ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿನ ವಿದ್ಯಾರ್ಥಿ ಯೋಗೀಂದ್ರ ಮರವಂತೆ ಅವರ ಅಂಕಣ ಬರಹಗಳ ಸಂಕಲನ ’ಲಂಡನ್ ಡೈರಿ’ಗೆ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಬಂದ ಸಂದರ್ಭವನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೆಳೆಯರು ವಿಶಿಷ್ಟವಾಗಿ ಸಂಭ್ರಮಿಸಿದರು. ಉದ್ಯೋಗ ನಿಮಿತ್ತ ಇಂಗ್ಲೆಂಡ್‌ನಲ್ಲಿರುವ ಯೋಗೀಂದ್ರ ಅವರನ್ನು ವೆಬೆಕ್ಸ್ ಜಾಲಸಂಪರ್ಕ ಮೂಲಕ ಕೂಡಿಕೊಂಡು ಅಭಿನಂದನ ಕಾರ್ಯಕ್ರಮ ನಡೆಸಿ, ಅವರೊಂದಿಗೆ ಸಂವಾದ ನಡೆಸಿದರು.
ಊರ ಸಂಪ್ರದಾಯದಂತೆ ಆರಂಭದಲ್ಲಿ ಅನಿತಾ ಆರ್. ಕೆ. ಪ್ರಾರ್ಥನೆ ಹಾಡಿದರು. ಅಧ್ಯಕ್ಷ ರವಿ ಮಡಿವಾಳ ಸ್ವಾಗತಿಸಿದರು. ಕೋಶಾಧಿಕಾರಿ ಕರುಣಾಕರ ಆಚಾರ್ಯ ಕಾರ್ಯಕ್ರಮದ ಔಚಿತ್ಯ ವಿವರಿಸಿದರು.
ಯೋಗೀಂದ್ರ ಆರಂಭಿಕ ಪ್ರತಿಕ್ರಿಯೆಯಲ್ಲಿ ವರ್ಷವೂ ಎರಡು ಬಾರಿ ಊರಿಗೆ ಭೇಟಿನೀಡುತ್ತಿದ್ದ ತಮಗೆ ಕೊರೊನಾ ಸೃಷ್ಟಿಸಿರುವ ಸಂಕಷ್ಟದ ಸ್ಥಿತಿಯಲ್ಲಿ ಅದು ಸಾಧ್ಯವಾಗಿಲ್ಲ. ತಮಗೆ ಪುಟ್ಟ ಪುರಸ್ಕಾರ ದೊರೆತುದನ್ನು ನೆಪವಾಗಿರಿಸಿಕೊಂಡು ಊರ ಗೆಳೆಯರು ನಡೆಸಿದ ಕಾರ್ಯಕ್ರಮ ಆ ಕೊರತೆಯನ್ನು ಕ್ಷಣ ಕಾಲ ಮರೆಯುಂತೆ ಮಾಡಿದೆ ಎಂದರು.
ಸಂಘದ ಸದಸ್ಯರಾದ ದಯಾನಂದ ಬಳೆಗಾರ, ಸತೀಶ್ ಗಂಗೊಳ್ಳಿಯರಮನೆ, ಸಂತೋಷ ಮೊಗವೀರ ಅಭಿನಂದಿಸಿದರು.
ಯೋಗೀಂದ್ರ ಅಂಕಣ ಬರಹಗಳನ್ನು ತಪ್ಪದೆ ಓದುತ್ತಿದ್ದ ದೇವಿದಾಸ ಶಾನುಭೋಗ್, ಸಂಕಲನವಾಗಿ ಅವುಗಳನ್ನು ಒಮ್ಮಲೇ ಓದಿದಾಗಿನ ಅನ್ನಿಸಿಕೆಗಳನ್ನು ಹಂಚಿಕೊಂಡರು. ವಿದೇಶಕ್ಕೆ ಪ್ರವಾಸ ಹೋಗಿ ಅಲ್ಲಿನ ಅನುಭವ ಬರೆಯುವುದಕ್ಕೂ ಅಲ್ಲೇ ನೆಲೆಸಿ ಅಲ್ಲಿನ ನೆಲ, ಜಲ, ಬದುಕನ್ನು ಅನುಭವಿಸಿ ಬರೆಯುವುದಕ್ಕೂ ವ್ಯತ್ಯಾಸ ಏನು ಎನ್ನುವುದನ್ನು ಅದು ತೋರಿಸಿಕೊಟ್ಟಿದೆ ಎಂದರು.
’ಆಂಗ್ಲರ ಕನ್ನಡಕದಲ್ಲಿ ಇಂಡಿಯಾ’ ಎಂಬ ಬರಹದಲ್ಲಿ ಆಂಗ್ಲರು ಯಥೇಚ್ಛವಾಗಿ ಇಷ್ಟಪಡುವ ಬಿಸಿಲು, ಬೀಚ್, ಬೀಯರ್ ಅನುಭವಿಸಲು ಭಾರತಕ್ಕೆ ಪ್ರವಾಸ ಬರುತ್ತಾರೆ ಎಂಬ ಅಂಶ ಬಿಬಿಸಿ ಚಾನೆಲ್ ಕಣ್ಣಲ್ಲಿ ಭಾರತವನ್ನು ಕಂಡಂತಿದೆ ಎಂಬ ಮಂಜುನಾಥ ಮಧ್ಯಸ್ಥ ಅವರ ಟಿಪ್ಪಣಿಗೆ ಆಂಗ್ಲರು ಪ್ರಕೃತಿ, ಸಂಗೀತ, ಅಧ್ಯಾತ್ಮ, ಯೋಗ, ಊಟೋಪಚಾರ ಕಾರಣಗಳಿಗೂ ಭಾರತಕ್ಕೆ ಹೋಗುತ್ತಾರೆ. ಆದರೆ ಬಿಸಿಲು, ಬೀಚ್ ಮತ್ತು ಪಾನೀಯಗಳ ಸಾಂಗತ್ಯದ ಸೆಳೆತಕ್ಕೊಳಗಾಗುವವರ ಸಂಖ್ಯೆ ಅಧಿಕ ಎಂದು ಯೋಗೀಂದ್ರ ಸಮಜಾಯಿಷಿ ನೀಡಿದರು.
ಆಂಗ್ಲರ ಶಾಲೆ, ಕಲಿಕಾವಧಿಯಲ್ಲಿ ವಿದ್ಯಾರ್ಥಿ-ಶಿಕ್ಷಕ ಸಂಬಂಧ, ಕಲಿಕೋತ್ತರ ಕಾಲದಲ್ಲಿ ಪೋಷಕ-ಶಾಲೆ ಸಂಬಂಧಗಳ ಕುರಿತ ಗೆಳೆಯರ ಊರ ಪ್ರಶ್ನೆಗಳಿಗೆ ಯೋಗೀಂದ್ರ ಉತ್ತರಿಸಿ ಆ ವಿಚಾರಗಳಲ್ಲಿ ಅವರು ಕಂಡುಕೊಂಡ ಎರಡು ದೇಶಗಳ ನಡುವಿನ ಅಂತರವನ್ನು ವಿವರಿಸಿದರು. ಉಭಯರೂ ಕಾರ್ಯಕ್ರಮ ಅಪೂರ್ವ ಅನುಭವ ನೀಡಿತು ಎಂದು ಪರಸ್ಪರರ ಬೆನ್ನು ತಟ್ಟಿದರು.















