ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಆ ಯುವಕರೆಲ್ಲ ಒಂದೊಂದು ಉದ್ಯೋಗ ನಿರತರು. ಆದರೆ ತಮ್ಮ ಕೆಲಸ-ಕಾರ್ಯದ ನಡುವೆಯೂ ಒಂದಿಷ್ಟು ಹೊತ್ತನ್ನು ಕಡ್ಡಾಯವಾಗಿ ಸಮಾಜಸೇವೆಗೆ ಮೀಸಲಿಡಬೇಕೆಂಬ ಅವರ ತುಡಿತ ಮಾತ್ರ ಬಹು ಅಪರೂಪವಾದುದು. ಸ್ನೇಹಿತನ ನೆನಪಲ್ಲಿ ಆರಂಭಗೊಂಡ ತೆಕ್ಕಟ್ಟೆ ಫ್ರೆಂಡ್ಸ್ ಎಂಬ ಸಂಘಟನೆಯೊಂದು ಇಂದು ನೂರಾರು ಕುಟುಂಬಗಳಿಗೆ ನೆಲೆ-ಬೆಲೆ ತಂದುಕೊಟ್ಟಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಸಮಾಜಮುಖಿ, ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವ ಪಡೆಯ ಕಾರ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಉಚಿತ ಅಂಬ್ಯಲೆನ್ಸ್:
ಆರೋಗ್ಯ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ತೆಕ್ಕಟ್ಟೆ ಫ್ರೆಂಡ್ಸ್ 2011ರಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಚಿಂತನೆಯಲ್ಲಿದ್ದಾಗ ಅದನ್ನು ಕಾರ್ಯರೂಪಕ್ಕಿಳಿಸಲು ಮೊದಲು ಸಹಾಯಹಸ್ತ ಚಾಚಿದವರು ಉದ್ಯಮಿ ವಿ. ಕೆ. ಮೋಹನ್, ಬಳಿಕ ಸಂಸ್ಥೆಯ ಉದ್ದೇಶ ಅರಿತ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ಸಂಸ್ಥೆಗೆ ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದರು. ಅಂದಿನಿಂದ ಇಂದಿನ ತನಕ ಹಗಲು ರಾತ್ರಿ ಎನ್ನದೇ ಯಾರೇ ಕರೆ ಮಾಡಿದರೂ ತೆಕ್ಕಟ್ಟೆ ಫ್ರೆಂಡ್ಸ್ ಅಂಬ್ಯುಲೆನ್ಸ್ ಸಿದ್ದವಾಗಿ ಹೊರಡುತ್ತದೆ. ವಿಶೇಷವೆಂದರೆ ಅಂಬ್ಯುಲೆನ್ಸ್ ಜೊತೆಗೆ ಕೆಲವು ಸದಸ್ಯರೂ ಹೋಗಿ ನೊಂದವರ ನೆರವಿಗೆ ನಿಲ್ಲುತ್ತಾರೆ. ಬಡವರು, ಅಸ್ವಸ್ಥರು ಹಾಗೂ ಭೀಕರತೆಯ ಸ್ಥಿತಿಯಲ್ಲಿರುವವರು ಯಾರೇ ಆಗಲಿ ಕರೆ ಮಾಡಿದ ಕೂಡಲೇ ಅಲ್ಲಿರುತ್ತಾರೆ. ಇಲ್ಲಿಯವರೆಗೆ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ಅಂಬ್ಯುಲೆನ್ಸ್ ಸೇವೆಯ ಮೂಲಕವೇ ನೆರವಾಗಿದ್ದಾರೆ.
