ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿಯೇ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಭಾವನೆಯಿಂದ ಕಾರ್ಯನಿರ್ವಹಿಸಿದಾಗ ಜೀವನದುದ್ದಕ್ಕೂ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾದ್ಯವಾಗುವ ಜೊತೆಗೆ ಬದುಕು ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಇಂಟರ‍್ಯಾಕ್ಟ್ ಕ್ಲಬ್ ನಿಮ್ಮೊಳಗೆ ನಾಯಕತ್ವವನ್ನು ಬೆಳಸುವ ಜೊತೆಗೆ ಸೇವಾ ಮನೋಭಾವನೆಯನ್ನು ವೃದ್ಧಿಸಿ ಸಮಾನತೆಯನ್ನು ಕಲಿಸುತ್ತದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಚಿತ್ತೂರಿನ ಸರಕಾರಿ ಫ್ರೌಢ ಶಾಲೆಯಲ್ಲಿ ಇಂಟರ‍್ಯಾಕ್ಟ್ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಅಜೇಯ್ ಅವರಿಗೆ ಪದಪ್ರದಾನ ನೆರವೇರಿಸಿ, ಸ್ವಚ್ಚ ಭಾರತ ಅಭಿಯಾನದಲ್ಲಿ ಇಂಟರ‍್ಯಾಕ್ಟ್ ಸದಸ್ಯರು ತಮ್ಮನ್ನು ತೊಡಗಿಸಿಕೊಂಡು ತಮ್ಮ ತಮ್ಮ ಪರಿಸರವನ್ನು ಸ್ವಚ್ಚ, ಸುಂದರವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿ ಎಂದು ಕಿವಿಮಾತು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಪೂಜಾರಿ, ಫ್ರೌಢ ಶಾಲೆ ಮುಖ್ಯೋಪಧ್ಯಾಯಿನಿ ತಾರಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಶೆಟ್ಟಿ, ಇಂಟರ‍್ಯಾಕ್ಟ್ ಕ್ಲಬ್ ಕೋ-ಆರ್ಡಿನೇಟರ್ ಸದಾಶಿವ ಕುಂಬಾರ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಅಧ್ಯಾಪಕ ದಯಾನಂದ ಕೆ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.