ಚುನಾವಣಾ ಬಹಿಷ್ಕಾರ ಮುಂದಾದ ಜನ. ಮನವೊಲಿಸಿದ ಪೌರಾಡಳಿತ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ನಾಲ್ಕೈದು ಕುಟುಂಬಗಳು ಕಳೆದ ಕೆಲವಾರು ವರ್ಷದಿಂದ ತ್ಯಾಜ್ಯದ ಕೊಂಪೆ, ವಿಪರೀತ ವಾಸನೆಯಿಂದ ಬಾಯಿಗೆ ತುತ್ತು ಇಡೋದಕ್ಕೆ ಆಗದ ಸ್ಥಿತಿಯಲ್ಲಿ ಬದುಕುತ್ತಿತ್ತು. ಮನೆಯ ಪಕ್ಕದ ರಜಾಕಾಲುವೆ ಮೇಲೊಂದು ಸ್ಲ್ಯಾಬ್ ಹಾಕಿಸಿ, ಮನೆಯ ಮುಂದೆ ನಿಲ್ಲುವ ಕೊಳಚೆ ನೀರಿಗೆ ಶಾಶ್ವತ ಪರಿಹಾರ ನೀಡಿ ಎಂಬ ಅಹವಾಲಿಗೆ ಕ್ಯಾರೆ ಎನ್ನದ ಆಡಳಿತದ ವಿರುದ್ಧ ಆಕ್ರೋಶಗೊಂಡ ಕುಟುಂಬಗಳು ತಮ್ಮ ಬೇಡಿಕೆಗೆ ಆಗ್ರಹಿಸಿ ಚುನವಾಣೆ ಬಹಿಷ್ಕಾರಕ್ಕೆ ಮುಂದಾದ ಘಟನೆ ನಡೆದಿದೆ. ಕೊನೆಗೂ ಕುಂದಾಪುರ ಪುರಸಭೆಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸದ್ಯದ ಮಟ್ಟಿಗೆ ಸುಖಾಂತ್ಯ ಕಂಡಿದೆ.
ಕುಂದಾಪುರ ಮದ್ದುಗುಡ್ಡೆ ನಾಲ್ಕೇ ವಾರ್ಡ್‌ನಲ್ಲಿ ಐದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬ ಒಂದಕ್ಕೊಂದು ತಾಗಿಕೊಂಡು ಮನೆಗಳಿವೆ. ಜೊತೆಗೆ ಒಂದು ದೈವಸ್ಥಾನವಿದೆ. ಇದರ ಹಿಂಭಾಗವೇ ರಾಜ ಕಾಲುವೆ ಹಾದು ಹೋಗಿದೆ. ಈ ಕಾಲುವೆಯಲ್ಲಿ ತ್ಯಾಜ್ಯಗಳು ನಿಂತು ಗಬ್ಬುವಾಸನೆ ಬೀರುತ್ತಿದೆ. ಸಾಕಷ್ಟು ವರ್ಷಗಳಿಂದ ಈ ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ ಈ ಕುಟುಂಬಗಳ ಬದುಕುತ್ತಿತ್ತು.
ಕಾಲುವೆಯಲ್ಲಿ ಸತ್ತ ಪ್ರಾಣಿಗಳ ಕಳೇಬರ, ಮಾನವ ತ್ಯಾಜ್ಯಗಳು, ಕೊಳಚೆ ನೀರು ನಿಂತು ವಾಸನೆ ಬೀರುತ್ತಿದೆ. ಕೊಳಚೆ ನೀರಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿದ್ದರಿಂದ ಪರಿಸರದೆಲ್ಲೆಡ್ಡ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ವಾಸನೆಯಿಂದ ಮನೆಯಲ್ಲಿ ಕೂತು ಊಟ ಮಾಡಲು ಅಸಹ್ಯ ಪಡುತ್ತಿದ್ದಾರೆ ಎಂದು ಸ್ಥಳಿಯರು ಅಳಲು ತೋಡಿಕೊಂಡರು.
