ಕಲಾಕ್ಷೇತ್ರ ಕುಂದಾಪುರ ಆಯೋಜಿಸಿದ ರಾಷ್ಟ್ರೀಯತೆ ಮತ್ತು ಬದ್ಧತೆ ವಿಚಾರ ಸಂಕಿರಣ ಹಾಗೈ ಸಂವಾದ
ಕುಂದಾಪುರ: ನಮ್ಮ ದೇಶದ ಸಂವಿಧಾನ ಬರೆಯುವ ಪೂರ್ವವಾಗಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿ ಸುಧೀರ್ಘ ಚರ್ಚೆಯ ನಂತರ ಸಂವಿಧಾನವನ್ನು ರಚಿಸಿ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಕಾರ್ಯವೈಖರಿಯನ್ನು ಉಲ್ಲೇಖಿಸಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳಿಗೂ ತನ್ನದೇ ಆದ ಮಹತ್ವ ಇರುವಂತೆ ಎಲ್ಲಾ ರೀತಿಯ ಚರ್ಚೆಗಳು ನ್ಯಾಯಂಗದ ಮುಂದೆಯೇ ನಡೆಯುತ್ತದೆ. ಹೊಸ ತಿದ್ದುಪಡಿಗಳು ಬಂದಾಗಲೂ ಕೂಡಾ ಅದರ ಬಗ್ಗೆ ಆಕ್ಷೇಪಗಳು ಕಂಡು ಬಂದರೆ ನ್ಯಾಯಾಂಗದ ಮುಂದೆ ಹೋಗಲು ಅವಕಾಶಗಳನ್ನು ನೀಡಿದೆ ಎಂದು ಮಾಜಿ ಸಂಸದ ಹಾಗೂ ಹಿರಿಯ ನ್ಯಾಯವಾದಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಕಲಾಕ್ಷೇತ್ರ -ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ನಡೆದ ರಾಷ್ಟ್ರೀಯತೆ ಮತ್ತು ಬದ್ಧತೆ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ನ್ಯಾಯಾಂಗದ ಬಗ್ಗೆ ವಿಚಾರ ಮಂಡಿಸಿದರು.
ಸಂವಿಧಾನದ ಬುಡವನ್ನು ಅಲುಗಾಡಿಸಲು ಹೋಗಬಾರದು. ನ್ಯಾಯಾಂಗದ ಆಶಯಗಳನ್ನು ಅರ್ಥೈಸಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಆಗಿರುತ್ತದೆ. ನಮ್ಮ ಹಕ್ಕುಗಳನ್ನು ಹೇಗೆ ಪ್ರತಿಪಾದಿಸಿದಂತೆ ನಮ್ಮ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಎಂದರು.
ನಮ್ಮ ಬದ್ಧತೆ ರಾಷ್ಟ್ರೀಯತೆ ಬಗ್ಗೆ ಆಲೋಚನೆಗಳು ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು. ವೈಯಕ್ತಿಕ ವಿಚಾರವನ್ನು ಮುಂದಿಟ್ಟುಕೊಂಡು ಸಮಷ್ಠಿ ಹಿತಕ್ಕೆ ಧಕ್ಕೆ ತರುವುದು ಸಮಂಜಸವಲ್ಲ. ದೇಶಕ್ಕಾಗಿ ನನ್ನಿಂದ ಏನು ಕೊಡಲು ಸಾಧ್ಯವೋ ಅದನ್ನು ನೀಡಲು ನಾವು ಸಿದ್ಧರಿರಬೇಕು. ಯಾವುದೇ ವಿಷಯವನ್ನು ವಿಷಯಾಂತರ ಮಾಡದೇ ಸಂವಿಧಾನ ಕೊಟ್ಟಿರುವ ಪ್ರಾಮುಖ್ಯತೆಗಳನ್ನು ಅರಿತುಕೊಳ್ಳಬೇಕು ಎಂದರು.
ರಾಷ್ಟ್ರೀಯ ಪ್ರಜ್ಞೆ ಮತ್ತು ಬದ್ಧತೆ ಹಾಗೂ ಮೂರು ಅಂಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಅವರಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಬಗ್ಗೆ ಅರಿವು ಮೂಡಬೇಕು. ಇಂಥಹ ಕಾರ್ಯಕ್ರಮಗಳು ಕಾಲೇಜುಗಳಲ್ಲಿ ನಡೆದಾಗ ಹೆಚ್ಚು ಪರಿಣಾಮ ಆಗುತ್ತದೆ ಎಂದರು.
