ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.25: ಕಾಶ್ಮೀರದ ಮೆಂಧರ್ ಎಂಬಲ್ಲಿ ನಡೆದ ಸೇನಾ ಟ್ರಕ್ ಅಪಘಾತದಲ್ಲಿ ಐವರು ಯೋಧರು ಮೃತಪಟ್ಟಿದ್ದು, ಈ ಪೈಕಿ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ (31) ಅವರು ಕೂಡ ಹುತಾತ್ಮರಾಗಿದ್ದಾರೆ.
ಮಂಗಳವಾರ ಸಂಜೆ ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ 350 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸೇನಾ ವಾಹನಲ್ಲಿ 10 ಯೋಧರು ಪ್ರಯಾಣಿಸುತ್ತಿದ್ದು, ಈ ಪೈಕಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ.
ಹುತಾತ್ಮ ಯೋಧ ಅನೂಪ್ ಪೂಜಾರಿ ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್ನಲ್ಲಿ ಸೇವೆ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರರಾದ ಅನುಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ.
ಕಳೆದ ತಿಂಗಳು ರಜೆಗೆ ಊರಿಗೆ ಬಂದಿದ್ದ ಅವರು ಡಿ.15 ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಘೊಂಡಿದ್ದಲ್ಲದೆ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ಬಳಿಕ ಸೇವೆಗೆ ಹಿಂದಿರುಗಿದ್ದರು.
ನಾಳೆ ಅಂತ್ಯಕ್ರಿಯೆ:
ಗುರುವಾರ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗುತ್ತದೆ.
ಹುತಾತ್ಮ ಅನುಪ್ ಅವರು ತಾಯಿ, ಇಬ್ಬರು ಸಹೋದರಿಯರು, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.