ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೂಡಬಿದಿರೆಯ ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕ ಡಾ. ಎಂ. ಮೋಹನ ಆಳ್ವ ಅವರನ್ನು ಪ್ರಸಕ್ತ ಸಾಲಿನ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಹಾಗೂ ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಹೇಳಿದರು. ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು.
ಅ.26ರ ಸಂಜೆ 3:30ಕ್ಕೆ ಇಲ್ಲಿನ ಕೊಲ್ಲೂರು ರಸ್ತೆಯಲ್ಲಿರುವ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ. ಜಗನ್ನಾಥ ಶೆಟ್ಟಿ ಸಭಾಭವನದಲ್ಲಿ ನಡೆಯುವ ಮಂಜಯ್ಯ ಶೆಟ್ಟಿ 106ನೆ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ಗಣ್ಯರನೇಕರು ಉಪಸ್ಥಿತರಿರುವರು. ಇದೇ ಸಮಾರಂಭದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ ಶೆಟ್ಟಿ ಅವರನ್ನು ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಪ್ರಶಸ್ತಿಯ ಕುರಿತು ಮಾತನಾಡಿದ ಜಗನ್ನಾಥ ಶೆಟ್ಟಿ ಯಡ್ತರೆ ಮಂಜಯ್ಯ ಶೆಟ್ಟಿ ಕರಾವಳಿಯ ಪ್ರಸಿದ್ಧ ಯಡ್ತರೆ ಮನೆತನದವರು. ಕುಂದಾಪುರದಲ್ಲಿ ವಕೀಲರಾಗಿದ್ದರು. ಕುಂದಾಪುರ-ಬೈಂದೂರು ಕ್ಷೇತ್ರದಿಂದ ಒಮ್ಮೆ ಮದ್ರಾಸು ವಿಧಾನಸಭೆಗೆ ಮತ್ತು ಎರಡು ಬಾರಿ ಮೈಸೂರು ವಿಧಾನಸಭೆಗೆ ಸತತವಾಗಿ ಆಯ್ಕೆಯಾಗಿದ್ದರು. ಸಹಕಾರಿ ರಂಗದಲ್ಲೂ ಸೇವೆ ಸಲ್ಲಿಸಿದ್ದ ಅವರು ನಾಲ್ಕು ದಶಕದುದ್ದಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ದುಡಿದಿದ್ದರು. ಶಾಸಕರಾಗಿ ಕ್ಷೇತ್ರದ ಶಿಕ್ಷಣ, ಆರೋಗ್ಯ ಹಾಗೂ ಸಂಪರ್ಕ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರ್ಶ ರಾಜಕಾರಣಿಯಾಗಿದ್ದ ಅವರನ್ನು ಜನರು ಅಜಾತ ಶತ್ರು ಎಂದು ಗುರುತಿಸಿದ್ದರು. ಅವರ ಹೆಸರಿನಲ್ಲಿರುವ ಟ್ರಸ್ಟ್ ಐದು ವರ್ಷಗಳಿಂದ ವಿಶೇಷ ಸಾಧಕರಿಗೆ ಅವರ ಸ್ಮಾರಕ ಪ್ರಶಸ್ತಿ ನೀಡುತ್ತ ಬಂದಿದೆ ಎಂದರು. ಇದೇ ವೇಳೆ ಸಮಾರಂಭದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಉಭಯ ಸಂಸ್ಥೆಗಳ ಪದಾಧಿಕಾರಿಗಳಾದ ಎಚ್. ವಸಂತ ಹೆಗ್ಡೆ, ವಾಜುರಾಜ ಶೆಟ್ಟಿ, ಯು. ಗೋಪಾಲ ಶೆಟ್ಟಿ, ಎನ್. ಕರುಣಾಕರ ಶೆಟ್ಟಿ, ಎನ್. ದಿವಾಕರ ಶೆಟ್ಟಿ ಇದ್ದರು.