ಕುಂದಾಪುರ: ಸಾಮಾನ್ಯ ಕುಟುಂಬದಲ್ಲಿ ಜನಿಸಿ ತನ್ನ ಮೇರು ವ್ಯಕ್ತಿತ್ವದಿಂದ ಜಗತ್ತಿನ ಆದರಣೆಗೆ ಪಾತ್ರರಾಗಿ ಕೋಟ್ಯಾಂತರ ಭಾರತೀಯರ ಸ್ಫೂರ್ತಿಯ ಸೆಲೆಯಾದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕಿನ ದಾರಿ ರೋಮಾಂಚನ ಮೂಡಿಸುತ್ತದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ, ಅನುಸರಿಸುವಂತಹ ಮಾದರಿ ವ್ಯಕ್ತಿತ್ವ ಅವರದು ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರ ಫೆರ್ರಿ ರಸ್ತೆಯಲ್ಲಿರುವ ರೋಟರಿ ನರ್ಸರಿ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸುತ್ತಾ ಮಾತನಾಡಿದರು.
ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಕೆ. ಆರ್. ನಾಯ್ಕ್, ಡಾ. ಹೆಚ್.ಎಸ್. ಮಲ್ಲಿ, ಪಿ.ಡಿ.ಜಿ. ಎ.ಎಸ್.ಎನ್. ಹೆಬ್ಬಾರ್, ನ್ಯಾಯವಾದಿ ಟಿ.ಬಿ.ಶೆಟ್ಟಿ, ಪರಮೇಶ್ವರ್ ಹೆಗ್ಡೆ, ಪತ್ರಿಕೋದ್ಯಮದ ವಿದ್ಯಾರ್ಥಿನಿ ಸೌಮ್ಯ ಮದ್ದುಗುಡ್ಡೆ ಮುಂತಾದ ಗಣ್ಯರು ನುಡಿನಮನ ಸಲ್ಲಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಭ್ಯಾಗತರನ್ನು ಸ್ವಾಗತಿಸುತ್ತಾ ಕಲಾಂರ ಸ್ಪೂರ್ತಿಯ ನುಡಿಮುತ್ತುಗಳನ್ನು ಯುವ ಜನತೆಗೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಅದಕ್ಕಾಗಿ ಶ್ರಮಿಸೋಣ ಎಂದು ನುಡಿದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.