ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಕೆಲವು ದಿನಗಳಿಂದ ಮರವಂತೆಯಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಮುಂದುವರಿದಿದ್ದು ಬುಧವಾರ ರಾತ್ರಿ ಮರವಂತೆ ಕರಾವಳಿಯ ಬ್ರೇಕ್ ವಾಟರ್ ಉತ್ತರ ದಿಕ್ಕಿನಲ್ಲಿದ್ದ ದಿನಕರ ಖಾರ್ವಿ ಎಂಬುವರಿಗೆ ಸೇರಿದ್ದ ಮೀನುಗಾರಿಕಾ ಶೆಡ್ ಸಮುದ್ರ ಪಾಲಾಗಿದೆ.
ಮೀನುಗಾರಿಕಾ ಶೆಡ್ ಹಾಗೂ ಮೀನುಗಾರಿಕಾ ಸಲಕರಣೆಗಳು ಸಮುದ್ರ ಪಾಲಾಗಿದ್ದು ಸುಮಾರು 4 ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಮರವಂತೆಯಲ್ಲಿ ಅರ್ಧದಲ್ಲೇ ಸ್ಥಗಿತವಾಗಿರುವ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರಕ್ಕಿರುವ ಈ ಪ್ರದೇಶದಲ್ಲಿ ಹಿಂದಿನ ಮಳೆಗಾಲದಲ್ಲಿ ಆರಂಭವಾದ ಕೊರೆತ ಮಳೆಗಾಲದ ಬಳಿಕವೂ ಮರುಕಳಿಸುತ್ತಲೇ ಇದೆ. ಸಾಮಾನ್ಯವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಕೆಲವೆಡೆ ಸಮುದ್ರ ಪ್ರಕ್ಷುಬ್ಧಗೊಂಡು, ಅಲೆಗಳ ರಭಸ ಹೆಚ್ಚಿ, ತೀರದ ಮೇಲೆ ದಾಳಿ ನಡೆಸುತ್ತವೆ. ಮಂಗಳವಾರ ಹುಣ್ಣಿಮೆ ಇದ್ದುದರಿಂದ ಬುಧವಾರ ಅದರ ಪ್ರಭಾವ ಕಂಡುಬಂದಿದೆ. ಇಲ್ಲಿ ಕೆಲವು ತೆಂಗಿನ ಮರಗಳು ಉರುಳಿವೆ. ಹಲವು ಮರಗಳ ಬುಡದ ಮಣ್ಣು ಅಲೆಗಳಿಗೆ ಸಿಲುಕಿ ನಶಿಸುತ್ತಿರುವುದರಿಂದ ಸಮುದ್ರದ ಅಬ್ಬರ ಇನ್ನೂ ಒಂದೆರಡು ದಿನ ಮುಂದುವರಿದರೆ ಹತ್ತಾರು ಮರಗಳು ಉರುಳಲಿವೆ. ಸನಿಹದಲ್ಲೇ ಹಾದು ಹೋಗುವ ಕರಾವಳಿ ಮಾರ್ಗವೂ ಅಪಾಯಕ್ಕೆ ಸಿಲುಕಲಿದೆ. ಮಾರ್ಗದ ಪೂರ್ವ ದಿಕ್ಕಿನಲ್ಲಿ ಸುಮಾರು 50 ಮೀನುಗಾರರ ಮನೆಗಳಿದ್ದು, ಈ ಪ್ರದೇಶದಲ್ಲಿ ಬಿಟ್ಟುಬಿಟ್ಟು ನಡೆಯುತ್ತಿರುವ ಕಡಲ್ಕೊರೆತದಿಂದ ನಿವಾಸಿಗಳು ಆತಂಕಿತರಾಗಿದ್ದಾರೆ.