ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಮದುವೆಯಾದ ಹೊಸತರಲ್ಲಿ ಸುತ್ತಾಟ, ಹನಿಮೂನ್ ಎನ್ನುವವರ ನಡುವೆ ಈ ಜೋಡಿ ಮಾತ್ರ ಭಿನ್ನವಾಗಿ ನಿಲ್ಲುತ್ತದೆ. ಬೈಂದೂರು ಸೋಮೇಶ್ವರದ ಕಡಲತೀರ ಸ್ವಚ್ಛಗೊಳಿಸಬೇಕು ಎಂಬ ಸಂಕಲ್ಪತೊಟ್ಟ ನವ ದಂಪತಿಗಳಾದ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ಮದುವೆಯ ಸಂಭ್ರಮದೊಂದಿಗೆ ಸಾಮಾಜಿಕ ಬದ್ಧತೆಯನ್ನು ಮೆರೆದು ಇತರರಿಗೂ ಮಾದರಿಯಾಗಿದ್ದಾರೆ.
ಬೈಂದೂರು ತಾಲೂಕಿನ ಕಳವಾಡಿಯವರಾದ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ತಮ್ಮದೇ ಸ್ವುಡಿಯೋ1 ಪ್ರೊಡಕ್ಷನ್ ಮೂಲಕ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ಈರ್ವರು ನ.18 ರಂದು ಮದುವೆಯಾಗಿದ್ದರು. ತಮ್ಮ ಮದುವೆಯ ನೆನಪು ಬಹುಕಾಲ ಉಳಿಯಬೇಕು ಎಂದು ನಿರ್ಧರಿಸಿದ್ದ ದಂಪತಿಗಳು, ವೆಡ್ಡಿಂಗ್ ಚಾಲೆಂಜ್ ಆಗಿ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು. ಅದಕ್ಕಾಗಿ ಹನಿಮೂನ್ ಪ್ಲಾನ್ ಕೂಡ ಮುಂದೂಡಿದರು. ಕುಂದಾಪ್ರ ಡಾಟ್ ಕಾಂ.
ಬೀಚ್ ಸ್ವಚ್ಛತೆಯ ಪಣತೊಟ್ಟ ದಂಪತಿಗಳು ನ.27ರಿಂದ ಪ್ರತಿದಿನ ಸಂಜೆ 2ಗಂಟೆ ಶ್ರಮದಾನ ಮಾಡಿ ತೀರದಲ್ಲಿ ಬಿದ್ದಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ ಹೀಗೆ 9 ದಿನಗಳ ಅವಧಿಯಲ್ಲಿ ಹೀಗೆ ಸುಮಾರು 800ಕೆ.ಜಿಯಷ್ಟು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ದಂಪತಿಗಳ ಕಾರ್ಯವನ್ನು ಮೆಚ್ಚಿ ಸ್ಥಳೀಯರು ಕೈಜೋಡಿಸಿದ್ದಾರೆ. ಶ್ರಮದ ಫಲವಾಗಿ ಇದೀಗ ಸೋಮೇಶ್ವರ ಕಡಲತೀರ ಭಾಗಶಃ ಸ್ವಚ್ಛಗೊಂಡಿದೆ.
ವೆಡ್ಡಿಂಗ್ ಚಾಲೆಂಗ್ ಆಗಿ ಬೀಚ್ ಸ್ವಚ್ಛತೆಯನ್ನು ಕೈಗೆತ್ತಿಕೊಂಡೆವು. ಕಳೆದ ಕೆಲವು ದಿನಗಳ ಹಿಂದೆ ಆರಂಭಿಸಿದ ಈ ಅಭಿಯಾನಕ್ಕೆ ಎರಡು ದಿನಗಳಿಂದ ಸ್ಥಳೀಯರಾದ ಹಸನ್ ಹಾಗೂ ಅವರ ತಂಡ, ಬೈಂದೂರಿನ ಮಂಜುನಾಥ ಶೆಟ್ಟಿ ಮೊದಲಾದವರು ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಮಿನುಷಾ ಬೇರೆ ಬೇರೆ ಜಾಗೃತಿ ಅಭಿಯಾನ ಆಯೋಜಿಸುವ ಯೋಚನೆ ಇದೆ. – ಅನುದೀಪ್ ಹೆಗ್ಡೆ/ಕುಂದಾಪ್ರ ಡಾಟ್ ಕಾಂ./
ಇದನ್ನೂ ಓದಿ:
► ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ ನವ ದಂಪತಿಗಳಿಗೆ ಪ್ರಧಾನಿ ಮೋದಿ ಶ್ಲಾಘನೆ – https://kundapraa.com/?p=43634 . ಅನುದೀಪ್
Wonderful work..