ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಸ್ತುತ ನಿಲುಗಡೆಗೊಳಿಸಿರುವ ಬೆಂಗಳೂರು-ಕಣ್ಣೂರು-ಕಾರವಾರ ಕಂಬೈನ್ಡ್ ಎಕ್ಸ್‌ಪ್ರೆಸ್ ರೈಲನ್ನು ಕೆಲವು ಹೊಂದಾಣಿಕೆ ಮಾಡಿಕೊಂಡು ಪುನರಾರಂಭಗೊಳಿಸಬೇಕು ಎಂದು ದಕ್ಷಿಣ ಪಶ್ಚಿಮ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಕೆ. ವೆಂಕಟೇಶ್ ಕಿಣಿ ದಕ್ಷಿಣ ರೈಲ್ವೆಯ ಪ್ರಾದೇಶಿಕ ಮ್ಯಾನೇಜರ್ ಅವರನ್ನು ಒತ್ತಾಯಿಸಿದ್ದಾರೆ.
ಕಾರವಾರ-ಯಶವಂತಪುರ ರೈಲು ಆರಂಭಿಸಿದ ಬಳಿಕ ವಾರಕ್ಕೆ ಮೂರು ಬಾರಿ ಮೈಸೂರು ಮೂಲಕ ಓಡಾಡುವ 16523/24 ಸಂಖ್ಯೆಯ ಬೆಂಗಳೂರು-ಕಾರವಾರ ರೈಲನ್ನು ರದ್ದುಪಡಿಸಲಾಗಿದೆ. ಅದರಿಂದಾಗಿ ಕರಾವಳಿ ಮೈಸೂರು ನಡುವೆ ರೈಲು ಸಂಪರ್ಕ ಇಲ್ಲದಂತಾಗಿದೆ. ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪ್ರವಾಸೋದ್ಯಮ ಮಹತ್ವದ ನಗರವಾದ ಮೈಸೂರು ಮತ್ತು ಇತರ ಸ್ಥಳಗಳಿಗೆ ಕರಾವಳಿಯ ಗಣನೀಯ ಸಂಖ್ಯೆಯ ಪ್ರಯಾಣಿಕರು ನಿಲುಗಡೆಗೊಳಿಸಿದ ರೈಲಿನ ಮೂಲಕ ಸಂಚರಿಸುತ್ತಿದ್ದರು. ಈ ರೈಲು ಮಂಗಳೂರು ಕಾರವಾರ ನಡುವಿನ ನಿತ್ಯ ಪ್ರಯಾಣದ ರೈಲಾಗಿಯೂ ಬಳಕೆಯಾಗುತ್ತಿತ್ತು. ಹಲವು ರೈಲ್ವೆ ಪ್ರಯಾಣಿಕ ಸಂಘಗಳು ಈ ರೈಲಿನ ಪುನರಾರಂಭ ಮಾಡಿ ಮಡಗಾಂವ್ ವರೆಗೆ ವಿಸ್ತರಿಸಲು ಒತ್ತಾಯಿಸುತ್ತಿವೆ.
ಬೆಂಗಳೂರು-ಕಣ್ಣೂರು ನಡುವಿನ 16517/18 ಸಂಖ್ಯೆಯ ರೈಲು ಈಗ ಮೈಸೂರು ಮೂಲಕ ವಾರದಲ್ಲಿ ಮೂರು ದಿನ ಸಂಚರಿಸುತ್ತಿದೆ. ಅದನ್ನು ಈ ಮೊದಲಿನಂತೆ ಕಾರವಾರ-ಕಣ್ಣೂರು ಕಂಬೈನ್ಡ್ ಎಕ್ಸ್‌ಪ್ರೆಸ್ ಆಗಿ ಮಡಗಾಂವ್‌ಗೆ ವಿಸ್ತರಿಸಿ ಮಡಗಾಂವ್-ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು(ಸಂಖ್ಯೆ 22635/22636) ನಿಲ್ಲಿಸಬಹುದು. ಅದರಿಂದ ತೆರವಾದ ಮಾರ್ಗದಲ್ಲಿ ಬೆಂಗಳೂರು-ಕಣ್ಣೂರು-ಕಾರವಾರ-ಮಡಗಾಂವ್ ರೈಲನ್ನು ಓಡಿಸಬಹುದು. ಹಾಗೆಯೇ ವಾರದಲ್ಲಿ 4 ದಿನ ಕುಣಿಗಲ್ ಮೂಲಕ ಸಂಚರಿಸುವ 16511/12 ಸಂಖ್ಯೆಯ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಅನ್ನು ರದ್ದುಮಾಡಿ ಬೆಂಗಳೂರು-ಕಣ್ಣೂರು ನಡುವಿನ 16517/16523 ಸಂಖ್ಯೆಯ ರೈಲನ್ನು ವಾರದ ಎಲ್ಲ ದಿನಗಳಂದು ಮೈಸೂರು ಮೂಲಕ ಓಡಿಸಬಹುದು. ವಾರದಲ್ಲಿ ಮೂರು ದಿನ ಸಂಚರಿಸುವ 16585 ಸಂಖ್ಯೆಯ ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲು, ಸಂಚಾರಿಗಳಿಗೆ ಅನುಕೂಲವಾಗಿಲ್ಲ. ಅದು ಯಶವಂತಪುರವನ್ನು 16:25ಕ್ಕೆ ಬಿಟ್ಟು ಮರುದಿನ 4ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರುತ್ತದೆ. ಅದನ್ನು ಯಶವಂತಪುರದಿಂದ ತಡವಾಗಿ ಬಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಬೆಂಗಳೂರು-ಕಾರವಾರ-ಮಡಗಾಂವ್ ರೈಲು ಪುನರಾರಂಭವಾದರೆ ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲನ್ನು ಬೆಂಗಳೂರಿನಿಂದ ತಡವಾಗಿ ಬಿಟ್ಟು ತೆರವಾದ 16511 ಸಂಖ್ಯೆಯ ಬೆಂಗಳೂರು-ಕಣ್ಣೂರು-ಕಾರವಾರ ರೈಲಿನ ಮಾರ್ಗದಲ್ಲಿ ಮಂಗಳೂರು ಸೆಂಟ್ರಲ್‌ಗೆ ಓಡಿಸಬಹುದು.
