ಮುಂಬೈ: ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂಬ ಹಿನ್ನೆಲೆಯಲ್ಲಿ ನಾಗಪುರ್ ಕ್ಕೆ ತೆರಳಲು ನಿರಾಕರಿಸಿದ ಎನ್ ಕೌಂಟರ್ ಸ್ಪೆಶಲಿಸ್ಟ್ ಎಂದೇ ಹೆಸರು ಗಳಿಸಿದ್ದ ಮುಂಬೈ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಕನ್ನಡಿಗ ದಯಾ ನಾಯಕ್ ಅವರನ್ನು ಮಹಾರಾಷ್ಟ್ರ ಸರ್ಕಾರ ಪೊಲೀಸ್ ಸೇವೆಯಿಂದ ಅಮಾನತು ಮಾಡಿದೆ.
ನನ್ನ ಕುಟುಂಬಕ್ಕೆ ಮೊದಲ ಆದ್ಯತೆ ಹಾಗಾಗಿ ನಾನು ನಾಗ್ಪುರಕ್ಕೆ ತೆರಳಲ್ಲ ಎಂದು ದಯಾ ಪ್ರತಿಭಟಿಸಿದ್ದರು. ಹಾಗಾಗಿಯೇ ಗುರುವಾರ ದಯಾ ನಾಯಕ್ ಅವರಿಗೆ ಅಮಾನತು ಮಾಡಿರುವ ಆದೇಶ ಬಂದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ದಯಾ ನಾಯಕ್ ಅವರನ್ನು ಕಳೆದ ವರ್ಷ ನಾಗ್ಪುರಕ್ಕೆ ವರ್ಗಾಯಿಸಲಾಗಿತ್ತು. ಆದರೆ ತನ್ನ ಹಾಗೂ ತನ್ನ ಹೆಂಡತಿ, ಮಕ್ಕಳಿಗೆ ಜೀವ ಬೆದರಿಕೆ ಇದ್ದು, ತಾವು ನಾಗ್ಪುರದಲ್ಲಿ ಕರ್ತವ್ಯ ನಿರ್ವಹಿಸಲಾರೆ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯ ಡಿಜಿಪಿ ಗಮನಕ್ಕೆ ತಂದಿದ್ದರು. ಆದರೆ ಅವರನ್ನು ಯಾವ ಕಾರಣದ ಮೇಲೆ ಅಮಾನತು ಮಾಡಲಾಗಿದೆ ಎಂಬ ಬಗ್ಗೆ ವಿವರ ನೀಡಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿರಾಕರಿಸಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಮಹಾರಾಷ್ಟ್ರ ಸರ್ಕಾರ, ಹಿರಿಯ ಪೊಲೀಸ್ ಅಧಿಕಾರಿಗಳು ದಯಾ ನಾಯಕ್ ಅವರನ್ನು ಅಮಾನತಿನಲ್ಲಿಡಲು ಮುಂದಾಗಿದೆ. ದಯಾ ನಾಯಕ್ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂಬ ನೆಲೆಯಲ್ಲಿ 1997ರಿಂದ 2006ರವರೆಗೆ ಭದ್ರತೆ ನೀಡಲಾಗಿತ್ತು.
ದಯಾ ನಾಯಕ್ ಎನ್ ಕೌಂಟರ್ ಗೆ ಸುಮಾರು 80 ಮಂದಿ ಬಲಿಯಾಗಿದ್ದರು. ಇದರಿಂದಾಗಿ ದಯಾ ನಾಯಕ್ ತಮ್ಮನ್ನು ತಾವೇ ಹೆಚ್ಚು ಬಿಂಬಿಸಿಕೊಂಡಿದ್ದರು, ಅಲ್ಲದೇ ಇದರಿಂದ ತನಗೂ, ತನ್ನ ಕುಟುಂಬಕ್ಕೂ ಬೆದರಿಕೆ ಇದೆ ಎಂದು ಹೇಳಿದ್ದರು. ಬಳಿಕ ಮಹಾರಾಷ್ಟ್ರ ಸರ್ಕಾರ ದಯಾ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು.
ದಯಾ ನಾಯಕ್ ಅಕ್ರಮ ಆಸ್ತಿ ಹೊಂದಿರುವುದಾಗಿ ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ಆರೋಪಿಸಿ ದೂರು ನೀಡಿದ್ದರು. ಆ ನಿಟ್ಟಿನಲ್ಲಿ 2006ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದಯಾ ನಾಯಕ್ ಅವರನ್ನು ಬಂಧಿಸಿತ್ತು. 2010ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ನಾಯಕ್ ಮೇಲಿನ ಎಲ್ಲಾ ಆರೋಪಗಳನ್ನು ವಜಾಗೊಳಿಸಿತ್ತು. ಬಳಿಕ 2012ರಲ್ಲಿ ದಯಾ ನಾಯಕ್ ಅವರನ್ನು ಸೇವೆಗೆ ಮಹಾರಾಷ್ಟ್ರ ಸರ್ಕಾರ ನೇಮಿಸಿತ್ತು.