ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಲ್ಲಿಯೇ ಸೃಜನಶೀಲ ಕಲೆಗಳ ಬಗ್ಗೆ ಆಸಕ್ತಿ ವಹಿಸುವುದು ಅವರ ಮುಂದಿನ ಬದುಕಿಗೆ ನೆರವಾಗಲಿದೆ. ಯಾವುದೇ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಳ್ಳುವುದಷ್ಟೇ ಮುಖ್ಯವಲ್ಲ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಕೂಡ ಗೆಲುವೇ ಆಗಿದೆ ಎಂದು ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣದ ಸಂಪಾದಕ ಸುನಿಲ್ ಹೆಚ್. ಜಿ. ಹೇಳಿದರು.
ಅವರು ಕುಂದಾಪುರ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕಿರುಚಿತ್ರ ಸ್ಪರ್ಧೆಯ ಕಿರುಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕಾದರೆ ಅದನ್ನು ಇನ್ಯಾರಿಂದಲೋ ನಿರೀಕ್ಷಿಸುವ ಬದಲಿಗೆ ನಾವೇ ಬದಲಾವಣೆಗೆ ಸಾಕ್ಷಿಯಾಗಬೇಕಿದೆ ಎಂದರು.
ಪ್ರಾಂಶುಪಾಲರಾದ ಡಾ. ಶಮೀರ್ ಅವರು ಮಾತನಾಡಿ ಕೇವಲ ವಿದ್ಯಾಭ್ಯಾಸ ಮಾತ್ರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ಅದರ ಜೊತೆಗೆ ಇತರ ಸಾಫ್ಟ್ ಸ್ಕಿಲ್‌ಗಳು ಕೂಡ ಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ವಿದ್ಯಾರ್ಥಿ ಕಾಂದರ್ಶಿ ಮೊಹಮ್ಮದ್ ಶುವೈದ್ ತೃತೀಯ ಬಿ.ಕಾಂ , ಸಹ ಕಾಂದರ್ಶಿ ಮೊಹಮ್ಮದ್ ಹಯಾಝ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೋ. ಮಾಲತಿ ವಾಣಿಜ್ಯ ಸಂಘದ ಧ್ಯೇಯೋದ್ದೇಶ ಮತ್ತು ಮುಂದಿನ ಯೋಜನೆಗಳನ್ನು ಪ್ರಸ್ತಾವಿಸಿ ಅತಿಥಿಗಳನ್ನು ಸ್ವಾಗತಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಗುರುರಾಜ್ ಅತಿಥಿಗಳನ್ನು ಪರಿಚಯಿಸಿದರು, ಪ್ರಥಮ ಬಿ.ಕಾಂ ವಿದ್ಯಾರ್ಥಿ ಸಾಹಿಲ್ ವಂದಿಸಿ, ತೃತೀಯ ಬಿ.ಕಾಂ ವಿದ್ಯಾರ್ಥಿ ಶಫಿಯತ್ ಕಾರ್ಯಕ್ರಮವನ್ನು ನಿರೂಪಿಸಿದರು.