ಸಮಾಜಕ್ಕೆ ಮಾದರಿಯಾದ ಯುವಕರು:
ತೆಕ್ಕಟ್ಟೆ ಫ್ರೆಂಡ್ಸ್ ಸದಸ್ಯರು ಅಂಬ್ಯುಲೆನ್ಸ್ ಸೇವೆಗಷ್ಟೇ ಸೀಮಿತವಾಗದೇ ಇನ್ನಿತರ ಸಾಮಾಜಿಕ ಸೇವಾ ಕಾರ್ಯದಲ್ಲೂ ಸದಾ ನಿರತರು. ಕಾನ್ಸರ್ ಪೀಡಿತರಿಗೆ ಧನಸಹಾಯ, ಅಂಗವಿಕಲರಿಗೆ ಗಾಲಿಕುರ್ಚಿ, ಬಡ ಮಹಿಳೆಯರ ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ, ಪ್ರಯಾಣಿಕರ ನೆರಳಿಗೆ ಬಸ್ ತಂಗುದಾಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಮಾಹಿತಿ ಶಿಬಿರ ಆಯೋಜನೆ, ಸೇನೆಗೆ ಸೇರುವವರಿಗೆ ಸೂಕ್ತ ಮಾರ್ಗದರ್ಶನ, ರಕ್ತದಾನ ಶಿಬಿರ, ಕ್ರೀಡಾ ಲೋಕದಲ್ಲಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಸ್ವರ್ಧೆ, ಸಾಂಸ್ಕೃತಿಕ ಲೋಕದಲ್ಲಿ ಹೊನಲು ಎಂಬ ವಿನೂತನ ಕಾರ್ಯಕ್ರಮ ಹೀಗೆ ಸಂಸ್ಥೆಯ ಸೇವಾಕಾರ್ಯದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಲಕ್ಷ್ಮೀ ದೇವಾಡಿಗ ಎಂಬುವವರ ಬಡ ಕುಟುಂಬವನ್ನು ದತ್ತು ತೆಗೆದುಕೊಂಡು ಮಾನವೀಯತೆ ಮೆರೆದಿರುವ ಯುವಕರು, ತೆಕ್ಕಟ್ಟೆಯ ಮೊದಲ ಆಟೋ ಚಾಲಕರಾಗಿದ್ದ ಕಮಾಲಕ್ಷ ಪ್ರಭು ಎಂಬುವವರು ಸಂಕಷ್ಟದಲ್ಲಿದ್ದಾಗ ಅವರಿಗೆ ಹೊಸ ಆಟೋವನ್ನೇ ನೀಡಿ ಅವರ ಬದುಕು ಸುಧಾರಿಸುವಂತೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಹರಿದು ಬರುತ್ತಿದೆ ಗಣ್ಯರ ನೆರವು, ಯೋಜನೆಗಳೂ ಇದೆ ಹಲವು:
ತೆಕ್ಕಟ್ಟೆ ಫ್ರೆಂಡ್ಸ್ ಯುವಕರ ಕಾರ್ಯವನ್ನು ನೋಡಿ ಹಲವಾರು ಮಂದಿ ಆರ್ಥಿಕ ನೆರವನ್ನು ನೀಡಿ ಬೆನ್ನುತಟ್ಟುತ್ತಿದ್ದಾರೆ. ಕೊಲ್ಲೂರು ದೇವಳದ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಜನತಾ ಪಿಶ್ ಮಿಲ್ ನ ಆನಂದ ಸಿ. ಕುಂದರ್, ಶಾಸಕ ಶ್ರೀನಿವಾಸ ಶೆಟ್ಟಿ, ತಾ.ಪಂ ಸದಸ್ಯ ರಾಘವೇಂದ್ರ ಬಾರಿಕೇರೆ, ರಾಜೀವ ಕೊಠಾರಿ, ವಿಠ್ಠಲ ಶೆಟ್ಟಿ, ಗೋಪಾಲ ಶೆಟ್ಟಿ, ಜೀವನ ಶೆಟ್ಟಿ ಮತ್ತು ಬಳಗ ಸೇರಿದಂತೆ ಹತ್ತಾರು ಮಂದಿ ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಿದ್ದಾರೆ. ವಿಶೇಷವೆಂದರೆ ದೇಶಸೇವೆಯಲ್ಲಿರುವ 191 ಅಲ್ಟಿಲರಿ ರೆಜಿಮೆಂಟ್ ಯೋಧರೂ ಕೂಡ ಪ್ರತಿವರ್ಷ 5 ಸಾವಿರ ಹಣವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡುತ್ತಿದ್ದಾರೆ.
