ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಲೇಖನ
ತನ್ನ ಸ್ನೇಹಮಯಿ ವ್ಯಕ್ತಿತ್ವ ಹಾಗೂ ಹುರುಪಿನ ಮಾತುಗಾರಿಕೆಯ ಮೂಲಕ ಸಹಕಾರಿ, ಸಾಮಾಜಿಕ ಹಾಗೂ ಧಾರ್ಮಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಕವಿಹೃದಯಿ ನಾಯ್ಕನಕಟ್ಟೆಯ ಕೆ. ಪುಂಡಲೀಕ ನಾಯಕ್.
ವೃತ್ತಿ ಬದುಕಿನ ನಿವೃತ್ತಿಯ ತರುವಾಯ ಪುಂಡಲೀಕ ನಾಯಕ್ ಅವರ ಆಸಕ್ತಿ ಹೊರಳಿದ್ದು ಸಾಹಿತ್ಯ ಪ್ರಕಾರವೊಂದರೆಡೆಗೆ. ಮೊದಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಕವನ ರೂಪದಲ್ಲಿ ಅವರು ನೀಡುತ್ತಿದ್ದ ಪ್ರತಿಕ್ರಿಯೆಗಳೇ ಕ್ರಮೇಣ ಹವ್ಯಾಸವಾಗಿ, ಹನಿಗವಿತೆಗಳಾಗಿ, ಮುಂದೆ ಸಾಲು ಸಾಲು ಕವನವಾಗಿ ಈಗ ’ಕಿರುಗೆಜ್ಜೆ’ ಕವನ ಸಂಕಲನವೊಂದನ್ನು ಹೊರತರುವಲ್ಲಿಗೆ ಬಂದು ನಿಂತಿದೆ.
1972ರಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಚಿಕ್ಕ ರೈತರ ಅಭಿವೃದ್ಧಿ ಯೋಜನೆಯಡಿಯಲ್ಲಿ ನೇರ ನೇಮಕಾತಿ ಪಡೆದು ವೃತ್ತಿ ಬದುಕು ಆರಂಭಿಸಿದ್ದ ಪುಂಡಲೀಕ ನಾಯಕ್ ಅವರು ಮುವತ್ತೆಂಟುವರೆ ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಕೊನೆಯ ಮೂರು ವರ್ಷ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದ್ದರು.
ಆ ಬಳಿಕ ಮೂರು ವರ್ಷ ಗುರು ನಿತ್ಯಾನಂದ ಸೌಹಾರ್ದ ಸಹಕಾರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಎರಡು ವರ್ಷ ಗಂಗೊಳ್ಳಿ ಟೌನ್ ಸಹಕಾರಿಯ ಶಾಖಾ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ, ಧಾರ್ಮಿಕ ರಂಗದಲ್ಲಿಯೂ ಸಕ್ರೀಯರಾಗಿರುವ ಪುಂಡಲೀಕ ನಾಯಕ್ ಅವರು ನಿವೃತ್ತಿಯ ನಂತರದ ಬದುಕನ್ನು ಸಕ್ರಿಯವಾಗಿ ಕಳೆಯುತ್ತಿದ್ದಾರೆ. ಬೈಂದೂರು ಹಿರಿಯ ನಾಗರಿಕರ ವೇದಿಕೆ, ಸುವಿಚಾರ ಬಳಗ ಉಪ್ಪುಂದ ಮೊದಲಾದ ಸಂಸ್ಥೆಗಳ ಸದಸ್ಯರಾಗಿ, ನಾಯ್ಕನಕಟ್ಟೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷರಾಗಿ, ನಾಯ್ಕನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ.
ಹಳೆ ನಾಣ್ಯ, ನೋಟು ಸಂಗ್ರಹದ ಹವ್ಯಾಸ ಬೆಳೆಸಿಕೊಂಡಿದ್ದ ಅವರು ಇಂದಿಗೂ ಆ ಹವ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ೨೦೧೬ ಜನವರಿಯಿಮದ ಕವನ ಬರೆಯಲು ಆರಂಭಿಸಿದ್ದರು. ಫೇಸ್‌ಬುಕ್‌ನಲ್ಲಿ ಹನಿಗವಿ ದುಂಡಿರಾಜರ ಕವನಗಳಿಗೆ ಕವನ ರೂಪದಲ್ಲಿ ಉತ್ತರ ನೀಡುತ್ತಾ ಹೋಗಿದ್ದರು. ಆ ಮೂಲಕ ಕವನ ರಚನೆಯನ್ನು ನಿಧಾನಕ್ಕೆ ತೊಡಗಿಕೊಂಡರು.
ದೇಶಪಾಂಡೆ ಸಾಹಿತ್ಯ ಪ್ರತಿಷ್ಠಾನದಿಂದ ಸಹಕಾರಿ ರಂಗದ ಸೇವೆಗಾಗಿ ’ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿ’, ಹಾಗೂ ಸಾಹಿತ್ಯ ಸೇವೆಗಾಗಿ ’ಸಾಹಿತ್ಯ ಚೂಡಾಮಣಿ ರತ್ನ ಪ್ರಶಸ್ತಿ’ಯನ್ನು ಪಡೆದಿರುವ ಪುಂಡಲೀಕ ನಾಯಕ್ ಅವರು ಬೀದರ್, ರಾಣೆಬೆನ್ನೂರು, ಶಿಕಾರಿಪುರ, ಕುಂದಾಪುರ ಮೊದಲಾದೆಡೆ ಕವಿಗೋಷ್ಠಿ ಯಲ್ಲಿ ಭಾಗವಹಿಸಿದ್ದಾರೆ. ಕಿರು ಗೆಜ್ಜೆ ಅವರ ಚೊಚ್ಚಲ ಕವನ ಸಂಕಲನ.
► ಅ.21ಕ್ಕೆ ಪುಂಡಲೀಕ ನಾಯಕ್ ಅವರ ಕಿರು ಗೆಜ್ಜೆ ಕವನ ಸಂಕಲನ ಬಿಡುಗಡೆ – https://kundapraa.com/?p=30102 .