ಕೊರೋನಾ ಕಾರಣದಿಂದಾಗಿ ಇಲೆಕ್ಟ್ರಾನಿಕ್ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಗ್ರಾಹಕರ ಮೇಲೆ ಇದು ಭಾರಿ ಪರಿಣಾಮ ಬೀರಿದೆ. ಕೊರೋನಾ ದೇಶದ ಆರ್ಥಿಕತೆ, ಉದ್ಯಮ ವಲಯ, ಮಾರುಕಟ್ಟೆಯ ವ್ಯವಹಾರಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಸರ್ಕಾರ ದೇಶದಲ್ಲಿ ಮೂರು ತಿಂಗಳ ಲಾಕ್‌ಡೌನ್ ಘೋಷಿಸಿ, ಎಲ್ಲಾ ಭಾಗಗಳಲ್ಲೂ ಸಂಚಾರ ವ್ಯವಸ್ಥೆಯನ್ನು ತಡೆಗಟ್ಟಿ, ಕೇವಲ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿತು. ಇದರಿಂದ ಉಳಿದ ವಸ್ತುಗಳ ಖರೀದಿ ಮತ್ತು ಆನ್‌ಲೈನ್ ಮಾರಾಟವು ಇಲ್ಲದಂತಾಗಿ ಅಂಗಡಿ ಮಾಲೀಕರು, ಕಂಪೆನಿಗಳಿಗೆ ನಷ್ಟವಾಗಿ, ಮಾರುಕಟ್ಟೆಯಲ್ಲಿ ಬೆಲೆ ಕುಸಿಯಿತು.
ಲಾಕ್‌ಡೌನ್ ಹಂತ-ಹಂತವಾಗಿ ತೆರವಾಗಿ ಅಂಗಡಿ ಮುಂಗಟ್ಟುಗಳ ಜೊತೆಗೆ ಆನ್‌ಲೈನ್ ಮಾರಾಟವೂ ಸಹ ತಮ್ಮ ವ್ಯವಹಾರವನ್ನು ಪುನಃ ಪ್ರಾರಂಭಿಸಿವೆ. ಆದರೆ ಖರೀದಿದಾರರ ಸಂಖ್ಯೆಯಲ್ಲಿ ನಿಧಾನಗತಿಯಿದೆ. ಕೊರೋನಾ ಭಯ ಒಂದು ಕಾರಣವಿರಬಹುದು. ಇನ್ನೊಂದು, ಎರಿದ ವಸ್ತುಗಳ ಬೆಲೆ. ಮಾರುಕಟ್ಟೆಯಲ್ಲಿ ಇಲೆಕ್ಟ್ರಾನಿಕ್ ಸಾಮಾನುಗಳ ಬೆಲೆ ದುಬಾರಿಯಾಗಿದೆ.
ಲಾಕ್‌ಡೌನ್‌ನಿಂದ ಎಲ್ಲಾ ಕೆಲಸ ನಿಂತಿದ್ದ ಕಾರಣ ಇಲೆಕ್ಟ್ರಾನಿಕ್ ವಸ್ತುಗಳ ಹೊಸ ಸ್ಟಾಕ್‌ಗಳ ಉತ್ಪಾದನೆಯೂ ಆಗಿಲ್ಲ, ಈಗ ಪ್ರಾರಂಭವಾಗಿದ್ದರೂ ಅದರ ರವಾನೆಗೆ ಸಂಚಾರ ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ಅಂಗಡಿ ಮಾರಾಟಗಾರರು ತಮಗಾಗಿರುವ ನಷ್ಟವನ್ನು ತುಂಬಲು ಈಗಾಗಲೇ ಇರುವ ಹಳೆಯ ಸ್ಟಾಕ್‌ಗಳನ್ನು ಅದರ ಮೊದಲ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರುತ್ತಿದ್ದಾರೆ.
’ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ತುಂಬಾ ಇದೆ. ಆದರೆ ಹಳೆಯ ಸ್ಟಾಕ್‌ಗಳು ಮಾರಾಟವಾಗುತ್ತಿಲ್ಲ, ಇನ್ನೂ ಬೆಲೆ ಜಾಸ್ತಿಯಿರುವ ಕಾರಣ ಸುಮ್ಮನೆ ವಿಚಾರಿಸುತ್ತಾರೆ, ಖರೀದಿಸಲ್ಲ. ಹೊಸ ಸ್ಟಾಕ್‌ಗಳು ಅಂಗಡಿಗೆ ಬರಲಿಕ್ಕೆ ತುಂಬಾ ತಡವಾಗ್ತದೆ. ಬಸ್ ವ್ಯವಸ್ಥೆ ಸರಿಯಿಲ್ಲದೇ ಇರುವ ಕಾರಣ ಅವುಗಳು ಬರುವುದು ತಡ. ಇದರಿಂದ ಎಲ್ಲರಿಗೂ ತೊಂದರೆಯಾಗಿದೆ’ ಎನ್ನುವುದು ಮಾರಾಟಗಾರರ ಸಮಸ್ಯೆಯಾದರೆ, ’ನಮಗೆ ಮುಂದುನ ಸೆಮಿಸ್ಟರ್‌ನ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುತ್ತಿದ್ದಾರೆ. ತರಗತಿ ಕೇಳಲು ಹಾಗೂ ಅಸೈನ್‌ಮೆಂಟ್ ಮಾಡಲು ಲ್ಯಾಪ್‌ಟಾಪ್ ಬೇಕು. ಖರೀದಿಗಾಗಿ ಅಂಗಡಿಗೆ ಹೋಗಿ ಕೇಳಿದಾಗ ಅಲ್ಲಿಯ ಬೆಲೆಗೂ, ಆನ್‌ಲೈನ್ ಮಾರುಕಟ್ಟೆಯ ಬೆಲೆಗೂ ವ್ಯತ್ಯಾಸವಿದೆ, ಒಟ್ಟಾರೆ ಮೊದಲಿಗಿಂತ ಜಾಸ್ತಿಯಿದೆ. ಹಾಗಾಗಿ ಸ್ವಲ್ಪ ಕಷ್ಟವಾಗಿದೆ’ ಎನ್ನುವುದು ವಿದ್ಯಾರ್ಥಿಗಳ ಗೋಳು.
ಲಾಕ್‌ಡೌನ್‌ನಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳು ಪ್ರಾರಂಭವಾಗಿದ್ದು, ಶಾಲಾ-ಕಾಲೇಜು ಕೆಲಸಗಳಿಗೆ ಫೋನ್ ಹಾಗೂ ಲ್ಯಾಪ್-ಟಾಪ್ ಅತ್ಯಗತ್ಯವಾಗಿದೆ. ಆದರೆ ಬೆಲೆ ಏರಿಕೆಯಿಂದ ಇದರ ಖರೀದಿಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಜನರು ಇನ್ನೂ ಸ್ವಲ್ಪ ದಿನ ಖರೀದಿಗಾಗಿ ಕಾಯಬೇಕಾಗಿದೆ. ಹಾಗಾಗಿ ಈ ಬೆಲೆ ಏರಿಕೆ ಗ್ರಾಹಕರಿಗೆ ಕಷ್ಟವಾಗಿದ್ದು, ಅವರನ್ನು ಚಿಂತೆಗೀಡುಮಾಡಿದೆ.
- ವಿಧಾತ್ರಿ ಭಟ್, ಉಪ್ಪುಂದ