ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಯೋಗಭ್ಯಾಸದಿಂದ ಆರೋಗ್ಯ ವೃದ್ಧಿಸುವುದಲ್ಲದೇ ಮನಸ್ಸು ಉಲ್ಲಾಸಗೊಳ್ಳುತ್ತದೆ. ಆಧುನಿಕ ಜಗತ್ತಿನ ವೇಗದ ಬದುಕಿನಲ್ಲಿ ದೈಹಿಕ ಮಾನಸಿಕ ಸಮತೋಲಕ ಕಾಯ್ದುಕೊಳ್ಳಲು ನಿರಂತವಾಗಿ ಯೋಗಾಸನ ಮಾಡುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗ ಬಗೆಗೆ ಆಸಕ್ತಿ ಮೂಡಿಸಲು ಸ್ವರ್ಧೆ ಆಯೋಜಿಸಿರುವುದು ಶ್ಲಾಘನಾರ್ಹ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ರಮೇಶ್ ಗಾಣಿಗ ಹೇಳಿದರು.
ಅವರು ಕೊಲ್ಲೂರು ಶ್ರೀ ಮುಕಾಂಬಿಕಾ ಸಭಾಭವನದಲ್ಲಿ ಬುಧವಾರ ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜು ಕೊಲ್ಲೂರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಯೋಗಾಸನ ಸ್ವರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಮಾಡುವ ಕೆಲಸವನ್ನು ಕೌಲಶ್ಯಯುತವಾಗಿ ಮಾಡಿದರೆ ಅದೇ ಯೋಗವೆಂದೆನಿಸಿಕೊಳ್ಳಲಿದೆ. ಯೋಗವು ಬದುಕಿನಲ್ಲಿ ದೈಹಿಕವಾಗಿ, ಭೌತಿಕವಾಗಿ ಹಾಗೂ ಮಾನಸಿಕವಾಗಿ ಸಮತ್ವವನ್ನು ಕಾಯ್ದುಕೊಳ್ಳಲು ಸಹಕಾರಿ. ವಿದ್ಯಾರ್ಥಿಗಳಲ್ಲಿ ನಿಯಮಿತ ಯೋಗಾಭ್ಯಾಸದಿಂದ ಮನಸ್ಸಿನ ಚಂಚಲತೆ ದೂರವಾಗಿ ಏಕಾಗ್ರತೆ ಮೂಡಲು ಸಾಧ್ಯವಿದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ ಭಿಡೆ, ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ಕುಮಾರ್, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ವಸಂತ ಶೆಟ್ಟಿ, ಬೈಂದೂರು ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜೀವ ಶೆಟ್ಟಿ, ಬೈಂದೂರು ವಲಯ ಕ್ರೀಡಾ ಸಂಯೋಜಕ ಜೀವನ್ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶಾಜಿ ಮೊದಲಾದವರು ವೇದಿಕೆಯಲ್ಲಿದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಅರುಣಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸಂಜೀವ ಎಂ. ಆಸನಗಳ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಹೆಚ್. ಸುಕೇಶಕುಮಾರ್ ಶೆಟ್ಟಿ ಧನ್ಯವಾದಗೈದರು. ಉಪನ್ಯಾಸಕ ನಾಗರಾಜ ಅಡಿಗ ಕಾರ್ಯಕ್ರಮ ನಿರೂಪಿಸಿದರು.