ಬೆಂಗಳೂರು-ಕಣ್ಣೂರು-ಕಾರವಾರ ರೈಲನ್ನು ಮಂಗಳೂರು ಸೆಂಟ್ರಲ್ ಮೂಲಕ ಚಲಿಸುವಂತೆ ಮಾಡಿದರೆ ಅದು ಈಗಿರುವ ಮಂಗಳೂರು-ಮಡಗಾಂವ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಪ್ರಯಾಣಿಕರನ್ನು ಒಯ್ಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮಂಗಳೂರಿನಲ್ಲಿ ಮಾತ್ರ ಕೋಚ್‌ಗಳನ್ನು ಪ್ರತ್ಯೇಕಿಸಿ, ಬದಲಿಸಿದರೆ ಸಾಕಾಗುತ್ತದೆ.
ಸೂಚಿಸಿದ ರೈಲಿನ ಪುನರಾರಂಭ ಮತ್ತು ವಿಸ್ತರಣೆಯಿಂದ ಸುಬ್ರಹ್ಮಣ್ಯ ರೋಡ್-ಮಂಗಳೂರು ಮತ್ತು ಮಂಗಳೂರು-ಮಡಗಾಂವ್ ನಡುವಿನ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಮಡಗಾಂವ್-ದಾದರ್ ಜನಶತಾಬ್ಧಿ ಸೇರಿದಂತೆ ಮಡಗಾಂವ್‌ನಲ್ಲಿ ಅಂತ್ಯವಾಗುವ ಮತ್ತು ಆರಂಭವಾಗುವ ಹಲವು ರೈಲುಗಳಿಗೆ ಇದು ಸಂಪರ್ಕ ರೈಲಾಗುತ್ತದೆ. ಈ ಎಲ್ಲ ಪ್ರದೇಶಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ ಜನಪ್ರಿಯವೂ ಆಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಯಶವಂತಪುರ-ಮಂಗಳೂರು ರೈಲನ್ನು ಪರಿಷ್ಕರಿಸಿ ಬೆಂಗಳೂರಿನಿಂದ ಚಲಿಸುವಂತೆ ಮಾಡಿದರೆ ಅದು ಮಂಗಳೂರು ತಲಪುವ ವೇಳೆ ಉತ್ತರ ಮಲಬಾರ್ ಸಂಪರ್ಕಿಸುವ ರೈಲುಗಳಿರುವುದರಿಂದ ಆ ದಿಕ್ಕಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಆರಂಭವಾಗುವ ಮೊದಲು 16517/18 ಸಂಖ್ಯೆಯ ರೈಲು ವಾರದ ಎಲ್ಲ ದಿನಗಳಂದು ಸಂಚರಿಸುತ್ತಿತ್ತು. ಆ ಮೂಲಕ ಮಂಗಳೂರು ಸೆಂಟ್ರಲ್-ಕಣ್ಣೂರು ನಡುವಿನ ಪ್ರಯಾಣಿಕ ರೈಲಾಗಿಯೂ ಬಳಕೆ ಆಗುತ್ತಿತ್ತು. ಅದನ್ನು ಪುನರಾರಂಭ ಮಾಡಿದರೆ ಆ ಉದ್ದೇಶವೂ ಈಡೇರಿ, ಪ್ರಯಾಣಿಕರಿಗೆ ಅತ್ಯಧಿಕ ಅನುಕೂಲ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕೋರಿದ ರೈಲು ಮತ್ತು ಬದಲಾಯಿಸಿಬೇಕಾದ ರೈಲುಗಳಿಗೆ ವೆಂಕಟೇಶ್ ಕಿಣಿ ಹೊಸ ವೇಳಾಪಟ್ಟಿಯನ್ನೂ ಪತ್ರದಲ್ಲಿ ಸೂಚಿಸಿದ್ದಾರೆ.