ಚುನಾವಣಾ ಬಹಿಷ್ಕಾರದ ಬ್ಯಾನರ್:
ರಾಜಕಾಲುವೆಯಲ್ಲಿ ನಡೆಯುತ್ತಿರುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಕುಟುಂಬಗಳು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದು, ಕಾಲುವೆಯ ಮೇಲ್ಬಾಗಕ್ಕೆ ಸ್ಲ್ಯಾಬ್ ಅಳವಡಿಸಿ ಎಂದು ದಲಿತರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
ಮುಖ್ಯಾಧಿಕಾರಿ ಭೇಟಿ:
ಶುಕ್ರವಾರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಪುರಸಭೆಯ ಇಂಜಿನಿಯರ್ ನಯನತಾರಾ ಸ್ಥಳಕ್ಕೆ ತೆರಳಿ ದಲಿತರ ಮನವೊಲಿಸಿಸಲು ಯಶಸ್ವಿಯಾಗಿದ್ದರಿಂದ ದಲಿತರು ಚನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ತೆರವುಗೊಳಿಸಿದ್ದಾರೆ. ನಿಂತ ನೀರು ಸರಾಗವಾಗಿ ಹೋಗುವಂತೆ ಹಾಗೂ ರಾಜಕಾಲುವೆ ಮೇಲೆ ಸ್ಲ್ಯಾಬ್ ಅಳವಿಡಿಸುವ ಬಗ್ಗೆ ಚುನಾವಣೆ ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಬಳಿಕ ಕಾಮಗಾರಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜೆಸಿಬಿ ಸಹಾಯದಿಂದ ಕೂಡಲೇ ಕೊಳಚೆ ತೆರವುಗೊಳಿಸಿಲು ಸೂಚನೆ ನೀಡಿದ್ದಾರೆ.
ಆಗಿದ್ದೇನಲ್ಲಿ?
ದುರ್ನಾತ ಬೀರುತ್ತಿರುವ ಸಾರ್ವಜನಿಕ ಕಾಲುವೆ ಮುಚ್ಚಲು ಇಲ್ಲಿನ ದಲಿತರು ಕಳೆದ ಕೆಲ ವರ್ಷಗಳಿಂದ ಹೋರಾಟ ಮಾಡುತ್ತಲೇ ಸಂಬಂಧಪಟ್ಟ ಅಧಿಕಾರ ಗಮನ ಸೆಳೆದಿದ್ದಾರೆ. ಇದೀಗ ಈ ಕಾಲುವೆಗೆ ತಡೆಗೋಡೆ ನಿರ್ಮಿಸಲು ಪುರಸಭೆ ಮುಂದಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಿದೆ. ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ರಾಜಕಾಲುವೆ ಹಾಗೂ ನದಿ ಸಂಪರ್ಕ ಕಡಿತಗೊಳಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ. ಇದೀಗ ಮೊದಲ ಹಂತದ ಕಾಮಗಾರಿ ಮುಗಿದು ಮೂರು ದಿನ ಕಳೆದಿದ್ದು, ನದಿ ನೀರು ರಾಜಕಾಲುವೆ ಸೇರದ ಹಾಗೆ ನಿರ್ಮಿಸಿದ ತಾತ್ಕಾಲಿಕ ತಡೆಗೋಡೆ ತೆರವುಗೊಳಿಸಲಾಗಿದೆ. ನೀರು ಸರಾಗ ಬಂದು ಹೋಗಲು ಅವಕಾಶ ಮಾಡಿದ್ದರಿಂದ ನೀರಿನ ಇಳಿತ ಹಾಗೂ ಭರತ ಕಾಲದಲ್ಲಿ ಕಾಲುವೆ ಸ್ವಚ್ಛವಾಗಲಿದೆ.
ಕಾರ್ಯನಿತರ ಪತ್ರಕರ್ತರ ಸಂಘದ ಪದಾಧಿಕಾರಿಗಳು ಭೇಟಿ:
ಮದ್ದುಗುಡ್ಡೆ ದಲಿತ ಕೇರಿಗೆ ಶುಕ್ರವಾರ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನಿಯೋಗ ಭೇಟಿ ನೀಡಿದೆ. ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಪುರಸಭಾ ಮುಖ್ಯಾಧಿಕಾರಿಯವರೊಂದಿಗೆ ಸಮಾಲೋಚನೆ ನಡೆಸಿ ಕೊಳಚೆ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿದ್ದಾರೆ.