ಕುಂದಾಪುರ: ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅಲ್ಲಿನ ಶಂಕರ ಕಲಾಮಂದಿರದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ತರಬೇತಿ ಮತ್ತು ಪಕ್ಷ ಕಾರ್ಯಕರ್ತರ ಸಮಾವೇಶ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಉಪ್ಪುಂದ ಗ್ರಾಮ ಪಂಚಾಯತನ್ನು ಪಕ್ಷದ ತೆಕ್ಕೆಗೆ ತರಲು ಕಾರಣವಾದುದು ಯುವ ಮತ್ತು ಹಿರಿಯ ಕಾರ್ಯಕರ್ತರ ಸಂಘಟಿತ ಹೋರಾಟ. ಈ ವ್ಯವಸ್ಥೆ ಮುಂದಿನ ಐದು ವರ್ಷಕಾಲ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲೂ ಮುಂದುವರಿಯಬೇಕು. ಪಕ್ಷ ಬೆಂಬಲಿತ ಸದಸ್ಯರು ತಮ್ಮ ಹೊಣೆಯನ್ನು ಅರಿತು ಕರ್ತವ್ಯ ನಿರ್ವಹಿಸಲು ಈ ತರಬೇತಿ ಸಹಕಾರಿಯಾಗಲಿ ಎಂದು ಆಶಿಸಿದರು.
ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸದಸ್ಯ ನಾರಾಯಣ ಅಳ್ವೆಗದ್ದೆ ಉದ್ಘಾಟಿಸಿದರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪಿ. ನಾರಾಯಣ ಖಾರ್ವಿ, ಎಸ್. ಮದನಕುಮಾರ್, ಗ್ರಾ. ಪಂ. ಅಧ್ಯಕ್ಷೆ ದುರ್ಗಮ್ಮ, ವಿವಿಧ ಘಟಕಗಳ ಪ್ರಮುಖರಾದ ಪ್ರಮೀಳಾ ದೇವಾಡಿಗ, ವಾಸುದೇವ ಎಸ್. ಪೂಜಾರಿ, ಜೀವನ ಖಾರ್ವಿ, ಅಂಬಿಕಾ ದೇವಾಡಿಗ, ಗೋವಿಂದ ಖಾರ್ವಿ, ಚೆಂದು ಗಾಣಿಗ, ಮೋಹನ ಪೂಜಾರಿ ವೇದಿಕೆಯಲ್ಲಿದ್ದರು. ಐ. ನಾರಾಯಣ ಸ್ವಾಗತಿಸಿದರು. ರಾಮಚಂದ್ರ ಖಾರ್ವಿ ವಂದಿಸಿದರು. ನಾಗರಾಜ್ ನಿರೂಪಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಮರವಂತೆ ಅವರು ಗ್ರಾಮ ಪಂಚಾಯತ್‌ನ ಹೊಣೆ ಮತ್ತು ಅಧಿಕಾರಗಳ ಕುರಿತು ಹಾಗೂ ಜೇಸಿ ತರಬೇತಿದಾರ ಶ್ರೀಧರ ಪಿ. ಎಸ್. ನಾಯಕತ್ವದ ಕುರಿತು ತರಬೇತಿ ನೀಡಿದರು.