ಕೋವಿಡ್ ಹಾಗೂ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಈ ಬಾರಿಯ ದೀಪಾವಳಿಗೆ ಹಸಿರು ಪಟಾಕಿಯಷ್ಟನ್ನೇ ಮಾರಾಟ ಮಾಡಬೇಕು ಎಂದು ಸರಕಾರ ಸ್ಪಷ್ಟವಾಗಿ ಸೂಚನೆ ನೀಡಿದೆ. ಆದರೆ, ಯಾವುದು ಹಸಿರು ಪಟಾಕಿ? ಅದು ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗಳು ದೀಪಾವಳಿ ಹೊಸ್ತಿಲಿನಲ್ಲಿ ಸಾರ್ವಜನಿಕರನ್ನು ಕಾಡುತ್ತಿವೆ.
ಹಸಿರು ಪಟಾಕಿ ಅಂದ್ರೆ ಏನು?
ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರಚೆಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಸರಕಾರ ಹೇಳಿದೆ. ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿ. ಹಸಿರು ಪಟಾಕಿಯು ಕಡಿಮೆ ಹೊಗೆಯನ್ನು ಹರಡುತ್ತದೆ. ಈ ಪಟಾಕಿ ಸಾಮಾನ್ಯ ಪಟಾಕಿಗಿಂತ ಶೇ. 30ರಷ್ಟು ಮಾತ್ರ ಮಾಲಿನ್ಯ ಮಾಡುತ್ತದೆ. ಹಸಿರು ಪಟಾಕಿಗಳು ಧೂಳೆಬ್ಬಿಸುವುದಿಲ್ಲ, ಇವನ್ನು ಗುರುತಿಸುವುದು ಸಲೀಸಾಗುವಂತೆ ಕ್ಯೂಆರ್ ಕೋಡ್ ಹಾಕಲಾಗಿರುತ್ತದೆ. ಈ ಬಾರಿ ಸಿಎಸ್ಐಆರ್-ನೀರಿ ಸಂಸ್ಥೆಗಳಿಂದ ಮಾನ್ಯತೆ ಪಡೆದಿರುವ ಕಂಪನಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಹಸಿರು ಪಟಾಕಿಯಲ್ಲಿ ಮಕ್ಕಳ ಕ್ಯಾಪ್ ಪಟಾಕಿ, ಸುರುಸುರು ಕಡ್ಡಿ, ನೆಲಚೆಕ್ರ, ಕುಂಡ ಮೊದಲಾದವು ಸೇರಿವೆ. ಕುಂದಾಪ್ರ ಡಾಟ್ ಕಾಂ ಮಾಹಿತಿ.
CSIR ಮತ್ತು NEERI ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿಯನ್ನು ಅಭಿವೃದ್ದಿ ಪಡಿಸಿವೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ 2018ರಲ್ಲಿ ಹಸಿರು ಪಟಾಕಿಗಳನ್ನು ಅಭಿವೃದ್ಧಿ ಮಾಡಲಾಯಿತು. ಲಿಥಿಯಂ, ಲೆಡ್ (ಸೀಸ), ಆರ್ಸೆನಿಕ್ ಮತ್ತು ಬೇರಿಯಂನಂಥ ಹಾನಿಕಾರಕ ಕೆಮಿಕಲ್ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ. ಪಟಾಕಿ ಸಿಡಿಸಿದ ಪ್ರದೇಶದಿಂದ 4 ಮೀಟರ್ ದೂರದಲ್ಲೂ ಅದರ ಶಬ್ದದ ಪ್ರಮಾಣ 125 ಡೆಸಿಬಲ್ಸ್ ಇದ್ದಲ್ಲಿ ಅಂಥಹ ಪಟಾಕಿಯ ಬಳಕೆಯನ್ನು ಸರಕಾರ ನಿಷೇಧಿಸಿದೆ.
ಖರೀದಿಸುವವರಿಗೆ ಎಚ್ಚರಿಕೆ:
ಗ್ರಾಹಕರು ಹಸಿರು ಪಟಾಕಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹಸಿರು ಪಟಾಕಿ ಬಾಕ್ಸ್ ಮೇಲೆ NEERI ಮತ್ತು PESO ಲಾಂಛನ ಇರುತ್ತದೆ. ನಿಮ್ಮ ಮೊಬೈಲ್ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಸಿರು ಪಟಾಕಿಯನ್ನು NEERI ಲ್ಯಾಬ್ ಫಾರ್ಮುಲಾದ ಪ್ರಕಾರ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದೆ. ಕುಂದಾಪ್ರ ಡಾಟ್ ಕಾಂ ಮಾಹಿತಿ.
ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು, ನಿಷೇಧಿತ ಪಟಾಕಿಯನ್ನು ಮಾರಾಟ ಮಾಡಿದ್ದಲ್ಲಿ ಅಂತಹ ಅಂಗಡಿಗಳ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ಪಟಾಕಿ ಕೊಳ್ಳುವಾಗ ಹಸಿರು ಪಟಾಕಿ ಎಂಬುದರ ಬಗ್ಗೆ ಪರಿಶೀಲಿಸಿ ಖರೀದಿಸಬೇಕ. ಪಟಾಕಿ ಸಿಡಿಸುವ ಸಮಯವನ್ನು ಸರ್ಕಾರದ ಅದೇಶದಂತೆ ರಾತ್ರಿ 8 ರಿಂದ 10ರ ವರಗೆ ಮಾತ್ರ ಸಿಡಿಸಬೇಕು. ನಿಗದಿತ ಅವಧಿಗಿಂತ ಮುಂಚೆ ಹಾಗೂ ನಿಗಧಿತ ಅವಧಿಯ ನಂತರ ಪಟಾಕಿ ಸಿಡಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ (ದೀಪಾವಳಿ ಹಬ್ಬ ಆಚರಣೆಯ ಕುರಿತು ನಡೆದ ಸಭೆಯಲ್ಲಿ ನೀಡಿದ ಹೇಳಿಕೆ)
► ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಮತ್ತು ಮಹತ್ವ – https://kundapraa.com/?p=18564 .