ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಸ್ವಿಟ್ಸರ್ಲಂಡ್‌ನ ದಾವೋಸ್‌ನಲ್ಲಿ 21ರಿಂದ 24ರ ವರೆಗೆ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ೫೦ನೆ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ರಾಜ್ಯದ ತಂಡಕ್ಕೆ ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಮೂಲದ ಅಪರ್ಣಾ ಮಾರ್ಗದರ್ಶಿ ಹುದ್ದೆ ನಿರ್ವಹಿಸುತ್ತಿದ್ದಾರೆ. ಆಕೆ ಕಿರಿಮಂಜೇಶ್ವರ ರಥಬೀದಿಯಲ್ಲಿರುವ ಶ್ಯಾನುಭಾಗ್ ಕುಟುಂಬದ ’ನಮ್ಮನೆ’ಯ ಸುಧಾಕರ ಶ್ಯಾನುಭಾಗ್ ಅವರ ಪುತ್ರಿ.
ಮುಂಬೈಯಲ್ಲಿ ಜನಿಸಿ ತಂದೆಯೊಂದಿಗೆ ಅಲ್ಲಿಯೇ ವಾಸವಾಗಿರುವ ಅಪರ್ಣಾ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಗಳಿಸಿರುವರು. ಭಾರತ ಮತ್ತು ದಕ್ಷಿಣ ಏಷ್ಯಾ ಸಮುದಾಯ ಕುರಿತು ಪರಿಣತರಾಗಿರುವ ಅವರು ಮುಂಬಯಿಯ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡು ವರ್ಷಗಳ ಅವಧಿಗೆ ವಿಶ್ವ ಆರ್ಥಿಕ ಒಕ್ಕೂಟದ ಜತೆ ಕೆಲಸ ಮಾಡಲು ನಿಯುಕ್ತರಾಗಿ, ೪ ತಿಂಗಳಿನಿಂದ ಅದರ ಜಿನೇವಾ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸುಧಾಕರ ಶ್ಯಾನುಭಾಗ್ ವಿವಿಧೆಡೆ ಉದ್ಯೋಗ ನಡೆಸಿ, ನಿವೃತ್ತಿಯ ಬಳಿಕ ಮುಂಬೈಯಲ್ಲಿ ನೆಲೆಸಿದ್ದಾರೆ. ಅಪರ್ಣಾ ಅವರ ಪತಿ ಸಾಫ್ಟ್‌ವೇರ್ ಎಂಜಿನಿಯರ್. ಈ ಎಲ್ಲ ಮಾಹಿತಿ ನೀಡಿರುವ ಸುಧಾಕರ ಶ್ಯಾನುಭಾಗ್ ಅವರ ಸಹೋದರೂ ’ನಮ್ಮನೆ’ಯ ವಾಸಿಗಳೂ ಆಗಿರುವ ಕೆ. ಸದಾಶಿವ ಶ್ಯಾನುಭಾಗ್ ಮತ್ತು ಕೆ. ಬಾಲಕೃಷ್ಣ ಶ್ಯಾನುಭಾಗ್ ತಮ್ಮ ಕುಟುಂಬದ ಕುಡಿ ಅಪರ್ಣಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾದ ಆಕೆಯ ಶಿಕ್ಷಣ, ಪರಿಣತಿ ಮತ್ತು ಸಾಧನೆ ತಮಗೆಲ್ಲ ಹೆಮ್ಮೆಯ ವಿಚಾರ ಎಂದಿದ್ದಾರೆ.