ಕುಂದಾಪ್ರ ಡಾಟ್ ಕಾಂ ಲೇಖನ
ಕುಂದಾಪುರ: ಕುಂದಗನ್ನಡ ಕಂಪನ್ನು ನಾಡಿನಾದ್ಯಂತ ಪಸರಿಸಿದ ಖ್ಯಾತ ಲೇಖಕಿ ವೈದೇಹಿ ಅವರ ಕೃತಿಯಾಧಾರಿತ “ಅಮ್ಮಚ್ಚಿಯೆಂಬ ನೆನಪು” ಕುಂದಗನ್ನಡದ ಸಿನೆಮಾ ನ.1ರಂದು ತೆರೆಗೆ ಬರುತ್ತಿದೆ.
ಚಂಪಾ. ಪಿ. ಶೆಟ್ಟಿ ನಿರ್ದೇಶನದಲ್ಲಿ ಸಂಪೂರ್ಣ ಕುಂದಾಪುರ ಕನ್ನಡದಲ್ಲೇ ಸಿನೆಮಾ ಮೂಡಿಬಂದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಸಿನೆಮಾದ ಸಂಭಾಷಣೆಯನ್ನು ವೈದೇಹಿಯವರೇ ಬರೆದಿದ್ದಾರೆ.
“ಒಂದು ಮೊಟ್ಟೆಯ ಕಥೆ” ಖ್ಯಾತಿಯ ರಾಜ್. ಪಿ. ಶೆಟ್ಟಿಯವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾವು ಮಾಡಿದ ಬೇರೆ ಸಿನೆಮಾಗಳ ಪಾತ್ರಗಳಿಗಿಂತ ಹೆಚ್ಚು ಆಪ್ತವಾಗುವ, ಅಭಿನಯಕ್ಕೆ ಪುಷ್ಟಿ ಕೊಡುವ ಪಾತ್ರವಾದ ವೆಂಕಪ್ಪಯ್ಯನ ಪಾತ್ರ ಎಂದು ಹೇಳಿದ್ದಾರೆ. ಇವರಲ್ಲದೇ ವೈಜಯಂತಿ ಅಡಿಗ, ದಿಯಾ ಪಲಕ್ಕಲ್, ದೀಪಿಕಾ ಆರಾದ್ಯ, ರಾಧಾಕೃಷ್ಣ ಉರಾಳ, ಗೀತಾ ಸುರತ್ಕಲ್, ವಿಶ್ವನಾಥ ಉರಾಳ, ಬಿ.ಜಿ. ರಾಮಕೃಷ್ಣ, ಚಂದ್ರಹಾಸ ಉಲ್ಲಾಳ, ಶೃಂಗೇರಿ ರಾಮಣ್ಣ, ಕುಂದಾಪ್ರ ಡಾಟ್ ಕಾಂ ಅಂಕಣಕಾರ ದಿಲೀಪ್ ಶೆಟ್ಟಿ ಮುಂತಾದ ಖ್ಯಾತನಾಮರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬಹುತೇಕ ರಂಗಭೂಮಿಯ ಕಲಾವಿದರು ಹಾಗೂ ತಂತ್ರಜ್ನರೆ ಈ ಸಿನೆಮಾದಲ್ಲಿ ತೊಡಗಿದ್ದು, ಖ್ಯಾತ ಹಿಂದೂಸ್ಥಾನಿ ಗುರುಗಳಾದ ಪಂಡಿತ್ ಕಾಶಿನಾಥ ಪತ್ತಾರ್ ರವರು ಈ ಚಿತ್ರಕ್ಕೆ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಂಪಾ ಪಿ. ಶೆಟ್ಟಿ ಈಗಾಗಲೇ ಇದೇ ಕಥಾ ಹಂದರವನ್ನು ಇಟ್ಟುಕೊಂಡು “ಅಕ್ಕು” ಎನ್ನುವ ನಾಟಕವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದರು. ಇದೀಗ ಮೊದಲ ಬಾರಿಗೆ ಸಿನೆಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮಫ್ತಿ ಸಿನೆಮಾ ಖ್ಯಾತಿಯ ನವೀನ್ ಕುಮಾರ್ ಈ ಚಿತ್ರಕ್ಕೆ ಕ್ಯಾಮರಾ ಕೈಚಳಕದ ಮೋಡಿ ಮಾಡಿದ್ದಾರೆ. ಎಡಿಟಿಂಗ್ ಹೊಣೆ ಹರೀಶ್ ಕೊಮ್ಮೆಯವರದ್ದು. ಚಿತ್ರ ನಿರ್ಮಾಣದ ಜವಾಬ್ದಾರಿ ಏಪ್ರಾನ್ ಪ್ರೊಡಕ್ಷನ್ ಜೊತೆಗೆ ಪ್ರಕಾಶ್ ಪಿ. ಶೆಟ್ಟಿ, ಗೀತಾ ಸುರತ್ಕಲ್, ವಂದನಾ ಇನಾಂದಾರ, ಶ್ರೀಮತಿ ಗೌರಮ್ಮ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ಕೈ ಜೋಡಿಸಿದೆ.