ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೈಂದೂರು ತಾಲ್ಲೂಕು ಭಾರತ ಸೇವಾ ದಳದ ಆಶ್ರಯದಲ್ಲಿ ಇಲ್ಲಿನ ಗಾಧಿ ಮೈದಾನದಲ್ಲಿ ಸೋಮವಾರ ಭಾರತ ಸೇವಾದಳದ ರಾಷ್ಟ್ರೀಯ ಭಾವೈಕ್ಯತಾ ಮೇಳ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಭಾವೈಕ್ಯತೆ ಮೂಡಿಸುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಭಾವೈಕ್ಯತಾ ಮೇಳದಲ್ಲಿ ಭಾಗವಹಿಸುವ ಮಕ್ಕಳಲ್ಲಿ ದೇಶಭಕ್ತಿ, ದೇಶದ ಎಲ್ಲರೂ ಒಂದೇ ಎಂಬ ಭಾವನೆ ಮೂಡುವಂತಾದರೆ ಕಾರ್ಯಕ್ರಮ ಸಾರ್ಥಕವೆನಿಸುತ್ತದೆ. ಮೇಳದ ಜತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಸೇವಾದಳದ ಧ್ಯೇಯವನ್ನು ರೂಢಿಸಿಕೊಳ್ಳಲಾಗುವ ತರಬೇತಿ ನೀಡಬೇಕು ಎಂದು ಹೇಳಿದರು.
ಮಕ್ಕಳ ಭವಷ್ಯ ರೂಪಿಸುವ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಶಾಲೆಗಳಿಗೆ ಸರ್ಕಾರದಿಂದ ಅನುದಾನ ಇಲ್ಲದಿರುವುದು ಸರಿಯಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದ ಅವರು ಶೀಘ್ರದಲ್ಲಿ ಬೈಂದೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.
ತಾಲ್ಲೂಕು ಸೇವಾದಳದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಉಬ್ಜೇರಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಯ್ಯ ಶೆಟ್ಟಿ ಹುಂಚನಿ ವಂದಿಸಿದರು. ಗಣಪತಿ ಹೋಬಳಿದಾರ್ ನಿರೂಪಿಸಿದರು. ಜಿಲ್ಲಾ ಸೇವಾದಳ ಅಧ್ಯಕ್ಷ ಯು. ಆರ್. ಸಭಾಪತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುರೇಶ ಬಟವಾಡಿ, ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಜಾತಾ ದೇವಾಡಿಗ, ಜಗದೀಶ ದೇವಾಡಿಗ, ಗ್ರೀಷ್ಮಾ ಬಿಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಬೈಂದೂರು, ಉಡುಪಿ ತಾಲ್ಲೂಕು ಸೇವಾದಳ ಅಧ್ಯಕ್ಷರಾದ ಸುಬ್ರಹ್ಮಣ್ಯ ಬಾಸ್ರಿ ಇದ್ದರು.
ಎಲ್ಲರಿಗೆ ಊಟ, ಉಪಾಹಾರ ಒದಗಿಸಿದ ಹೋಟೆಲ್ ಉದ್ಯಮಿ ಗೋವಿಂದ ಬಾಬು ಪೂಜಾರಿ, ಕಾರ್ಯಕ್ರಮದ ಪ್ರಧಾನ ಪೋಷಕರಾದ ಕಂಚಿಕಾನ್ ರವೀಂದ್ರ ಕಿಣಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ಮರವಂತೆ ಶ್ರೀಧರ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬಾಬು ಪೂಜಾರಿ ಯಳಜಿತ, ಉಪ್ಪುಂದ ಮೂಕಾಂಬಿಕಾ ವಿವಿಧೋದ್ದೇಶ ಸಹಕಾರಿ ಸಂಘ, ದೀಪಕ್‌ಕುಮಾರ ಶೆಟ್ಟಿ, ರೋಟರಿ ಅಧ್ಯಕ್ಷ ಯು.ಪ್ರಕಾಶ ಭಟ್, ಪ್ರಿಯದರ್ಶಿನಿ ದೇವಾಡಿಗ, ಶ್ರೀನಿವಾಸ ಉಬ್ಜೇರಿ, ರಾಜೀವ ಶೆಟ್ಟಿ ಬಗ್ವಾಡಿ, ಎಚ್. ಕೃಷ್ಣಪ್ಪ ಶೆಟ್ಟಿ, ರವೀಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಉದ್ಘಾಟನಾಪೂರ್ವದಲ್ಲಿ ಯಡ್ತರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಾಂಬು ದೇವಾಡಿಗ ರಾಷ್ಟ್ರಧ್ವಜಾರೋಹಣಗೈದರು. ಜಿಲ್ಲಾ ಸಂಘಟಕ ಪಕೀರ ಗೌಡ ನಾ ಹಳಮನಿ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ, ಅತಿಥಿಗಳಿಗೆ ಗೌರವ ರಕ್ಷೆ ನಡೆಯಿತು. ಉದ್ಘಾಟನೆಯ ಬಳಿಕ 110 ಶಾಲೆಗಳಿಂದ ಬಂದಿದ್ದ ಸುಮಾರು 750 ಭಾರತ ಸೇವಾ ದಳದ ವಿದ್ಯಾರ್ಥಿ ಸದಸ್ಯರು ನಡೆಸಿದ ಪುರ ಮೆರವಣಿಗೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್ ಉದ್ಘಾಟಿಸಿದರು.