ರಾಷ್ಟ್ರೀಯತೆ, ಬದ್ಧತೆ ಜಾಗೃತಿಯಿಂದ ಬದಲಾವಣೆ-ಕಾರ್ಣಿಕ್
ಕಾರ್ಯಾಂಗದ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ ಕಾರ್ಣಿಕ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯದಂತೆ ಪ್ರಜೆಗಳು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಅರಿತುಕೊಂಡು ಬದ್ಧತೆಯಿಂದ ನಡೆದುಕೊಂಡಾಗ ಕಾರ್ಯಾಂಗದ ವ್ಯವಸ್ಥೆ ಕೂಡಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಶಾಸಕಾಂಗ ರೂಪಿಸಿದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಾಂಗ ಅನುಷ್ಠಾನಿಸುವಲ್ಲಿ ಕೂಡಾ ಬದ್ಧತೆ ಮುಖ್ಯವಾಗಿರುತ್ತದೆ ಎಂದರು.
ಕಾರ್ಯಾಂಗದ ನಿರಂಕುಶ ಪ್ರಭುತ್ವವನ್ನು ಶಾಸಕಾಂಗ ನಿಭಾಯಿಸುತ್ತದೆ. ಶಾಸನ ಸಭೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ತಮ್ಮ ಬದ್ಧತೆ ಪ್ರದರ್ಶಿಸಿದಾಗ ಕಾರ್ಯಾಂಗ ಕೂಡಾ ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತದೆ. ಕಾರ್ಯಾಂಗದಲ್ಲಿ ಕೂಡಾ ಹುದ್ದೆಗಳು ಸಂವಿಧಾನ ಬದ್ಧವಾಗಿ ನಿಭಾಯಿಸಲ್ಟಪಟ್ಟಾಗ ಕಾರ್ಯಾಂಗ ಹೆಚ್ಚು ಮಹತ್ವ ಪಡೆಯುತ್ತದೆ ಎಂದರು.
ಜನಾಂಗ ಜಾಗೃತಿಯಿಂದ ಶಾಸಕಾಂಗ ಅರ್ಥಪೂರ್ಣ-ಕೋಟ
ಶಾಸಕಾಂಗ ವ್ಯವಸ್ಥೆಯ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕಾಂಗಕ್ಕೆ ಅದ್ಬುತವಾದ ಶಕ್ತಿಯಿದೆ. ಸಾಮಾಜಿಕ ಕಳಕಳಿಯ ಮೂಲಕ ಚುನಾಯಿತರಾದ ಜನಪ್ರತಿನಿಧಿ ದಕ್ಷತೆಯಿಂದ ಕೆಲಸ ಮಾಡಿದರೆ ದೇಶದ ಜೀವಂತಿಕೆ ಹಾಳಾಗುವುದಿಲ್ಲ. ಸಂವಿಧಾನದಲ್ಲಿ ಬಹು ಮುಖ್ಯ ಭಾಗವಾಗಿರುವ ಶಾಸಕಾಂಗ ವ್ಯವಸ್ಥೆಯಲ್ಲಿ ಶ್ರೇಷ್ಠವಾದ ಮೌಲ್ಯಗಳಿವೆ. ಅಂಥಹ ಮೌಲ್ಯಗಳನ್ನು ಉದಾತ್ತವಾಗಿ ನಮ್ಮ ಹಿರಿಯ ರಾಜಕಾರಣಿಗಳು ತೆರೆದಿಟ್ಟಿದ್ದಾರೆ. ಅವುಗಳನ್ನು ಅಳವಡಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.