ತೆಕ್ಕಟ್ಟೆ ಫ್ರೆಂಡ್ಸ್ ರಿ. ನಡೆದ ಹಾದಿ
2008ರಲ್ಲಿ ಕ್ರಿಕೆಟ್ ಆಟಕ್ಕೊಸ್ಕರ ಸಂಘಟಿತರಾದ ಯುವಕರ ತಂಡ 2009ರಲ್ಲಿ ಆಕಸ್ಮಿಕ ನಿಧನರಾದ ಸತೀಶ್ಚಂದ್ರ ಶೆಟ್ಟಿ ಅವರ ನೆನಪಿನಲ್ಲಿ ಕಟ್ಟಿದ ಸಂಸ್ಥೆ ತೆಕ್ಕಟ್ಟೆ ಫ್ರೆಂಡ್ಸ್. ಇಂದು ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಅಂಬ್ಯುಲೆನ್ಸ್ ಸೇವೆ, ಮನೆಯ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ, ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಇಂದಿಗೂ ಸಕ್ರಿಯವಾಗಿ ದುಡಿಯತ್ತಿದ್ದಾರೆ.
ಯಾರೇ ದೇಣಿಗೆ ನಿಡಿದರೂ ಅದು ಸಮಾಜಕ್ಕೆ ಅರ್ಪಿತವಾಗಬೇಕು ಎಂಬುದಷ್ಟೇ ಅವರ ಉದ್ದೇಶ ಹೊಂದಿರುವ ಅವರು ಪ್ರತಿ ತಿಂಗಳು ಉಚಿತ ಅಂಬ್ಯುಲೆನ್ಸ್ ಹಾಗೂ ಇತರ ಖರ್ಚುಗಳಿಗಾಗಿ 30,000 ರೂಪಾಯಿ ವ್ಯಯಿಸುತ್ತಿದೆ. ಯುವಕರ ತಂಡದಲ್ಲಿ ಸಮಾಜಕ್ಕೆ ನೆರವಾಗುವಂತಹ ನೂರಾರು ಯೋಜನೆಗಳಿವೆ ಅದನ್ನು ಕಾರ್ಯರೂಪಕ್ಕಿಳಿಸಲು ಅವರಿಗೆ ಮತ್ತಷ್ಟು ಬಲಾಢ್ಯ ಕೈಗಳ ಅಗತ್ಯವಿದೆ. ಕುಂದಾಪ್ರ ಡಾಟ್ ಕಾಂ ವರದಿ.
ತೆಕ್ಕಟ್ಟೆ ಫ್ರೆಂಡ್ಸ್ ನ ಅಧ್ಯಕ್ಷರಾಗಿ ದಯಾನಂದ ಪೂಜಾರಿ, ಕಾರ್ಯದರ್ಶಿಯಾಗಿ ಆಸಿಫ್ ಇದ್ದಾರೆ. ಪ್ರಕಾಶ್ ಶೆಟ್ಟಿ ಸಂಚಾಲಕರಾಗಿ ಸಂಸ್ಥೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಇವರೊಂದಿಗೆ ವಿನೋದ ದೇವಾಡಿಗ, ವಾದಿರಾಜ ಗಾಣಿಗ, ದಯಾನಂದ ಪೂಜಾರಿ, ಗಿರೀಶ್ ಪೂಜಾರಿ, ಪ್ರವೀಣ ಶೆಟ್ಟಿ, ರಾಘವೇಂದ್ರ ಮಣೂರು, ಶರತ್, ಪ್ರಶಾಂತ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಯುವಕರು ಸದಾ ಸೇವಗೆ ಸಿದ್ಧರಾಗಿ ನಿಂತಿರುತ್ತಾರೆ.
ಪ್ರತಿಫಲಾಪೇಕ್ಷೆ ಇಲ್ಲದೇ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಈ ಯುವಕರು ತೆಕ್ಕಟ್ಟೆಯ ಯೋಧರೇ ಸರಿ. ಇವರುಗಳ ಸೇವಾ ಪ್ರವೃತ್ತಿ ಹಿಗೇಯೇ ಮುಂದುವರಿಯಲಿ ಎಂದು ‘ಕುಂದಾಪ್ರ ಡಾಟ್ ಕಾಂ’ ಆಶಿಸುತ್ತದೆ.
ಉಚಿತ ಅಂಬುಲೆನ್ಸ್ ನೆರವು ಬೇಕಾಗಿದ್ದಲ್ಲಿ ಕರೆಮಾಡಿ : 9740100834 / 9945340206 (ಪ್ರಕಾಶ್ ಶೆಟ್ಟಿ)
ಕುಂದಾಪ್ರ ಡಾಟ್ ಕಾಂ- editor@kundapra.com