾರ್ಥಿಗಳ ಪೈಕಿ 271 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಮೃತಾ ಜಿ, ನಾಯ್ಕ್ 592 ಅಂಕ ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕುಂದಾಪುರ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ ಹಾಗೂ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ನವೀನಕುಮಾರ್ ಶೆಟ್ಟಿ ಪ್ರಶಂಸಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ- editor@kundapra.com
ಕುಂದಾಪುರ ತಾಲೂಕಿನ ಸಮಗ್ರ ಸುದ್ದಿ, ಮಾಹಿತಿಗಾಗಿ ನಿಮ್ಮ ‘ಕುಂದಾಪ್ರ ಡಾಟ್ ಕಾಂ’ ನೋಡಿ