ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹ ಎದುರಾಗಿದ್ದರೂ ಈವರೆಗೆ ಕೇಂದ್ರದಿಂದ ಸೂಕ್ತ ಪರಿಹಾರ ದೊರೆತಿಲ್ಲ. ಅರ್ಧ ದೇಶವೇ ನೀರಿನಲ್ಲಿ ಮುಳುಗಿದ್ದರೂ ಇಂದಿನ ಪ್ರಧಾನಿಯವರು ವಿದೇಶ ಪ್ರವಾಸದ ಮೂಡಿನಲ್ಲಿರುವುದು ಖೇದಕರ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಬುಧವಾರ ಉಡುಪಿ ಜಿಲ್ಲೆಯಲ್ಲಾದ ಆಸ್ತಿ ಪಾಸ್ತಿ ನಷ್ಟದ ಸಮೀಕ್ಷೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ರಚಿಸಿದ ನಿಯೋಗದ ನೇತೃತ್ವ ವಹಿಸಿ ಕುಂದಾಪುರ ಹಾಗೂ ಬೈಂದೂರಿನಲ್ಲಿ ನೆರೆ ನಷ್ಟದ ಬಗೆಗೆ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದರು.
ಈ ಹಿಂದೆಯೂ ಕೆಂದ್ರದಲ್ಲಿ ಯುಪಿಎ ಸರಕಾರವಿದ್ದಾಗ, ರಾಜ್ಯದಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಎದುರಾದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆ ನಡೆಸಿ ಸ್ಥಳದಲ್ಲಿಯೇ ರಾಜ್ಯಕ್ಕೆ ಪರಿಹಾರ ಘೋಷಿಸಿದ್ದರು. ಇಂದಿನ ಪ್ರಧಾನಿಗೆ ವೈಮಾನಿಕ ಸಮೀಕ್ಷೆ ನಡೆಸಲು ಸಮಯವಿಲ್ಲ ಎಂದರು.
ಕರಾವಳಿಯ ಉಭಯ ಜಿಲ್ಲೆಯಳಲ್ಲಿಯೂ ಅಪಾರವಾದ ಮಳೆ ಹಾನಿಯಾಗಿದ್ದು, ಜಿಲ್ಲೆಯ ಬೈಂದೂರಿನಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಹಾಗಾಗಿ ಉಭಯ ಜಿಲ್ಲೆಗಳಿಗೂ ಕೊಡಗು ಮಾದರಿಯಲ್ಲಿ ಪ್ರತ್ಯೇಕ ಪ್ಯಾಕೇಜ್ ನೀಡುವಂತೆ ಪ್ರದೇಶ ಕಾಂಗ್ರಸ್ ಸಮಿತಿಯ ಮೂಲಕ ಬೇಡಿಕೆ ಇಡಲಾಗುವುದು ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ಜಿಲ್ಲೆಯ ಮನೆ, ಕೃಷಿಭೂಮಿಗಳಿಗೆ ಅಪಾರ ಹಾನಿಯಾಗಿದ್ದು, ಸರಕಾರದಿಂದ ಹೆಚ್ಚಿನ ಅನುದಾನದ ಅಗತ್ಯವಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಾದ ನಷ್ಟದ ಬಗ್ಗೆ ಕಾಂಗ್ರೆಸ್ ನಿಖರ ಮಾಹಿತಿಯನ್ನು ಸಂಗ್ರಹಿಸಿ ಸರಕಾರದ ಮುಂದಿಡುವುದಲ್ಲದೇ ಸರಿಯಾದ ಪರಿಹಾರ ದೊರಕದಿದ್ದರೆ ಹೋರಾಟಕ್ಕೂ ಮುಂದಾಗಲಿದ್ದೇವೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಮುಖಂಡರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ, ವಾಸುದೇವ ಯಡಿಯಾಳ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮೊದಲಾದವರು ಇದ್ದರು.
ಕಾಂಗ್ರೆಸ್ ನಿಯೋಗ ಬೈಂದೂರು ಸಭೆಗೂ ಮುನ್ನ ಮರವಂತೆ ಸಾಲ್ಬುಡದ ನೆರೆಯಿಂದಾಗಿ ಹಾನಿಯಾಗಿರುವ ಕೃಷಿ ಭೂಮಿಯನ್ನು ವೀಕ್ಷಿಸಿ ಜನರ ಸಮಸ್ಯೆ ಆಲಿಸಿದರು.