ವಿಶ್ವದ ಎಲ್ಲ ಆಡಳಿತದಲ್ಲಿಯೂ ಪ್ರಜಾಪ್ರಭುತ್ವ ಆಡಳಿತ ಶ್ರೇಷ್ಠವಾದುದು. ಶಾಸಕಾಂಗ ವ್ಯವಸ್ಥೆ ಹೆಚ್ಚು ಪರಿಣಾಮ ಬೀರುತ್ತದೆ. ನೆಹರೂ ಅವರಿಂದ ಮೋದಿಯ ತನಕ ದೇಶದ ಚುಕ್ಕಾಣಿ ಹಿಡಿಯಲು ಶಾಸಕಾಂಗ ಅವಕಾಶ ಕಲ್ಪಿಸಿದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಶಾಸಕಾಂಗದ ಮೂಲಕ ಅದೆಷ್ಟೋ ಮಾರ್ಪಾಟ್ಟುಗಳು ಆಗಿವೆ. ತಿದ್ದುಪಡಿಗಳು ಬಂದಿವೆ. ಆದರೆ ಹಣ ಖರ್ಚು ಮಾಡಿ ಗೆಲ್ಲುತ್ತೇವೆ ಎನ್ನುವ ಮನೋಭಾವ ಜನಪ್ರತಿನಿಧಿಗಳಿಂದ ದೂರಾಗಬೇಕು. ಸೇವೆಯ ಬದ್ಧತೆ ಜಾಗೃತವಾಗಬೇಕು ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಬೇಕು. ಸಂಸದೀಯ ವ್ಯವಸ್ತೆಯ ಕಾಳಜಿ ಜಾಗೃತವಾಗಬೇಕು. ಸಚೇತಕರು ಶಾಸಕರನ್ನು ಸದನಕ್ಕೆ ಕರೆಯುವ ಸ್ಥಿತಿ ಬರಬಾರದು. ತಮ್ಮ ಕರ್ತವ್ಯ ಶಾಸಕಾಂಗ ವ್ಯವಸ್ಥೆಯಲ್ಲಿರುವವರಿಗೆ ಜಾಗೃತವಾಗಬೇಕಾದರೆ, ಜನಾಂಗ ಮೊದಲು ಜಾಗೃತವಾಗಬೇಕು ಎಂದರು.
ರಾಷ್ಟ್ರೀಯ ಪ್ರಜ್ಞೆ ಮತ್ತು ಬದ್ಧತೆ ಶಾಸಕಾಂಗ ವ್ಯವಸ್ಥೆಯಲ್ಲಿ ಮಹತ್ವಶಾಲಿ. ಏಕೆಂದರೆ ರಾಜ್ಯ ಸರ್ಕಾರದಲ್ಲಿ ಕೆಳಮನೆ, ಮೇಲ್ಮೆನೆಯ 300 ಸದಸ್ಯರು ರಾಜ್ಯದ ಒಟ್ಟು ಆರುವರೆ ಕೋಟಿ ಜನರ ಭವಿಷ್ಯ ನಿರ್ಧಾರ ಮಾಡಬೇಕಾಗುತ್ತದೆ. ಇಲ್ಲಿ ಪ್ರತಿಯೊಬ್ಬ ಶಾಸಕನ ಮೇಲೂ ಜವಾಬ್ದಾರಿಗಳು ಇರುತ್ತದೆ. ತನ್ನ ಕರ್ತವ್ಯ ಏನು ಎನ್ನುವ ಪ್ರಜ್ಞೆ ಚುನಾಯಿತ ಪ್ರತಿನಿಧಿಯಲ್ಲಿ ಇದ್ದಾಗ ಶಾಸಕಾಂಗ ವ್ಯವಸ್ಥೆ ಅರ್ಥ ಪಡೆದುಕೊಳ್ಳುತ್ತದೆ ಎಂದರು.
ವಿಚಾರ ಸಂಕಿರಣದ ಸಮನ್ವಯಕಾರರಾದ ಉದಯ ಟಿವಿಯ ದೀಪಕ್ ತಿಮ್ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯತೆ ಮತ್ತು ಬದ್ಧತೆ ಜಾಗೃತಿಗೆ ರಾಜಕೀಯ ಭೌದ್ದಿಕತೆ ಬೆಳೆಯಬೇಕು. ರಾಜಕೀಯ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸ ಆದಾಗ ಮತ್ತು ವ್ಯವಸ್ಥೆಯಲ್ಲಿ ಜನರ ಸಹಭಾಗಿತ್ವ ಪರಿಪೂರ್ಣವಾಗಿ ಕಂಡುಬಂದಾಗ ಯಶಸ್ಸು ಸಾಧ್ಯ ಎಂದರು.
ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಕುಂದಾಪುರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾನಂದ ನಾವಡ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳು ವಿಚಾರವನ್ನು ಮಂಡಿಸಿದ ಬಳಿಕ ಕುಂದಾಪುರದ ನಾಗರೀಕರುಗಳೊಂದಿಗೆ ಸಂವಾದ ನಡೆಯಿತು.